ಕಲಬುರಗಿಗೆ 24×7 ನೀರು ಯೋಜನೆ; ಜೂ. 2027ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಯತೀಂದ್ರ ಗಡುವು
– ವಿಳಂಬಕ್ಕೆ ಅಸಮಾಧಾನ, ಎಲ್ & ಟಿ ಕಂಪನಿಗೆ ಖಡಕ್ ಎಚ್ಚರಿಕೆ – ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕಲಬುರಗಿ: ಕಲಬುರಗಿ (Kalburgi) ನಗರಕ್ಕೆ 24×7 ನಿರಂತರ ಕುಡಿಯುವ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಯನ್ನು ಜೂನ್ 2027ರೊಳಗೆ ಪೂರ್ಣಗೊಳಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ( Yathindra Siddaramaiah) ಎಲ್ & ಟ

– ವಿಳಂಬಕ್ಕೆ ಅಸಮಾಧಾನ, ಎಲ್ & ಟಿ ಕಂಪನಿಗೆ ಖಡಕ್ ಎಚ್ಚರಿಕೆ – ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕಲಬುರಗಿ: ಕಲಬುರಗಿ (Kalburgi) ನಗರಕ್ಕೆ 24×7 ನಿರಂತರ ಕುಡಿಯುವ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಯನ್ನು ಜೂನ್ 2027ರೊಳಗೆ ಪೂರ್ಣಗೊಳಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ( Yathindra Siddaramaiah) ಎಲ್ & ಟಿ ಕಂಪನಿಗೆ ಗಡುವು ನೀಡಿದ್ದಾರೆ. ಯೋಜನೆ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಬಾರಿ ಯಾವುದೇ ಕಾಲಾವಕಾಶ ವಿಸ್ತರಣೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಜಲ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಈಗಾಗಲೇ ನಾಲ್ಕು ಬಾರಿ ಯೋಜನೆಗೆ ಕಾಲಮಿತಿ ವಿಸ್ತರಣೆ ನೀಡಲಾಗಿದೆ. ಇನ್ನೂ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಜನರಿಗೆ ನೀಡಿದ ಭರವಸೆ ಹೇಗೆ ಈಡೇರಿಸಬೇಕು ಎಂದು ಪ್ರಶ್ನಿಸಿದರು. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸದಿದ್ದರೆ ಕಂಪನಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಗಣತಿ ನಮೂನೆ ಹಿಂದಿರುಗಿಸದಿದ್ರೆ ಕರಡು ಪಟ್ಟಿಯಿಂದ ಮತದಾರರ ಹೆಸರು ಔಟ್: ಚುನಾವಣಾಧಿಕಾರಿ ವಾರ್ನಿಂಗ್ ಪ್ರಸ್ತುತ ನಗರದ 55 ವಾರ್ಡ್ಗಳಲ್ಲಿ 62,767 ಮನೆಗಳ ಪೈಕಿ 30,907 ಮನೆಗಳಿಗೆ ಮಾತ್ರ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ 31,860 ಮನೆಗಳಿಗೆ ಸಂಪರ್ಕ ನೀಡಬೇಕಿದೆ. ಉಳಿದ ಮನೆಗಳಿಗೂ ಶೀಘ್ರದಲ್ಲಿ ಸಂಪರ್ಕ ಕಲ್ಪಿಸಬೇಕು. ಜೊತೆಗೆ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಸೂಚಿಸಿದರು. ಸಭೆಯಲ್ಲಿ ಮಾತನಾಡಿದ ಮೇಯರ್ ವರ್ಷಾ ರಾಜೀವ ಜಾನೆ, ಕಾಮಗಾರಿ ವೇಗಗೊಳಿಸುವ ಬದಲು ಎಲ್ & ಟಿ ಕಂಪನಿ ಇತ್ತೀಚೆಗೆ 50 ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾರ್ಮಿಕರ ಕೊರತೆಯಿಂದಲೇ ಕಾಮಗಾರಿ ವಿಳಂಬವಾಗುತ್ತಿರುವಾಗ ಸಿಬ್ಬಂದಿಯನ್ನು ಕಡಿತಗೊಳಿಸುವುದು ಸರಿಯಲ್ಲ. ಅವರನ್ನು ತಕ್ಷಣವೇ ಮರುನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ನಗರದ ಎಲ್ಲಾ ಭಾಗಗಳಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಪೂರೈಸಲು ನಾರಾಯಣಪುರ ಜಲಾಶಯದಿಂದ ನೀರು ತರಲು 1,850 ಕೋಟಿ ರೂ. ಯೋಜನೆಗೆ ಅನುಮೋದನೆ ಅಗತ್ಯವಿದೆ ಎಂದು ತಿಳಿಸಿದರು. ಭೀಮಾ ನದಿಯಿಂದ ಬರುತ್ತಿರುವ ನೀರಿನ ಗುಣಮಟ್ಟದ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ನಗರದ 40 ವರ್ಷ ಹಳೆಯ ಒಳಚರಂಡಿ ವ್ಯವಸ್ಥೆಯಿಂದ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಇದಕ್ಕೆ ಪರಿಹಾರವಾಗಿ ಸುಮಾರು 700 ಕಿ.ಮೀ. ಹೊಸ ಒಳಚರಂಡಿ ಜಾಲ ನಿರ್ಮಾಣ ಅಗತ್ಯವಿದೆ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಸಮಗ್ರ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಬಾಂಗ್ಲಾದೇಶಿಗರು ಮಂಗಳೂರು ಪೊಲೀಸರ ವಶಕ್ಕೆ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮಾಹಿತಿ ನೀಡಿ, ಕಾಮಗಾರಿ ವಿಳಂಬ ಹಿನ್ನೆಲೆ ಎಲ್ & ಟಿ ಕಂಪನಿಗೆ ಇದುವರೆಗೆ 54 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದರು. ನಗರದಲ್ಲಿ ನೀರಿನ ಕೊರತೆ ಇರುವ ಪ್ರದೇಶಗಳಿಗೆ 35 ಟ್ಯಾಂಕರ್ಗಳ ಮೂಲಕ ಪ್ರತಿದಿನ 150 ಟ್ರಿಪ್ಗಳಲ್ಲಿ ನೀರು ಪೂರೈಸಲಾಗುತ್ತಿದೆ ಎಂದರು. ಆದರೆ ಈ ಸಂಖ್ಯೆ ಸಾಕಾಗುತ್ತಿಲ್ಲ ಎಂದು ಜನಪ್ರತಿನಿಧಿಗಳು ಹೇಳಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಟ್ಯಾಂಕರ್ಗಳನ್ನು ನಿಯೋಜಿಸುವಂತೆ ಸಚಿವರು ಸೂಚಿಸಿದರು. ನಗರದಲ್ಲಿ ಶೇ.100ರಷ್ಟು ಶುದ್ಧ ಕುಡಿಯುವ ನೀರು ಪೂರೈಕೆ, ಮನೆ ಮನೆಗೆ ಕಸ ಸಂಗ್ರಹಣೆ, ಕಸ ವಿಂಗಡಣೆ, ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ಹಾಗೂ ಬೀದಿ ನಾಯಿಗಳಿಗೆ ಆಶ್ರಯ ಕೇಂದ್ರ ನಿರ್ಮಾಣಕ್ಕೂ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದೇ ವೇಳೆ ಸಾರ್ವಜನಿಕ ಸೇವೆಗಳಲ್ಲಿ ವಿಳಂಬವಾಗದಂತೆ ಕ್ರಮವಹಿಸಲು, ಜನರ ಕುಂದುಕೊರತೆಗಳನ್ನು ಆಲಿಸಲು ಪ್ರತ್ಯೇಕ ವ್ಯವಸ್ಥೆ ರೂಪಿಸಲು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಗಳನ್ನು ನಿಯಮಿತವಾಗಿ ನಡೆಸಲು ಸೂಚನೆ ನೀಡಿದರು.