ಬಿಡದಿ ಟೌನ್ಶಿಪ್: ಅಧಿಕಾರಿಗಳಿಗೆ ಪೊರಕೆ ಏಟು
ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ದಿನಗಳೆದಂತೆ ವಿರೋಧ ತೀವ್ರಗೊಳ್ಳುತ್ತಿದ್ದು, ರೈತರ ಶಾಂತಿಯುತ ಹೋರಾಟ ಸಂಘರ್ಷಕ್ಕೆ ತಿರುಗಿದೆ. ಭೂ ಸ್ವಾಧೀನಕ್ಕಾಗಿ ಜಂಟಿ ಅಳತೆ ಪ್ರಮಾಣೀಕರಣ (ಜೆಎಂಸಿ) ಮಾಡಲು ಸೋಮವಾರ ಯೋಜನಾ ಪ್ರದೇಶದ ಮಂಡಲಹಳ್ಳಿಗೆ ತೆರಳಿದ್ದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆಯಿಂದ ಥಳಿ

ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ದಿನಗಳೆದಂತೆ ವಿರೋಧ ತೀವ್ರಗೊಳ್ಳುತ್ತಿದ್ದು, ರೈತರ ಶಾಂತಿಯುತ ಹೋರಾಟ ಸಂಘರ್ಷಕ್ಕೆ ತಿರುಗಿದೆ. ಭೂ ಸ್ವಾಧೀನಕ್ಕಾಗಿ ಜಂಟಿ ಅಳತೆ ಪ್ರಮಾಣೀಕರಣ (ಜೆಎಂಸಿ) ಮಾಡಲು ಸೋಮವಾರ ಯೋಜನಾ ಪ್ರದೇಶದ ಮಂಡಲಹಳ್ಳಿಗೆ ತೆರಳಿದ್ದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆಯಿಂದ ಥಳಿಸಿದ್ದಾರೆ.ವಿರೋಧ ಲೆಕ್ಕಿಸದೆ ಗ್ರಾಮಕ್ಕೆ ಬಂದ ಅಧಿಕಾರಿಗಳ ನಾಲ್ಕು ವಾಹನಗಳನ್ನು ತಡೆದ ರೈತರು, ಗಾಜುಗಳನ್ನು ಪುಡಿ ಮಾಡಿದರು. ಈ ವೇಳೆ ಉಂಟಾದ ಘರ್ಷಣೆಯಲ್ಲಿ ರಾಮನಗರ ಡಿವೈಎಸ್ಪಿ ಬಿ.ಎನ್.ಶ್ರೀನಿವಾಸ್, ರಾಮನಗರ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಮುರಳಿ, ಕಾನ್ಸ್ಟೆಬಲ್ಗೆ ಗಾಯವಾಗಿದೆ. ತಳ್ಳಾಟದಲ್ಲಿ ರೈತರೊಬ್ಬರು ಗಾಯಗೊಂಡು ಅಸ್ವಸ್ಥರಾಗಿದ್ದಾರೆ.ಗಾಯಾಳು ಪೊಲೀಸರು ಹಾಗೂ ರೈತರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರೈತರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಡೆದಿದ್ದೇನು?: ಭೂ ಸ್ವಾಧೀನ ಪ್ರಕ್ರಿಯೆ ಭಾಗವಾಗಿ ಅಧಿಕಾರಿಗಳ ತಂಡವು ಜೆಎಂಸಿಗಾಗಿ ಮಧ್ಯಾಹ್ನ ಗ್ರಾಮಕ್ಕೆ ಬರಲಿದೆ ಎಂಬ ಮಾಹಿತಿ ಮೇರೆಗೆ, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ರೈತರು ಪೊರಕೆ ಹಿಡಿದು ರಸ್ತೆಗೆ ಅಡ್ಡವಾಗಿ ನಿಂತರು. ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳ ನಾಲ್ಕು ವಾಹನಗಳನ್ನು ತಡೆದು, ಟೌನ್ಶಿಪ್ ವಿರುದ್ಧ ಘೋಷಣೆ ಕೂಗತೊಡಗಿದರು. ಯಾವುದೇ ಕಾರಣಕ್ಕೂ ಜೆಎಂಸಿ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಪೊಲೀಸರು ಮನವೊಲಿಸಲು ಮುಂದಾದರೂ ರೈತರು ಪಟ್ಟು ಸಡಿಲಿಸಲಿಲ್ಲ. ಅಧಿಕಾರಿಗಳು ಹಾಗೂ ಪೊಲೀಸರ ನಡುವೆ ಶುರುವಾದ ವಾಗ್ವಾದ ವಿಕೋಪಕ್ಕೆ ತಿರುಗಿತು. ಆಗ ಕೆಲ ಅಧಿಕಾರಿಗಳು ವಾಹನದಿಂದ ಇಳಿದು ಜಮೀನಿನತ್ತ ಹೊರಟರು. ಇದರಿಂದ ರೊಚ್ಚಿಗೆದ್ದ ರೈತ ಮಹಿಳೆಯರು ಅಧಿಕಾರಿಗಳನ್ನು ಸುತ್ತುವರಿದು ಪೊರಕೆಯಿಂದ ಹೊಡೆದರು. ಉಳಿದವರು ಅಧಿಕಾರಿಗಳ ವಾಹನಗಳ ಗಾಜು ಪುಡಿ ಮಾಡಿ, ಜೆಎಂಸಿ ಪರಿಕರ ಕಿತ್ತು ನೆಲಕ್ಕೆ ಎಸೆದರು.ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ರೈತರನ್ನು ತಡೆದು, ಅಧಿಕಾರಿಗಳನ್ನು ವಾಹನಕ್ಕೆ ಹತ್ತಿಸಿ ಕಳಿಸಿದರು. ಘಟನೆಯಲ್ಲಿ ಗಾಯಗೊಂಡ ರೈತನನ್ನು ಪೊಲೀಸ್ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿದರು. ಅಧಿಕಾರಿಗಳು ಸ್ಥಳದಿಂದ ಹೋಗುತ್ತಿದ್ದಂತೆ ಪರಿಸ್ಥಿತಿ ತಿಳಿಗೊಂಡಿತು. ಅಷ್ಟೊತ್ತಿಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮತ್ತಷ್ಟು ಸಿಬ್ಬಂದಿ ಸ್ಥಳಕ್ಕೆ ಬಂದರು. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.ಮಂಡಲಹಳ್ಳಿ ಸೇರಿದಂತೆ ಯೋಜನಾ ಪ್ರದೇಶದ ಮೂರು ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ ಸರ್ಕಾರ ಜೂನ್ 10ರಂದು ಅಂತಿಮ ಅಧಿಸೂಚನೆ ಹೊರಡಿಸಿ, ಭೂ ಮಾಲೀಕರಿಗೆ ಪರಿಹಾರ ವಿತರಿಸುತ್ತಿದೆ. ಮಂಡಲಹಳ್ಳಿಯಲ್ಲಿ 71 ಎಕರೆ 13 ಗುಂಟೆ ಜಮೀನು ಭೂ ಸ್ವಾಧೀನವಾಗಲಿದೆ.ಘಟನೆ ಕುರಿತು ಪ್ರತಿಕ್ರಿಯೆ ಪಡೆಯಲು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.ಜಿ.ಎನ್.ನಟರಾಜು ಗಾಣಕಲ್ಲು,ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 27 ಭೂ ಮಾಲೀಕರ ಪೈಕಿ 21 ಮಂದಿ ಜಮೀನು ಕೊಡಲು ಒಪ್ಪಿದ್ದಾರೆ. ಅವರ ಅನುಮತಿ ಮೇರೆಗೆ ಜೆಎಂಸಿಗೆ ಅಧಿಕಾರಿಗಳು ಭೇಟಿ ನೀಡಿದ್ದಾಗ ಹಲ್ಲೆ ನಡೆಸಿರುವುದು ಖಂಡನೀಯಆರ್.ಶ್ರೀನಿವಾಸ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಘರ್ಷಣೆಯಲ್ಲಿ ಡಿವೈಎಸ್ಪಿ ಇನ್ಸ್ಪೆಕ್ಟರ್ ಕಾನ್ಸ್ಟೆಬಲ್ ಗಾಯಗೊಂಡಿದ್ದಾರೆ. 2 ವಾಹನಗಳ ಗಾಜು ಪುಡಿಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.ಹಿಂಬರಹ ಕೊಟ್ಟು ಜೆಎಂಸಿ ಮಾಡಲಿ:‘ಟೌನ್ಶಿಪ್ಗೆ ಭೂ ಮಾಲೀಕರು ಒಪ್ಪಿದರೆ ಮಾತ್ರ ಭೂ ಸ್ವಾಧೀನ ಎಂದು ಜಿಲ್ಲಾಧಿಕಾರಿಯೇ ಹೇಳಿದ್ದಾರೆ. ಆದರೂ ಭೂಮಿ ಕೊಡಲು ಒಪ್ಪದವರ ಜಮೀನಿನ ಜೆಎಂಸಿಗೆ ಬಂದ ಅಧಿಕಾರಿಗಳು ರೈತರನ್ನು ನಿಂದಿಸಿ ಪ್ರಚೋದಿಸಿದ್ದೇ ಘರ್ಷಣೆಗೆ ಕಾರಣ’ ಎಂದು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ರೈತರ ಭೂ ಹಿತರಕ್ಷಣಾ ಸಮಿತಿಯ ಪ್ರಕಾಶ್ ಹೇಳಿದರು. ‘ಯೋಜನೆ ಬೇಡ ಎನ್ನುವವರ ಜಮೀನನ್ನು ಜೆಎಂಸಿ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಹಿಂಬರಹ ಕೊಡಲಿ. ಬಳಿಕ ಒಪ್ಪುವವರ ಜಮೀನಿನ ಜೆಎಂಸಿ ಮಾಡಲಿ. ಇಲ್ಲದಿದ್ದರೆ ನಮ್ಮ ಹೋರಾಟ ಮತ್ತಷ್ಟು ತೀವ್ರವಾಗಲಿದೆ. ಏನಾದರೂ ಅನಾಹುತವಾದರೆ ಅದಕ್ಕೆ ಜಿಲ್ಲಾಡಳಿತವೇ ಕಾರಣವಾಗಲಿದೆ’ ಎಂದರು.ರೈತರ ಮೇಲೆ ಪೊಲೀಸ್ ದರ್ಪಎಚ್ಡಿಕೆ ಕಿಡಿ ‘ಶಾಂತಿಯತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಪೊಲೀಸರೇ ದೌರ್ಜನ್ಯ ನಡೆಸಿ ದರ್ಪ ತೋರಿದ್ದಾರೆ. ಘಟನೆಗೆ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಯೇ ಕಾರಣ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಕುರಿತು ವಿಡಿಯೊ ಹರಿಯಬಿಟ್ಟಿರುವ ಅವರು ‘ಪೊಲೀಸರಿಗೆ ನಾನು ಎಚ್ಚರಿಕೆ ಕೊಡುತ್ತಿದ್ದೇನೆ. ಶಾಂತಿಯುತವಾಗಿ ನಡೆಯುತ್ತಿರುವ ಹೋರಾಟಕ್ಕೆ ಸರ್ಕಾರ ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸರ್ಕಾರದ ದರ್ಪಕ್ಕೆ ಹೆದರಿ ರೈತ ವಿರೋಧಿ ನೀತಿ ಅನುಸರಿಸಬೇಡಿ. ಹಾಗೇನಾದರೂ ಮಾಡಿದರೆ ಸರ್ಕಾರದ ಕೆಟ್ಟ ನಡವಳಿಕೆಯ ಪಾಲನ್ನು ಮುಂದೆ ನೀವೂ ಹಂಚಿಕೊಳ್ಳುವ ದಿನ ಬರುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ. ‘ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರು ಸುಮಾರು 500 ದಿನಗಳಿಂದ ಶಾಂತಿಯುತವಾಗಿ ಹೋರಾಡುತ್ತಿರುವಾಗ ಅಧಿಕಾರಿಗಳು ಏಕಾಏಕಿಯಾಗಿ ಜೆಎಂಸಿಗೆ ಬಂದಿರುವುದು ಸರಿಯಲ್ಲ. ಇದಕ್ಕೆ ಸರ್ಕಾರದ ಚಿತಾವಣೆಯೇ ಕಾರಣ. ರೈತರು ಕೆಟ್ಟ ಘಟನೆಗಳಿಗೆ ಅವಕಾಶ ಕೊಡದೆ ಶಾಂತಿಯುತವಾಗಿ ಹೋರಾಟ ಮುಂದುವರಿಸಬೇಕು. ನಿಮ್ಮ ಪರವಾಗಿ ಕಾನೂನು ಹೋರಾಟ ಮಾಡಲು ಅನೇಕರಿದ್ದೇವೆ’ ಎಂದು ಹೇಳಿದ್ದಾರೆ.