ಕೆಪಿಎಸ್ಸಿ ಅಧ್ಯಕ್ಷ ಅಮಾನತು
ಬೆಂಗಳೂರು: ಪುತ್ರಿಗೆ ಸರ್ಕಾರಿ ಹುದ್ದೆಗಿಟ್ಟಿಸಿಕೊಳ್ಳಲು ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಎಸಗಿದ್ದಾರೆಂದು ಸಲ್ಲಿಕೆಯಾಗಿರುವ ದೂರು ಆಧರಿಸಿ ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ ಅವರನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಮಾನತು ಮಾಡಿದ್ದಾರೆ.ಕೆಪಿಎಸ್ಸಿಯ 75 ವರ್ಷಗಳ ಇತಿಹಾಸದಲ್ಲಿ ಅಧ್ಯಕ್ಷರೊಬ್ಬರು ಅಮಾನತುಗೊ

ಬೆಂಗಳೂರು: ಪುತ್ರಿಗೆ ಸರ್ಕಾರಿ ಹುದ್ದೆಗಿಟ್ಟಿಸಿಕೊಳ್ಳಲು ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಎಸಗಿದ್ದಾರೆಂದು ಸಲ್ಲಿಕೆಯಾಗಿರುವ ದೂರು ಆಧರಿಸಿ ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ ಅವರನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಮಾನತು ಮಾಡಿದ್ದಾರೆ.ಕೆಪಿಎಸ್ಸಿಯ 75 ವರ್ಷಗಳ ಇತಿಹಾಸದಲ್ಲಿ ಅಧ್ಯಕ್ಷರೊಬ್ಬರು ಅಮಾನತುಗೊಂಡಿರುವುದು ಇದೇ ಮೊದಲು. ಅಲ್ಲದೆ, ಸಾಹುಕಾರ ವಿರುದ್ಧದ ಆರೋಪಗಳ ಕುರಿತು ತನಿಖೆಗೆ ಸಂವಿಧಾನದ 317(1)ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ನ ಗಮನಕ್ಕೆ ತರುವಂತೆ ರಾಜ್ಯಪಾಲರು ರಾಷ್ಟ್ರಪತಿಗೆ ಶಿಫಾರಸು ಮಾಡಿದ್ದಾರೆ. ಮುಂದಿನ ಆದೇಶದವರೆಗೆ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ ಆಯೋಗದ ಹಿರಿಯ ಸದಸ್ಯರೊಬ್ಬರಿಗೆ ಆದೇಶಿಸಿದ್ದಾರೆ.‘ಕೆಪಿಎಸ್ಸಿಯ ಸಮಗ್ರತೆ ಮತ್ತು ವಿಶ್ವಾಸಾರ್ಹತೆ ರಕ್ಷಿಸುವುದರ ಜೊತೆಗೆ ನ್ಯಾಯಯುತ, ನಿಷ್ಪಕ್ಷಪಾತ ಮತ್ತು ಪ್ರಭಾವರಹಿತ ತನಿಖೆ ಖಚಿತಪಡಿಸಿಕೊಳ್ಳಲು, ರಾಷ್ಟ್ರಪತಿಯಿಂದ ಮುಂದಿನ ಆದೇಶ ಬರುವವರೆಗೆ ಸಾಹುಕಾರ ಅವರನ್ನು ಅಧ್ಯಕ್ಷ ಹುದ್ದೆಯಿಂದ ತಕ್ಷಣ ದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ’ ಎಂದು ಲೋಕಭವನವು ಸೋಮವಾರ ಪ್ರಕಟಣೆ ಹೊರಡಿಸಿದೆ.ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಸಾಹುಕಾರ ಅವರ ಪುತ್ರಿ ಸುಮಾ ಎಸ್. ಸಾಹುಕಾರ ತಮ್ಮ ಕುಟುಂಬದ ವಾರ್ಷಿಕ ಆದಾಯ ₹ 40 ಸಾವಿರ ಎಂದು ಘೋಷಿಸಿದ ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆದು 3ಬಿ ಮೀಸಲಾತಿ ಅಡಿ ಅರ್ಜಿ ಸಲ್ಲಿಸಿದ್ದರು. ಮೂಲ ದಾಖಲೆಗಳ ಪರಿಶೀಲನೆಯ ವೇಳೆಯಲ್ಲಿ ಈ ವಿಷಯ ಆಯೋಗದ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಬಗ್ಗೆ ಲೋಕಭವನಕ್ಕೆ ದೂರು ಸಲ್ಲಿಕೆ ಆಗಿತ್ತು.ಲೋಕಭವನದ ಪ್ರಕಟಣೆಯಲ್ಲಿ ಏನಿದೆ?‘ಶಿವಶಂಕರಪ್ಪ ಸಾಹುಕಾರ ವಿರುದ್ಧ ಸ್ವಜನಪಕ್ಷಪಾತ, ಮಾಹಿತಿ ಬಹಿರಂಗಪಡಿಸದೇ ಇರುವುದು ಸೇರಿ ಮತ್ತಿತರ ದೂರುಗಳು ಬಂದಿದ್ದವು. ಅಧಿಕಾರ ದುರುಪಯೋಗಪಡಿಸಿಕೊಂಡು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಅವರ ನೇರ ಅವಲಂಬಿತರು ಕೆಪಿಎಸ್ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾಗ, ಈ ನೇಮಕಾತಿ ಪ್ರಕ್ರಿಯೆಯಿಂದ ದೂರವಿರಲು ಅಥವಾ ಹಿತಾಸಕ್ತಿ ಸಂಘರ್ಷವನ್ನು ಔಪಚಾರಿಕವಾಗಿ ಘೋಷಿಸಲು ಅಧ್ಯಕ್ಷರು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ.‘ಅಧ್ಯಕ್ಷರ ಪುತ್ರಿಯೊಬ್ಬರು ತಮ್ಮ ಕುಟುಂಬದ ವಾರ್ಷಿಕ ಆದಾಯವನ್ನು ₹ 40 ಸಾವಿರ ಎಂದು ಘೋಷಿಸುವ ಮೂಲಕ ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಹೆಚ್ಚಿನ ಆದಾಯ ಇತ್ತು ಮತ್ತು ತಮ್ಮ ತಂದೆ ಆಯೋಗದ ಅಧ್ಯಕ್ಷರಾಗಿದ್ದಾರೆ ಎಂಬ ಅರಿವು ಇತ್ತು. ಹಾಗಿದ್ದರೂ ಸತ್ಯಾಂಶಗಳನ್ನು ಮರೆಮಾಚಿ ಹಾಗೂ ತಿರುಚಿದ ಕಡಿಮೆ ಆದಾಯದ ಘೋಷಣೆಗಳನ್ನು ಬಳಸಿಕೊಂಡ ಅವರ ಪುತ್ರಿಯು ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ಕೆನೆಪದರ ವಿನಾಯಿತಿ ಕೋರಿದ್ದಾರೆ ಎಂಬುದನ್ನು ಸಾಕ್ಷ್ಯಗಳು ಸೂಚಿಸುತ್ತವೆ.‘2002ರ ಮಾರ್ಚ್ 30ರ ಸರ್ಕಾರಿ ಆದೇಶದ ಪ್ರಕಾರ, ಕೆಪಿಎಸ್ಸಿ ಅಧ್ಯಕ್ಷರ ಮಕ್ಕಳು ಇತರ ಹಿಂದುಳಿದ ವರ್ಗಗಳ ಕೋಟಾದಡಿ ಮೀಸಲಾತಿ ಪಡೆಯಲು ಅರ್ಹರಲ್ಲ. ನಿಯಮ ಮೀರಿ ಲಾಭ ಪಡೆಯುವ ಉದ್ದೇಶದಿಂದ, ಅಧ್ಯಕ್ಷರು ಮತ್ತು ಅವರ ಪುತ್ರಿ ಪ್ರಮುಖ ಮಾಹಿತಿಯನ್ನು ಮರೆಮಾಚಿದ್ದಾರೆ. ಆಯೋಗದ ಮುಖ್ಯಸ್ಥರ ಮೇಲ್ವಿಚಾರಣೆಯ ಕೊರತೆ ಅಥವಾ ಉದ್ದೇಶಪೂರ್ವಕ ನಿರ್ಲಕ್ಷ್ಯವಿಲ್ಲದೆ ಇಂತಹ ಕೃತ್ಯ ನಡೆಯಲು ಸಾಧ್ಯವಿಲ್ಲ.‘ಅಧ್ಯಕ್ಷರು ಸಲ್ಲಿಸಿದ ಆದಾಯ ಮತ್ತು ಆಸ್ತಿ ವಿವರಗಳು ಹಾಗೂ ಇನ್ನಿತರ ದಾಖಲೆ ಮತ್ತು ಸಂಗತಿಗಳು ಆಯೋಗದ ಅಧ್ಯಕ್ಷರ ಕಡೆಗೆ ಸ್ಪಷ್ಟವಾಗಿ ಬೊಟ್ಟು ಮಾಡುತ್ತವೆ. ಪ್ರಕರಣದ ಸತ್ಯಾಂಶಗಳು ಮತ್ತು ಸನ್ನಿವೇಶಗಳನ್ನು ಪರಿಗಣಿಸಿದಾಗ, ಇದು ಅವರ ದುರ್ನಡತೆಗೆ ಸಮಾನವಾಗಿದೆ’ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಹೊರಡಿಸಿರುವ ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಶಿವಶಂಕರಪ್ಪ ಸಾಹುಕಾರಪ್ರಭುದೇವ ಹಂಗಾಮಿ ಅಧ್ಯಕ್ಷ ಕೆಪಿಎಸ್ಸಿ ಹಂಗಾಮಿ ಅಧ್ಯಕ್ಷರಾಗಿ ಮೊದಲ ಹಿರಿಯ ಸದಸ್ಯ ಬಿ.ಪ್ರಭುದೇವ ಅವರು ಸೋಮವಾರ ಬೆಳಿಗ್ಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಶಿವಶಂಕರಪ್ಪ ಸಾಹುಕಾರ ಅವರನ್ನು ರಾಜ್ಯಪಾಲರು ಅಮಾನತುಗೊಳಿಸಿದ ಬೆನ್ನಲ್ಲೇ ಕಾರ್ಯದರ್ಶಿಗೆ ಕರೆ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಂಗಾಮಿ ಅಧ್ಯಕ್ಷರು ಕಾರ್ಯನಿರ್ವಹಿಸಲು ಅನುವಾಗುವಂತೆ ಕ್ರಮ ತೆಗೆದುಕೊಳ್ಳಲು ಸಲಹೆ ನೀಡಿದ್ದರು. ಬಿ.ಇ ಎಂ.ಬಿ.ಎ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿರುವ ಪ್ರಭುದೇವ ಅಮೆರಿಕದ ಡೆಟ್ರಾಯಿಟ್ನಲ್ಲಿರುವ ‘ಫೋರ್ಡ್’ ಮೋಟರ್ಸ್ ಕಂಪನಿಯಲ್ಲಿ 10 ವರ್ಷ ಕೆಲಸ ಮಾಡಿದ್ದಾರೆ. ಬಳಿಕ ರಾಜ್ಯ ಸರ್ಕಾರಿ ಸೇವೆಗೆ ಸೇರಿದ ಅವರು ವಾಣಿಜ್ಯ ತೆರಿಗೆ ಪ್ರವಾಸೋದ್ಯಮ ಕಾರ್ಮಿಕ ಇಲಾಖೆಯಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದರು. 2021ರ ಏಪ್ರಿಲ್ 8ರಿಂದ ಅವರು ಕೆಪಿಎಸ್ಸಿ ಸದಸ್ಯರಾಗಿದ್ದಾರೆ.ವಿಚಾರಣೆಗೆ ಹಾಜರಾಗಲು ಪುತ್ರಿ ಸುಮಾಗೆ ನೋಟಿಸ್ಕೆಪಿಎಸ್ಸಿ ಅಧ್ಯಕ್ಷ ಸ್ಥಾನದಿಂದ ಅಮಾನತು ಗೊಂಡಿರುವ ಶಿವಶಂಕರಪ್ಪ ಸಾಹುಕಾರ ಅವರ ಮಗಳು ಸುಮಾಎಸ್. ಸಾಹುಕಾರ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.ನೇಮಕಾತಿ ವೇಳೆ ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಕೆ. ಜ್ಯೋತಿ ದೂರು ನೀಡಿದ್ದರು. ಇದನ್ನು ಆಧರಿಸಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಕೈಗಾರಿಕಾವಿಸ್ತರಣಾಧಿಕಾರಿ ಹುದ್ದೆಯ ಅಭ್ಯರ್ಥಿ ಸುಮಾ ಅವರವಿರುದ್ಧ ಎಫ್ಐಆರ್ ದಾಖಲಾಗಿತ್ತು.ದೂರಿನಲ್ಲಿ ಏನಿದೆ?: ‘ಸುಮಾ ಎಸ್. ಸಾಹುಕಾರ ಅವರ ತಂದೆಯ ಹೆಸರು ಶಿವಶಂಕರಪ್ಪ ಸಾಹುಕಾರ ಎಂದು ಅರ್ಜಿಯಲ್ಲಿ ಮತ್ತು ಇತರ ದಾಖಲೆಗಳಲ್ಲಿ ಇದೆ. ಇವರು ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಎಸ್. ಸಾಹುಕಾರ ಅವರ ಮಗಳು ಎಂದು ದಾಖಲೆಗಳ ಪರಿಶೀಲನೆ ವೇಳೆ ತಿಳಿದುಬಂದಿದೆ. ಅವರು ಸಲ್ಲಿಸಿರುವ 3ಬಿ ಮೀಸಲಾತಿ ಪ್ರಮಾಣಪತ್ರದಲ್ಲಿ ಕುಟುಂಬದ ವಾರ್ಷಿಕ ಆದಾಯ ₹40,000 ಎಂದು ನಮೂದಾಗಿದೆ’ ಎಂದು ದೂರಿನಲ್ಲಿದೆ.ಈ ಹಿಂದಿನ ಘಟನೆಗಳು... ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಎಚ್.ಎನ್. ಕೃಷ್ಣ ಅವರ ಅವಧಿಯಲ್ಲಿ ನಡೆದ 1998 1999 2004 ಈ ಮೂರು ಸಾಲುಗಳ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಸ್ವಜನಪಕ್ಷಪಾತ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ತನಿಖೆ ನಡೆದು ಅವರು ಜೈಲುವಾಸ ಅನುಭವಿಸಿದ್ದರು. l ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಗೋನಾಳ್ ಭೀಮಪ್ಪ ಅವಧಿಯಲ್ಲಿ 2011ರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮ ಆರೋಪದಲ್ಲಿ ಅವರು ಜೈಲುವಾಸ ಅನುಭವಿಸಿದ್ದರು. ಈ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಸದಸ್ಯೆ ಮಂಗಳಾ ಶ್ರೀಧರ್ ಅವರನ್ನು ಅಂದಿನ ರಾಜ್ಯಪಾಲರು ಅಮಾನತು ಮಾಡಿದ್ದರು.ಸಾಹುಕಾರ: ಏನಿದು ವಿವಾದ? ಶಿವಶಂಕರಪ್ಪ ಸಾಹುಕಾರ ಅವರ ಪುತ್ರಿ ಸುಮಾ ಎಸ್. ಸಾಹುಕಾರ ಅವರು ಆದಾಯ ಮತ್ತು ಜಾತಿ ಪ್ರಮಾಣಪತ್ರದಲ್ಲಿ ಕುಟುಂಬದ ವಾರ್ಷಿಕ ಆದಾಯ ₹40 ಸಾವಿರವೆಂದು ತೋರಿಸಿ 3 ಬಿ ಮೀಸಲಾತಿ ಅಡಿ ಅರ್ಜಿ ಸಲ್ಲಿಸಿದ್ದ ವಿಷಯದ ಟಿಪ್ಪಣಿಯನ್ನು ಕಾರ್ಯದರ್ಶಿ ಕೆ. ಜ್ಯೋತಿ ಜೂನ್ 19ರಂದು ನಡೆದ ಆಯೋಗದ ಸಭೆಗೆ ಮಂಡಿಸಿದ್ದರು. ಅಂದಿನ ಸಭೆಗೆ ಟಿಪ್ಪಣಿ ನೀಡಿದ್ದ ಶಿವಶಂಕರಪ್ಪ ಸಾಹುಕಾರ ಮಗಳ ವಿಷಯ ಕಾರ್ಯಸೂಚಿಯಲ್ಲಿ ಇರುವುದರಿಂದ ಸಭೆಯಿಂದ ಹೊರಗುಳಿಯುವುದಾಗಿ ತಿಳಿಸಿದ್ದರು. ಹೀಗಾಗಿ ಹಿರಿಯ ಸದಸ್ಯ ಬಿ.ಪ್ರಭುದೇವ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರದಲ್ಲಿ ಸುಳ್ಳು ಆದಾಯ ನಮೂದಿಸಲು ಸಹಕರಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಕಾರಣ ನೈತಿಕ ಹೊಣೆ ಹೊತ್ತು ತಕ್ಷಣವೇ ಅಧ್ಯಕ್ಷ ಹುದ್ದೆಗೆ ಸಾಹುಕಾರ ರಾಜೀನಾಮೆ ನೀಡಬೇಕೆಂದು ಅಂದಿನ ಸಭೆಯಲ್ಲಿ ಸದಸ್ಯರು ನಿರ್ಣಯ ತೆಗೆದುಕೊಂಡಿದ್ದರು. ಸಭೆಯ ಬಳಿಕ ಲೋಕಭವನಕ್ಕೆ ತೆರಳಿದ ಆಯೋಗದ ಸದಸ್ಯರು ಶಿವಶಂಕರಪ್ಪ ಸಾಹುಕಾರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು. ಆ ಬೆನ್ನಲ್ಲೇ ಕಾರ್ಯದರ್ಶಿಯವರನ್ನೂ ಕರೆಸಿಕೊಂಡು ರಾಜ್ಯಪಾಲರು ಮಾಹಿತಿ ಪಡೆದುಕೊಂಡಿದ್ದರು. ಸಾಹುಕಾರ ಕೂಡಾ ರಾಜ್ಯಪಾಲರನ್ನು ಭೇಟಿ ಮಾಡಿ ವಿವರಣೆ ನೀಡಿದ್ದರು. ಈ ನಿರ್ಣಯವನ್ನು ಪ್ರಶ್ನಿಸಿ ಸಾಹುಕಾರ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಜುಲೈ 10ರಂದು ನಡೆಸಿದ್ದ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆ ಬೆನ್ನಲ್ಲೇ ನೇಮಕಾತಿ ವೇಳೆ ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆಂದು ಸುಮಾ ಎಸ್. ಸಾಹುಕಾರ ವಿರುದ್ಧ ಕೆಪಿಎಸ್ಸಿ ಕಾರ್ಯದರ್ಶಿ ಕೆ. ಜ್ಯೋತಿ ನೀಡಿದ್ದ ದೂರು ಆಧರಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.