‘ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದಿದ್ದ ಮನಮೋಹನ್ ಸಿಂಗ್
ನವದೆಹಲಿ (ಪಿಟಿಐ): ‘ಚುನಾವಣಾ ಆಯೋಗವು ಕೇವಲ ಭಾರತದ ಹೆಮ್ಮೆಯಲ್ಲ, ಅದು ದೇಶದ ಪ್ರಜಾಪ್ರಭುತ್ವದ ಆತ್ಮ ಮತ್ತು ನಾವು ಅದನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ’.ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2012ರಲ್ಲಿ ಅಂದಿನ ಮುಖ್ಯ ಚುನಾವಣಾ ಆಯುಕ್ತರಾಗಿದ್ದ (ಸಿಇಸಿ) ಎಸ್.ವೈ ಖುರೇಷಿ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಹೇಳಿದ ಮಾತ

ನವದೆಹಲಿ (ಪಿಟಿಐ): ‘ಚುನಾವಣಾ ಆಯೋಗವು ಕೇವಲ ಭಾರತದ ಹೆಮ್ಮೆಯಲ್ಲ, ಅದು ದೇಶದ ಪ್ರಜಾಪ್ರಭುತ್ವದ ಆತ್ಮ ಮತ್ತು ನಾವು ಅದನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ’.ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2012ರಲ್ಲಿ ಅಂದಿನ ಮುಖ್ಯ ಚುನಾವಣಾ ಆಯುಕ್ತರಾಗಿದ್ದ (ಸಿಇಸಿ) ಎಸ್.ವೈ ಖುರೇಷಿ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಹೇಳಿದ ಮಾತುಗಳಿವು. ಈ ಸಂಭಾಷಣೆ ವಿವರವನ್ನು ಖುರೇಷಿಯವರ ಮುಂಬರುವ ಪುಸ್ತಕ ‘ಇಂಡಿಯಾ ಆ್ಯಂಡ್ ಐ: ಎ ಹಂಡ್ರೆಡ್ ಮೆಮೊರೀಸ್, ನಾಟ್ ಎ ಮೆಮೊಯಿರ್’ನಲ್ಲಿ ದಾಖಲಿಸಲಾಗಿದೆ. 2012ರ ಉತ್ತರ ಪ್ರದೇಶ ಚುನಾವಣಾ ರ್ಯಾಲಿಯಲ್ಲಿ ಆಗ ಕೇಂದ್ರದ ಕಾನೂನು ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್ ಅವರು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗದಲ್ಲಿ ಮುಸ್ಲಿಮರಿಗೆ ಇರುವ ಮೀಸಲಾತಿಯನ್ನು ಶೇಕಡ 4.5ರಿಂದ ಶೇ 9ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಬಿಜೆಪಿ ತಕ್ಷಣವೇ ಆಯೋಗದಲ್ಲಿ ದೂರು ದಾಖಲಿಸಿತು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಹೊಸ ಯೋಜನೆ ಘೋಷಿಸುವಂತಿಲ್ಲ ಎಂದು ಆರೋಪಿಸಿತು.ಈ ಬಗ್ಗೆ ಚುನಾವನಾ ಆಯೋಗ ವಿಚಾರಣೆ ನಡೆಸಿತು. ಕಾಂಗ್ರೆಸ್ ಪಕ್ಷವನ್ನು ಅಭಿಷೇಕ್ ಮನು ಸಿಂಘ್ವಿ ಹಾಗೂ ಬಿಜೆಪಿಯನ್ನು ಅರುಣ್ ಜೇಟ್ಲಿ ಪ್ರತಿನಿಧಿಸಿದರು. ವಿಚಾರಣೆ ನಾಲ್ಕು ದಿನ ನಡೆಯಿತು. ಅಂತಿಮವಾಗಿ, ನೀತಿ ಸಂಹಿತೆಯಡಿ ಕೈಗೊಳ್ಳಬಹುದಾದ ಅತ್ಯಂತ ಬಲವಾದ ಕ್ರಮ ಅಂದರೆ, ಸಚಿವ ಸಲ್ಮಾನ್ ಖುರ್ಷಿದ್ ಅವರಿಗೆ ವಾಗ್ದಂಡನೆ ವಿಧಿಸಲಾಯಿತು ಎಂದು ಖುರೇಷಿ ಹ್ಯಾಚೆಟ್ ಇಂಡಿಯಾ ಪ್ರಕಟಿಸಿರುವ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಈ ಪುಸ್ತಕ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆಅಸಮಾಧಾನಗೊಂಡ ಖುರ್ಷಿದ್, ಸಾಂವಿಧಾನಿಕ ಸಂಸ್ಥೆ ಬಗ್ಗೆ ‘ಲಘು ಮಾತು’ಗಳನ್ನು ಆಡಿದರು. ಆಯೋಗವು ‘ದುರಹಂಕಾರಿ ಮತ್ತು ನಿರಂಕುಶ’ವಾಗಿದೆ ಎಂಬ ಮಾತುಗಳು ಕಾಂಗ್ರೆಸ್ನಿಂದ ಕೇಳಿಬಂದವು. ಆದರೆ, ‘ಇಂತಹ ಟೀಕೆಗಳು ಎಂದಿಗೂ ನನ್ನನ್ನು ಧೃತಿಗೆಡಿಸಲಿಲ್ಲ. ಇದು ಸಾಂಸ್ಥಿಕ ವಿಶ್ವಾಸಾರ್ಹತೆಯನ್ನು ಕಸಿದುಕೊಳ್ಳುವ ವ್ಯಂಗ್ಯೋಕ್ತಿ ಆಗಿತ್ತು. ಆದರೆ, ಇಂತಹ ‘ಲಘು ಮಾತು’ ಸ್ವೀಕಾರಾರ್ಹವಾಗಿರಲಿಲ್ಲ’ ಎಂದು ಖುರೇಷಿ ಪುಸ್ತಕದಲ್ಲಿ ವಿವರಿಸಿದ್ದಾರೆ. ‘ಸ್ವಲ್ಪ ದಿನಗಳ ಬಳಿಕ ವಾರ್ಷಿಕ ಈದ್ ಕೂಟವನ್ನು ಆಯೋಜಿಸಲಾಗಿತ್ತು. ಸಿಇಸಿ ಆಯೋಜಿಸಿದ ಈ ಕೂಟಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರ ಪತ್ರಿಕಾ ಕಾರ್ಯದರ್ಶಿ ಹರೀಶ್ ಖರೆ ಕೂಡ ಬಂದಿದ್ದರು. ನಾನು ಅವರ ಬಳಿ, ಚುನಾವಣಾ ಆಯೋಗದ ಬಗ್ಗೆ ಕೆಲವರು ಆಡಿದ್ದ ಲಘು ಮಾತಿನ ಬಗ್ಗೆ ಪ್ರಸ್ತಾಪಿಸಿದೆ. ಅವರು, ‘ಇದನ್ನು ಪ್ರಧಾನಿ ಬಳಿ ಹೇಳಬೇಕೇ’ ಎಂದು ಕೇಳಿದರು. ನಾನು, ಹೌದು, ಅದಕ್ಕಾಗಿಯೇ ನಿಮ್ಮ ಬಳಿ ಹೇಳುತ್ತಿದ್ದೇನೆ ಎಂದೆ.‘ಮರುದಿನ ಆರ್ಎಎಕ್ಸ್ (ನಿರ್ಬಂಧಿತ ಕರೆ) ಫೋನ್ ರಿಂಗಾಯಿತು. ಅತ್ತ ಕಡೆಯಿಂದ ಪ್ರಧಾನಿ ನಿಮ್ಮೊಂದಿಗೆ ಮಾತನಾಡಲು ಬಯಸುತ್ತಾರೆ ಎಂದರು. ಕೆಲವು ಕ್ಷಣಗಳ ನಂತರ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಪರ್ಕಕ್ಕೆ ಬಂದರು. ‘ಖುರೇಷಿ ಜೀ ನಾನು ನಿಮ್ಮನ್ನು ತುರ್ತಾಗಿ ಭೇಟಿಯಾಗಬಹುದೇ ಎಂದರು. ಅವರ ಧ್ವನಿ ಆತಂಕದಿಂದ ಕೂಡಿತ್ತು. ನಾನು ಹೇಳಿದೆ, ಸರ್, ನೀವು ಪ್ರಧಾನಿ, ನೀವು ಹೇಳಿದ ಸಮಯಕ್ಕೆ ನಾನೇ ಬರುತ್ತೇನೆ ಎಂದೆ. ಅಂದು ಸಂಜೆ 7 ಗಂಟೆಗೆ ಸಮಯ ನಿಗದಿಯಾಯಿತು. ನಾನು ನಿಗದಿತ ಸಮಯಕ್ಕೆ ಪ್ರಧಾನಿ ನಿವಾಸ ತಲುಪಿದೆ. ‘ಡಾ.ಸಿಂಗ್ ಅವರು ಬಾಗಿಲಲ್ಲಿ ಕಾಯುತ್ತಿದ್ದರು. ಅವರು ನನ್ನನ್ನು ಒಳಗೆ ಕರೆದೊಯ್ದು, ನಾವಿನ್ನೂ ಕುರ್ಚಿಯಲ್ಲಿ ಕೂರುವ ಮೊದಲೇ, ನೋವಿನಿಂದ ಹೇಳಿದರು, ‘ಪತ್ರಿಕಾ ಕಾರ್ಯದರ್ಶಿ ಹರೀಶ್ ಅವರು, ನೀವು ಹೇಳಿದ್ದೆಲ್ಲವನ್ನೂ ನನಗೆ ಹೇಳಿದರು. ಇದು ಕಳವಳಕಾರಿ ವಿಷಯ. ನೀವು ಹಾಗೆ ಭಾವಿಸಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದರು. ಒಂದು ಕ್ಷಣ ನಾನು ದಂಗಾಗಿ ಹೋದೆ. ಏನು ಮಾತನಾಡಬೇಕೆಂದು ತೋಚಲಿಲ್ಲ’ ಎಂದು ಖುರೇಷಿ ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.ಮುಂದುವರಿದು, ಸಿಂಗ್ ಅವರು ‘ಚುನಾವಣಾ ಆಯೋಗವು ಕೇವಲ ಭಾರತದ ಹೆಮ್ಮೆಯಲ್ಲ, ಅದು ದೇಶದ ಪ್ರಜಾಪ್ರಭುತ್ವದ ಆತ್ಮ, ನಾವು ಅದನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ’ ಎಂದರು. ಈ ಮಾತು ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ, ನಿಮಗೆ ಯಾವುದೇ ಸಂದರ್ಭದಲ್ಲಿ ಏನಾದರೂ ಹೇಳಬೇಕೆಂದಿದ್ದರೆ ಪೋನ್ ಎತ್ತಿಕೊಂಡು ನನಗೆ ಕರೆ ಮಾಡಿ’ ಎಂದು ಹೇಳಿದರು. ‘ನಾನು ಪ್ರಧಾನಿ ಅವರನ್ನು ಬೀಳ್ಕೊಟ್ಟು ಹೊರಟೆ. ತಕ್ಷಣ ಈ ವಿಷಯವನ್ನು ಪ್ರಧಾನಿ ಅವರ ಕಾರ್ಯದರ್ಶಿ ಟಿ.ಕೆ.ಎ. ನಾಯರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಪತ್ರಿಕಾ ಕಾರ್ಯದರ್ಶಿ ಹರೀಶ್ ಅವರೊಂದಿಗೆ ಹಂಚಿಕೊಂಡೆ. ನಮ್ಮಲ್ಲಿ ಯಾರೂ ಇದನ್ನು ರಹಸ್ಯವಾಗಿ ಪರಿಗಣಿಸಲಿಲ್ಲ. ನಮ್ಮ ದೇಶವನ್ನು ಮುನ್ನಡೆಸುತ್ತಿರುವ ವ್ಯಕ್ತಿಯ ಬಗ್ಗೆ ಇಂಥದೊಂದು ನೋಟ ತುಂಬಾ ಮುಖ್ಯವಾಗಿತ್ತು’ ಎಂದು ಅವರು ವಿವರಿಸಿದ್ದಾರೆ. ಜೀವಂತ ನಂಬಿಕೆಯಾಗಿತ್ತು- ಎಸ್.ವೈ. ಖುರೇಷಿ‘ಸಿಂಗ್ ಅವರಿಗೆ ಚುನಾವಣಾ ಆಯೋಗದ ಬಗ್ಗೆ ಇದ್ದಂತ ಅಪಾರ ಗೌರವವನ್ನು ಖುರೇಷಿ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ. ಚುನಾವಣಾ ಆಯೋಗವನ್ನು ‘ಭಾರತದ ಹೆಮ್ಮೆ ಮತ್ತು ದೇಶದ ಮೇಲೆ ಪ್ರಭಾವ ಬೀರುವ ಮೃದು ಶಕ್ತಿ’ ಎಂದು ಸಿಂಗ್ ನಿರಂತರವಾಗಿ ಹೊಗಳುತ್ತಿದ್ದರು. ಅವರಿಗೆ ಸಾಂವಿಧಾನಿಕ ಔಚಿತ್ಯವು ಕೇವಲ ಮಾತನಾಡುವ ವಿಷಯವಾಗಿರಲಿಲ್ಲ ಬದಲಿಗೆ ಜೀವಂತ ನಂಬಿಕೆಯಾಗಿತ್ತು. ಇಂತಹ ನಾಯಕನನ್ನು ಎದುರಿಸಿದಾಗ ನಿಜಕ್ಕೂ ಆಘಾತಗೊಂಡಿದ್ದೆ’ ಎಂದು ಎಸ್.ವೈ. ಖುರೇಷಿ ಹೇಳಿದ್ದಾರೆ. ‘ನನ್ನ ಜೀವನದಲ್ಲಿ ನಾನು ಅನೇಕ ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಿದ್ದೇನೆ. ಆದರೆ ಮನಮೋಹನ್ ಸಿಂಗ್ ಅವರು ಅಪರೂಪದ ಸಂವೇದನೆ ಮತ್ತು ಸಾಂವಿಧಾನಿಕ ಜವಾಬ್ದಾರಿಯ ಆಳವಾದ ಪ್ರಜ್ಞೆಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು’ ಎಂದು ಖುರೇಷಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಖುರೇಷಿ ಅವರು 2010ರ ಜುಲೈ 30ರಿಂದ 2012ರ ಜೂನ್ 10ರವರೆಗೆ ಸಿಇಸಿ ಆಗಿದ್ದರು.