ಭಾರತದ ಹೆಸರು, ಅಮೆರಿಕ ಗುರಿ: ಮಾತಿನಲ್ಲಿಯೇ ವಿಶ್ವದ ದೊಡ್ಡಣ್ಣನ ತಿವಿದ ನೆತನ್ಯಾಹು
ಜಾಗತಿಕ ರಾಜಕೀಯ ನಾಯಕರು ನೀಡುವ ಕೆಲವು ಹೇಳಿಕೆಗಳು ಕೇವಲ ಹೇಳಿಕೆಗಳಾಗಿರುವುದಿಲ್ಲ. ಅವುಗಳ ಹಿಂದೆ ಸಂದೇಶಗಳಿರುತ್ತವೆ. ಕೆಲವೊಮ್ಮೆ ಆ ಸಂದೇಶಗಳು ಒಂದು ದೇಶಕ್ಕೆ, ಕೆಲವೊಮ್ಮೆ ಒಬ್ಬ ನಾಯಕನಿಗೆ, ಇನ್ನು ಕೆಲವೊಮ್ಮೆ ಇಡೀ ಜಗತ್ತಿಗೆ ಉದ್ದೇಶಿತವಾಗಿರುತ್ತವೆ. ಇತ್ತೀಚೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತವನ್ನು ಉಲ್ಲೇಖಿಸಿ ನೀಡಿದ ಹೇಳಿಕೆಯೂ ಇದಕ್ಕೊಂದು ನ

ಜಾಗತಿಕ ರಾಜಕೀಯ ನಾಯಕರು ನೀಡುವ ಕೆಲವು ಹೇಳಿಕೆಗಳು ಕೇವಲ ಹೇಳಿಕೆಗಳಾಗಿರುವುದಿಲ್ಲ. ಅವುಗಳ ಹಿಂದೆ ಸಂದೇಶಗಳಿರುತ್ತವೆ. ಕೆಲವೊಮ್ಮೆ ಆ ಸಂದೇಶಗಳು ಒಂದು ದೇಶಕ್ಕೆ, ಕೆಲವೊಮ್ಮೆ ಒಬ್ಬ ನಾಯಕನಿಗೆ, ಇನ್ನು ಕೆಲವೊಮ್ಮೆ ಇಡೀ ಜಗತ್ತಿಗೆ ಉದ್ದೇಶಿತವಾಗಿರುತ್ತವೆ. ಇತ್ತೀಚೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತವನ್ನು ಉಲ್ಲೇಖಿಸಿ ನೀಡಿದ ಹೇಳಿಕೆಯೂ ಇದಕ್ಕೊಂದು ನಿದರ್ಶನವಾಗಿದೆ.ಅಮೆರಿಕ ಮತ್ತು ಇಸ್ರೇಲ್ ಸಂಬಂಧಗಳನ್ನು ಗಮನಿಸಿದರೆ, ಇಸ್ರೇಲ್ನ ಅತ್ಯಂತ ದೊಡ್ಡ ಮಿತ್ರ ರಾಷ್ಟ್ರ ಅಮೆರಿಕ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನೆತನ್ಯಾಹು ಇತ್ತೀಚೆಗೆ ‘ಭಾರತ ನಮ್ಮ ಸ್ನೇಹಿತ’ ಎಂದು ಹೇಳಿದಾಗ, ಅದು ಕೇವಲ ಭಾರತದ ಬಗೆಗಿನ ಮೆಚ್ಚುಗೆಯಾಗಿರಲಿಲ್ಲ. ಅದರ ಹಿಂದೆ ವಿಶ್ವದ ದೊಡ್ಡಣ್ಣನಿಗೆ ಒಂದು ಸಂದೇಶವಿತ್ತು.ಟ್ರಂಪ್ ಮತ್ತು ನೆತನ್ಯಾಹು: ಸ್ನೇಹದಿಂದ ಸೆಣಸಾಟ ಒಂದು ಕಾಲದಲ್ಲಿ ಟ್ರಂಪ್ ಮತ್ತು ನೆತನ್ಯಾಹು ಅವರನ್ನು ವಿಶ್ವ ರಾಜಕಾರಣದಲ್ಲಿ ಜೋಡೆತ್ತುಗಳೆಂದೇ ನೋಡಲಾಗುತ್ತಿತ್ತು. ಟ್ರಂಪ್ ತನ್ನ ಮೊದಲ ಅವಧಿಯಲ್ಲಿ ಜೆರುಸಲೇಂ ಅನ್ನು ಇಸ್ರೇಲ್ನ ರಾಜಧಾನಿಯಾಗಿ ಗುರುತಿಸಿದ್ದು, ಗೋಲನ್ ಹೈಟ್ಸ್ ಮೇಲಿನ ಇಸ್ರೇಲ್ನ ಹಕ್ಕನ್ನು ಒಪ್ಪಿಕೊಂಡಿದ್ದು, ಅಬ್ರಹಾಂ ಒಪ್ಪಂದಗಳಿಗೆ ಬೆಂಬಲ ನೀಡಿದ್ದು ನೆತನ್ಯಾಹುಗೆ ದೊಡ್ಡ ರಾಜಕೀಯ ಗೆಲುವುಗಳಾಗಿದ್ದವು.ಆದರೆ, ರಾಜಕೀಯದಲ್ಲಿ ಶಾಶ್ವತ ಸ್ನೇಹಿತನಿಗಿಂತ ಶಾಶ್ವತ ಹಿತಾಸಕ್ತಿಗಳೇ ಮುಖ್ಯವಾಗುತ್ತವೆ. ಅದಕ್ಕೆ ಇತ್ತೀಚೆಗೆ ನಡೆದ ಇರಾನ್ ಯುದ್ಧವೇ ಉತ್ತಮ ಉದಾಹರಣೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ದಾರಿ ಹುಡುಕುತ್ತಿದ್ದರೇ, ಇರಾನ್ ವಿರುದ್ಧ ಕಠಿಣ ನಿಲುವು ಮುಂದುವರಿಸಲು ನೆತನ್ಯಾಹು ಬಯಸಿದ್ದರು. ಇದು ಇಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಜಗಜ್ಞಾಹೀರುಗೊಳಿಸಿತ್ತು.ಇರಾನ್ ಜೊತೆಗೆ ಮಧ್ಯಂತರ ಒಪ್ಪಂದಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿದ್ದು, ಇಸ್ರೇಲ್ಗೆ ನುಂಗಲಾರದ ತುತ್ತಾಗಿತ್ತು. ಆ ಮಧ್ಯಂತರ ಒಪ್ಪಂದಲ್ಲಿ ಲೆಬನಾನ್ ಅನ್ನು ಸೇರಿಸಿದ್ದು ಅಮೆರಿಕ ಮತ್ತು ಇಸ್ರೇಲ್ ನಡುವೆ ಅಂತರ ಹೆಚ್ಚಲು ಕಾರಣವಾಗಿತ್ತು.ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದನ್ನು ಬಲವಾಗಿ ವಿರೋಧಿಸಿದ್ದ ಟ್ರಂಪ್, ನೆತನ್ಯಾಹು ಅವರನ್ನು ಹುಚ್ಚ ಎಂದು ಕರೆದಿದ್ದರು. ನಿನ್ನಿಂದ(ನೆತನ್ಯಾಹು) ಇಸ್ರೇಲ್ ಜಾಗತಿಕವಾಗಿ ಒಂಟಿಯಾಗುತ್ತಿದೆ ಎಂದು ಹೇಳಿದ್ದರು.ಈ ಎಲ್ಲಾ ಘಟನೆಗಳು ನೆತನ್ಯಾಹು ಬಾಯಲ್ಲಿ ಅಮೆರಿಕದಂತೆ 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತವೂ ನಮ್ಮ ಸ್ನೇಹಿತ ಎಂದು ಹೇಳಿಸಿದ್ದವು. ರಾಜತಾಂತ್ರಿಕ ಭಾಷೆಯಲ್ಲಿ ಅದು ‘ನಮಗೆ(ಇಸ್ರೇಲಿಗರಿಗೆ) ಅಮೆರಿಕ ಮಾತ್ರವೇ ಆಧಾರವಲ್ಲ’ ಎಂಬ ಸಂದೇಶವನ್ನು ಒಳಗೊಂಡಿತ್ತು.ಭಾರತವೇ ಏಕೆ?ನೆತನ್ಯಾಹು ಭಾರತವನ್ನು ಉಲ್ಲೇಖಿಸಿರುವುದು ಆಕಸ್ಮಿಕವೂ ಅಲ್ಲ, ಅಚ್ಚರಿಯೂ ಇಲ್ಲ. ಕಳೆದ ಒಂದು ದಶಕದಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧಗಳು ಹಿಂದೆಂದಿಗಿಂತಲೂ ಗಟ್ಟಿಯಾಗಿವೆ. ಒಂದು ಕಾಲದಲ್ಲಿ ಪ್ಯಾಲೆಸ್ಟೀನ್ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯ ನಿಲುವು ಹೊಂದಿದ್ದ ಭಾರತ, ಈಗ ಇಸ್ರೇಲ್ ಜೊತೆ ರಕ್ಷಣಾ ತಂತ್ರಜ್ಞಾನ, ಕೃಷಿ, ಸೈಬರ್ ಭದ್ರತೆ ಮತ್ತು ಗುಪ್ತಚರ ಸಹಕಾರದಂತಹ ಕ್ಷೇತ್ರಗಳಲ್ಲಿ ನಿಕಟವಾಗಿ ಕೆಲಸ ಮಾಡುತ್ತಿದೆ.ಇಸ್ರೇಲ್ಗೆ ಭಾರತ ಕೇವಲ ಸ್ನೇಹಿತ ರಾಷ್ಟ್ರವಲ್ಲ; ಅದು ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಶಕ್ತಿಗಳಲ್ಲೊಂದು. ಜಾಗತಿಕ ಆರ್ಥಿಕತೆಯಲ್ಲಿ ಭಾರತ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿರುವ ಸಮಯದಲ್ಲಿ, ಇಸ್ರೇಲ್ಗೆ ಭಾರತದೊಂದಿಗೆ ಬಲವಾದ ಸಂಬಂಧವು ಭವಿಷ್ಯದ ಹೂಡಿಕೆಯಂತೆ ಕಾಣುತ್ತದೆ.ಆದ್ದರಿಂದ ನೆತನ್ಯಾಹು ಭಾರತವನ್ನು ಉಲ್ಲೇಖಿಸುವಾಗ, ಇಸ್ರೇಲ್ಗೆ ಅಮೆರಿಕ ಮಾತ್ರ ಗತಿಯಲ್ಲ ಎಂಬ ಸೂಚನೆ ನೀಡಿದ್ದರು.ಕುಂದಿದ ಅಮೆರಿಕ ಶಕ್ತಿ?ಶೀತಲ ಸಮರದ ನಂತರದ ಜಗತ್ತಿನಲ್ಲಿ ಅಮೆರಿಕ ಒಂದು ಏಕೈಕ ಮಹಾಶಕ್ತಿಯಾಗಿತ್ತು. ಆದರೆ ಇಂದಿನ ಪರಿಸ್ಥಿತಿ ವಿಭಿನ್ನವಾಗಿದೆ. ಚೀನಾ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ. ಭಾರತ ಆರ್ಥಿಕ ಮತ್ತು ರಾಜತಾಂತ್ರಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಗಲ್ಫ್ ರಾಷ್ಟ್ರಗಳು ಜಾಗತಿಕ ಹೂಡಿಕೆ ಮತ್ತು ಇಂಧನ ರಾಜಕೀಯದ ಕೇಂದ್ರಗಳಾಗುತ್ತಿವೆ.ಈ ಬದಲಾವಣೆಯ ನಡುವೆ ಇಸ್ರೇಲ್ ಕೂಡ ತನ್ನ ರಾಜತಾಂತ್ರಿಕ ಸಂಬಂಧಗಳನ್ನು ವೈವಿಧ್ಯಗೊಳಿಸಲು ಪ್ರಯತ್ನಿಸುತ್ತಿದೆ. ಒಂದು ಕಾಲದಲ್ಲಿ ಅಮೆರಿಕದ ಬೆಂಬಲವಿಲ್ಲದೆ ಇಸ್ರೇಲ್ ತನ್ನ ಭದ್ರತೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಿತ್ತು. ಆದರೆ ಈಗ ಇಸ್ರೇಲ್ ಭಾರತ, ಯುಎಇ, ಸೌದಿ ಅರೇಬಿಯಾ ಮತ್ತು ಇತರ ದೇಶಗಳೊಂದಿಗೆ ಹೊಸ ತಂತ್ರಾತ್ಮಕ ಸಂಬಂಧಗಳನ್ನು ನಿರ್ಮಿಸುತ್ತಿದೆ. ನೆತನ್ಯಾಹು ಅವರ 'ಭಾರತ ಮಿತ್ರ’ ಹೇಳಿಕೆ ಈ ಹೊಸ ತಂತ್ರದ ಪ್ರತಿಬಿಂಬವಾಗಿದೆ.ಭಾರತದ ಹೆಸರು, ಅಮೆರಿಕ ಗುರಿ:ನೆತನ್ಯಾಹು ಅವರ ಹೇಳಿಕೆಯ ನಿಜವಾದ ಗುರಿ ಭಾರತವಾಗಿರಲಿಲ್ಲ, ಅದು ಅಮೆರಿಕವಾಗಿತ್ತು. ‘ನಾವು ಅಮೆರಿಕದ ಆಪ್ತ ಮಿತ್ರ. ಆದರೆ ನಮ್ಮ ಆಯ್ಕೆಗಳು ಅಲ್ಲಿ ಕೊನೆಗೊಳ್ಳುವುದಿಲ್ಲ’ ಎಂಬ ಪರೋಕ್ಷ ಎಚ್ಚರಿಕೆ ಅಲ್ಲಿತ್ತು. ಹಾಗಂತ ಇದು ರಾಜಕೀಯ ಬೆದರಿಕೆ ಅಲ್ಲ. ಅಮೆರಿಕವನ್ನು ಬಿಟ್ಟು ಭಾರತದ ಕಡೆಗೆ ತಿರುಗುವ ಉದ್ದೇಶವೂ ಇಲ್ಲ. ಬದಲಿಗೆ, ಇಸ್ರೇಲ್ ಈಗ ತನ್ನ ವಿದೇಶಾಂಗ ನೀತಿಯನ್ನು ಹೆಚ್ಚು ಸ್ವತಂತ್ರವಾಗಿ ರೂಪಿಸಲು ಬಯಸುತ್ತಿದೆ ಎಂಬ ಸೂಚನೆ. ರಾಜಕೀಯ ಭಾಷೆಯಲ್ಲಿ ಇದನ್ನು ‘ಸ್ಟ್ರಾಟೆಜಿಕ್ ಸಿಗ್ನಲಿಂಗ್’ ಎಂದು ಕರೆಯುತ್ತಾರೆ. ಅಂದರೆ ನೇರವಾಗಿ ಹೇಳದೇ ಒಂದು ಸಂದೇಶ ತಲುಪಿಸುವುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಭಾರತ–ಇಸ್ರೇಲ್ ಸ್ನೇಹ:ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧ ಕಾಯ್ದುಕೊಂಡಿದ್ದ ಭಾರತ ಇಂದು ಇಸ್ರೇಲ್ಗೆ ಹೆಚ್ಚು ಹತ್ತಿರವಾಗಿದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರ ಗುಂಪು ದಾಳಿ ಮಾಡಿದ ನಂತರ ಈ ಸ್ನೇಹ ಸ್ಪಷ್ಟವಾಗಿ ಗೋಚರವಾಗಿತ್ತು. ಹಮಾಸ್ ದಾಳಿಯನ್ನು ಭಯೋತ್ಪಾದನೆ ಕೃತ್ಯವೆಂದು ಕರೆದ ಪ್ರಧಾನಿ ಮೋದಿ ಅವರು ಇಸ್ರೇಲ್ಗೆ ಬೆಂಬಲ ವ್ಯಕ್ತಪಡಿಸಿದ್ದರು. ಗಾಜಾದ ಮೇಲೆ ಇಸ್ರೇಲ್ ನಿರಂತರ ದಾಳಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಅಂತಹ ಖಂಡನಾತ್ಮಕ ಹೇಳಿಕೆಗಳು ಬಂದಿಲ್ಲ.ಫೆಬ್ರುವರಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಹತ್ಯೆಯಾಗಿದ್ದರು. ವಿಶ್ವದ ಹಲವು ನಾಯಕರು ಈ ಹತ್ಯೆಯನ್ನು ಖಂಡಿಸಿದ್ದರೂ ಭಾರತ ಮೌನವಾಗಿತ್ತು. ಆದರೆ, ಯುಎಇ ಸೇರಿದಂತೆ ಇತರ ನೆರೆಯ ರಾಷ್ಟ್ರಗಳ ಮೇಲೆ ಇರಾನ್ ದಾಳಿ ಮಾಡಿದ್ದನ್ನು ಭಾರತ ಖಂಡಿಸಿತ್ತು.ಹೇಳಿಕೆ ಹಿನ್ನೆಲೆ:‘ಇಸ್ರೇಲ್ಗೆ ಅಮೆರಿಕವೇ ಏಕೈಕ ಮಿತ್ರ ರಾಷ್ಟ್ರ’ ಎಂಬ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿಕೆಯನ್ನು ನೆತನ್ಯಾಹು ಬಲವಾಗಿ ತಳ್ಳಿಹಾಕಿದ್ದರು. ‘ಇಸ್ರೇಲ್ಗೆ 140 ಕೋಟಿ ಭಾರತೀಯರ ಬೆಂಬಲವಿದೆ’ ಎಂದು ತಿರುಗೇಟು ನೀಡಿದ್ದರು.‘ವ್ಯಾನ್ಸ್ ಅವರ ಬಗ್ಗೆ ನನಗೆ ಗೌರವಿದೆ. ಆದರೆ ಅವರ ಎಲ್ಲಾ ಅಭಿಪ್ರಾಯಗಳನ್ನು ನಾನು ಒಪ್ಪುವುದಿಲ್ಲ. ನಮಗೆ ಭಾರತದಂತಹ ದೊಡ್ಡ ರಾಷ್ಟ್ರದ ಬೆಂಬಲವಿದೆ’ ಎಂದು ಹೇಳಿದ್ದರು.‘ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷವಾಗಿ ಫೇಸ್ಬುಕ್ನಲ್ಲಿ ಭಾರತೀಯರು ಇಸ್ರೇಲ್ ಬೆಂಬಲಿಸುತ್ತಾರೆ. ಭಾರತದಲ್ಲಿ ಇಸ್ರೇಲ್ ಪರವಾಗಿ ವ್ಯಕ್ತವಾಗುತ್ತಿರುವ ಜನಾಭಿಪ್ರಾಯವು ತಮ್ಮನ್ನು ಆಶ್ಚರ್ಯಚಕಿತರನ್ನಾಗಿಸಿದೆ’ ಎಂದೂ ಹೇಳಿದ್ದರು.