ಸಂಗತ | ನೀರು: ಪರ್ಯಾಯಗಳತ್ತ ಹರಿಯಲಿ ಚಿತ್ತ
ಈ ಬಾರಿಯ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ.ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಈ ಹಂಗಾಮಿನ ಮುಂದಿನ ಮಳೆಗಳ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನೂ ಇಟ್ಟುಕೊಳ್ಳುವಂತಿಲ್ಲ. ಕಾವೇರಿ ಕೊಳ್ಳಗಳಲ್ಲಿ ನೀರು ಎಷ್ಟಿದೆ ಎಂಬ ಪ್ರಶ್ನೆ ದೊಡ್ಡದಾಗುತ್ತಿದೆ. ಇಂತಹ ಸಂದರ್ಭ ಬಂದಾಗಲೆಲ್ಲ ಬೆಂಗಳೂರು ನಗರದ ನಾಗರಿಕರ ನೀರಿನ ಸಮಸ್ಯೆ ಬೃಹದಾಕಾರವಾಗುತ್ತದೆ. ಈಗಾಗಲೇ, ಬೆಂಗಳೂ

ಈ ಬಾರಿಯ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ.ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಈ ಹಂಗಾಮಿನ ಮುಂದಿನ ಮಳೆಗಳ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನೂ ಇಟ್ಟುಕೊಳ್ಳುವಂತಿಲ್ಲ. ಕಾವೇರಿ ಕೊಳ್ಳಗಳಲ್ಲಿ ನೀರು ಎಷ್ಟಿದೆ ಎಂಬ ಪ್ರಶ್ನೆ ದೊಡ್ಡದಾಗುತ್ತಿದೆ. ಇಂತಹ ಸಂದರ್ಭ ಬಂದಾಗಲೆಲ್ಲ ಬೆಂಗಳೂರು ನಗರದ ನಾಗರಿಕರ ನೀರಿನ ಸಮಸ್ಯೆ ಬೃಹದಾಕಾರವಾಗುತ್ತದೆ. ಈಗಾಗಲೇ, ಬೆಂಗಳೂರಿನ ಬಹುತೇಕ ಕಡೆ ವಾರಕ್ಕೆ ಎರಡು ಬಾರಿಯಷ್ಟೇ ನೀರು ಪೂರೈಕೆ ಮಾಡುತ್ತಿದ್ದಾರೆ. ಹೀಗಿರುವಾಗ ಪರ್ಯಾಯಗಳನ್ನು ಗಟ್ಟಿಗೊಳಿಸಿಕೊಳ್ಳಬೇಕಾದ ಜರೂರು ಇದೆ. ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಳಕೆ ಮಾಡುವ ಪ್ರಮಾಣದಲ್ಲಿ ಇಡೀ ಜಗತ್ತಿನಲ್ಲೇ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಮೆಕ್ಸಿಕೊ ಹೊರತುಪಡಿಸಿದರೆ ಬೆಂಗಳೂರಿನದ್ದೇ ಈ ವಿಷಯದಲ್ಲಿ ಮೇಲುಗೈ. ಆದರೆ, ಮಳೆ ನೀರಿನ ಸಂಗ್ರಹದಲ್ಲಿ ಮಾತ್ರ ಇವತ್ತಿಗೂ ಬೆಂಗಳೂರು ಬಹಳ ಹಿಂದಿದೆ.ಬೆಂಗಳೂರಿನಲ್ಲಿ ನಿತ್ಯವೂ ಸುಮಾರು 260 ಕೋಟಿ ಲೀಟರ್ ನೀರು ಬಳಕೆಯಾಗುತ್ತದೆ. ಸುಮಾರು 190 ಕೋಟಿ ಲೀಟರ್ ತ್ಯಾಜ್ಯನೀರು ಹರಿದುಹೋಗುತ್ತದೆ. ಹೀಗೆ ಚರಂಡಿ ಹಾಗೂ ಇತರೆಡೆಗಳಿಗೆ ಹರಿದುಹೋಗುವ ನೀರಿನಲ್ಲಿ ಮೂರನೇ ಒಂದು ಭಾಗ ಮರು ಸಂಸ್ಕರಣೆ ಆಗುತ್ತಿದೆ. ಕೋರಮಂಗಲ-ಚಲ್ಲಘಟ್ಟ ವ್ಯಾಲಿ ಯೋಜನೆಯ ಸ್ಫೂರ್ತಿಯ ಫಲವಿದು. ಈ ಯೋಜನೆ ಶುರುವಾದದ್ದು 2018ರಲ್ಲಿ. ಎಂಟು ವರ್ಷಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವುದು ಕಾಣುತ್ತಿದೆ.ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಕೆರೆಗಳಿಗೆ ತುಂಬಿಸಲು ಕೂಡ ಸಂಸ್ಕರಣೆಗೆ ಒಳಗಾದ ನೀರನ್ನು ಬಳಸಲಾಗುತ್ತಿದೆ. ಸಂಸ್ಕರಿಸಿ ಕೆರೆಗಳಿಗೆ ತುಂಬಿಸಿದ ನೀರಿಗೆ ಮಳೆ ನೀರು ಸೇರ್ಪಡೆಯಾದಾಗ ಸಹಜವಾಗಿಯೇ ನೀರು ಬಳಕೆಗೆ ಯೋಗ್ಯವಾಗುವ ರೀತಿಯಲ್ಲಿ ತಂತಾನೇ ಶುದ್ಧವಾಗುತ್ತದೆ. ಪ್ರಕೃತಿ ಅಷ್ಟರಮಟ್ಟಿಗೆ ಸ್ವಯಂ ನಿಯಂತ್ರಣ ಸಾಧಿಸಬಲ್ಲದು.ಹೀಗೆ ಸಂಸ್ಕರಿಸಿದ ನೀರಿನಿಂದ ಕೆರೆಗಳ ಪುನರುಜ್ಜೀವನ ಸಾಧ್ಯವಾಗುವುದರಿಂದ ಇನ್ನೊಂದು ಮುಖ್ಯವಾದ ಅನುಕೂಲವಿದೆ. ಆಯಾ ಕೆರೆಗಳಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವೂ ಏರಿಕೆಯಾಗುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನಡೆಸಿರುವ ಅಧ್ಯಯನದ ಪ್ರಕಾರ, ಮರು ಸಂಸ್ಕರಿಸಿದ ನೀರಿನಿಂದ ತುಂಬಿಕೊಂಡ ಕೆರೆಗಳ ಸುತ್ತಮುತ್ತಲಿನ ಸ್ಥಳಗಳ ಅಂತರ್ಜಲಮಟ್ಟದಲ್ಲಿ ಶೇ 58ರಿಂದ ಶೇ 72ರಷ್ಟು ಏರಿಕೆಯಾಗಿದೆ. ಬಯೋಮ್ ಎನ್ವಿರಾನ್ಮೆಂಟ್ ಟ್ರಸ್ಟ್ನವರಾದ ಎಸ್. ವಿಶ್ವನಾಥ್ ಅವರು, ತ್ಯಾಜ್ಯ ನೀರಿನ ಸಂಸ್ಕರಣೆ ಕುರಿತು ಅಧಿಕೃತವಾಗಿ ಪ್ರಗತಿಯ ವಿವರಗಳನ್ನು ನೀಡುತ್ತಲೇ ಬಂದಿದ್ದಾರೆ. ಇಂತಹ ಮಹತ್ವದ ಯೋಜನೆಯಲ್ಲಿ, ಅವರು ತೊಡಗಿರುವ ಸಂಸ್ಥೆಯ ಕಾಣಿಕೆಯೂ ಬಹುಮುಖ್ಯವಾಗಿದೆ.ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿರುವುದು ಸಾಂಸ್ಥಿಕ ಯಶಸ್ಸಿಗೆ ಕನ್ನಡಿ ಹಿಡಿಯುತ್ತದೆ. ಇದೊಂದು ಯೋಜನೆಯಿಂದಲೇ ಇಷ್ಟೆಲ್ಲ ಅಂತರ್ಜಲಮಟ್ಟ ಏರಿಕೆಯಾಗುತ್ತದೆ ಎನ್ನುವುದಾದರೆ, ಮಳೆ ನೀರು ಸಂಗ್ರಹದಂತಹ ಸರಳ ವಿಧಾನವು ಇನ್ನೆಷ್ಟು ದೊಡ್ಡ ಫಲವನ್ನು ಕೊಡಬಹುದು! ಅದಕ್ಕೆ ನಾಗರಿಕರ ಸ್ಪಂದನ ಮುಖ್ಯ.2011ರಲ್ಲಿ ಬೆಂಗಳೂರಿನಲ್ಲಿ 40X60 ಅಳತೆಯ ನಿವೇಶನಗಳಲ್ಲಿ ಕಟ್ಟಿದ ಮನೆಗಳಿಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಸುವುದನ್ನು ಕಡ್ಡಾಯಗೊಳಿಸಿದರು. 2021ರಲ್ಲಿ 30X40 ಅಳತೆಯ ನಿವೇಶನದಲ್ಲಿನ ಆಸ್ತಿಗಳಿಗೂ ಮಳೆನೀರಿನ ಸಂಗ್ರಹವನ್ನು ಕಡ್ಡಾಯ ಮಾಡಲಾಯಿತು. ಕಾರ್ಪೊರೇಷನ್ ಮಾಹಿತಿಯ ಪ್ರಕಾರ ನಗರದ 2.4 ಲಕ್ಷ ಮನೆಗಳಲ್ಲಿ ಮಾತ್ರ ಸಮರ್ಪಕವಾಗಿ ಮಳೆನೀರು ಸಂಗ್ರಹ ಮಾಡುತ್ತಿದ್ದಾರೆ. ಉಳಿದೆಲ್ಲೆಡೆ ಅದನ್ನು ನೆಪಮಾತ್ರಕ್ಕೆ ಎಂಬಂತೆ ಕಾಗದದ ಮೇಲೆ ತೋರಿಸಲಾಗಿದೆ. 49,958 ಆಸ್ತಿಗಳಿಂದ ಮಳೆ ನೀರು ಸಂಗ್ರಹ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೇ, ವರ್ಷಕ್ಕೆ ₹4.5 ಕೋಟಿ ದಂಡ ವಸೂಲು ಮಾಡಲಾಗುತ್ತಿದೆ. ದಂಡ ಕಟ್ಟಿಬಿಟ್ಟರೆ ನೀರು ಸಂಗ್ರಹ ಮಾಡದಿದ್ದರೂ ನಡೆಯುತ್ತದೆ ಎಂಬ ಧೋರಣೆ ಅನೇಕರಲ್ಲಿ ಇದೆ ಎನ್ನುವುದು ಆತಂಕಕಾರಿ ಸಂಗತಿ. ನಮ್ಮ ದೇಶದಲ್ಲಿ ಇಂದಿಗೂ ಒಂದು ಮಟ್ಟಿಗೆ ಮಳೆ ನೀರು ಸಂಗ್ರಹದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ರಾಜ್ಯ ತಮಿಳುನಾಡು. ಅಲ್ಲಿ 2003ರಲ್ಲೇ ತಾರಸಿ ಮಳೆ ನೀರು ಸಂಗ್ರಹವನ್ನು ಕಡ್ಡಾಯಗೊಳಿಸಲಾಯಿತು. ಈಗ ಅಲ್ಲಿ ನಿರ್ಮಿತವಾಗುವ ಯಾವ ಕಟ್ಟಡಕ್ಕೂ, ಮಳೆ ನೀರು ಸಂಗ್ರಹದ ವ್ಯವಸ್ಥೆ ಇರದಿದ್ದರೆ ನಿರಾಕ್ಷೇಪಣಾ ಪತ್ರವನ್ನು ಸ್ಥಳೀಯ ಆಡಳಿತ ನೀಡುವುದಿಲ್ಲ. ಇದರಿಂದ ಹಲವು ಉಪನಗರಗಳ ವ್ಯಾಪ್ತಿಯಲ್ಲಿ ಮಳೆ ನೀರು ಸಂಗ್ರಹ ಶೇ 100ರಷ್ಟು ಸಾಧ್ಯ ಆಗಿದೆ. ಅಂತರ್ಜಲಮಟ್ಟವು ಶೇ 50ರಷ್ಟು ಏರಿಕೆ ಕಂಡಿದೆ. ಬೆಂಗಳೂರು ಅಷ್ಟೇ ಅಲ್ಲದೆ, ದೇಶದ ರಾಜಧಾನಿ ನವದೆಹಲಿಯಲ್ಲಿಯೂ ಮಳೆ ನೀರು ಸಂಗ್ರಹ ನನೆಗುದಿಗೆ ಬಿದ್ದಿದೆ. ಅಲ್ಲಿ 7,600 ಸರ್ಕಾರಿ ಕಟ್ಟಡಗಳಲ್ಲೇ ಮಳೆ ನೀರು ಸಂಗ್ರಹ ವ್ಯವಸ್ಥೆ ಇಲ್ಲ ಎಂದು ದಾಖಲೆಗಳು ಹೇಳುತ್ತಿವೆ. ರಾಜಸ್ಥಾನ ಹಾಗೂ ಗುಜರಾತ್ ಈ ವಿಷಯದಲ್ಲಿ ನಮ್ಮರಾಜ್ಯಕ್ಕಿಂತ ಮುಂದಿವೆ. ವಾಣಿಜ್ಯ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹವನ್ನು ನಮ್ಮಲ್ಲೂ ಕಡ್ಡಾಯಗೊಳಿಸಲಾಗಿದೆ. ಉಳಿದಂತೆ ಶೇ 90ರಷ್ಟು ಕಟ್ಟಡಗಳು ಈ ಮಾದರಿಯನ್ನು ಅಳವಡಿಸಿಕೊಂಡಿಲ್ಲ. ಕೆಲವರು ತಮ್ಮದೇ ನಿವೇಶನದಲ್ಲಿನ ಕೊಳವೆಬಾವಿಗೆ ಮಳೆ ನೀರು ಸೇರುವಂತಹ ವ್ಯವಸ್ಥೆ ಮಾಡಿಸಿದ್ದಾರೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ನೀರಿಗೆ ಭಾರೀ ಸಂಕಷ್ಟ ಎದುರಾಗುತ್ತಿರುವುದರಿಂದ ಜಲ ಸಂಗ್ರಹದ ಪರ್ಯಾಯಗಳನ್ನು ನಾಗರಿಕರು ಗಂಭೀರವಾಗಿ ಪರಿಗಣಿಸಬೇಕಿದೆ.