ಯೋಗ, ಕರಾಟೆಗೆ ಒಬ್ಬರೇ ಶಿಕ್ಷಕ: ಆದೇಶ ಪರಿಶೀಲನೆಗೆ ಒತ್ತಾಯ
ಬೆಂಗಳೂರು: ‘ಸರ್ಕಾರಿ ಶಾಲೆಗಳಲ್ಲಿ ಕರಾಟೆ ಜೊತೆಗೆ ಯೋಗವನ್ನೂ ಒಬ್ಬರೇ ಶಿಕ್ಷರು ಕಲಿಸಬೇಕು ಎಂಬ ಆದೇಶವನ್ನು ರಾಜ್ಯ ಸರ್ಕಾರ ಮರುಪರಿಶೀಲಿಸಬೇಕು’ ಎಂದು ರಾಜ್ಯ ಕರಾಟೆ ಶಿಕ್ಷಕರ ಸಂಘ ಒತ್ತಾಯಿಸಿದೆ. ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಕಟ್ಟೇಸ್ವಾಮಿ, ‘ಪಿಎಂ–ಶ್ರೀ ಯೋಜನೆಯಡಿ ರಾಜ್ಯದ 590 ಸರ್ಕಾರಿ ಶಾಲ

ಬೆಂಗಳೂರು: ‘ಸರ್ಕಾರಿ ಶಾಲೆಗಳಲ್ಲಿ ಕರಾಟೆ ಜೊತೆಗೆ ಯೋಗವನ್ನೂ ಒಬ್ಬರೇ ಶಿಕ್ಷರು ಕಲಿಸಬೇಕು ಎಂಬ ಆದೇಶವನ್ನು ರಾಜ್ಯ ಸರ್ಕಾರ ಮರುಪರಿಶೀಲಿಸಬೇಕು’ ಎಂದು ರಾಜ್ಯ ಕರಾಟೆ ಶಿಕ್ಷಕರ ಸಂಘ ಒತ್ತಾಯಿಸಿದೆ. ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಕಟ್ಟೇಸ್ವಾಮಿ, ‘ಪಿಎಂ–ಶ್ರೀ ಯೋಜನೆಯಡಿ ರಾಜ್ಯದ 590 ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಆಯ್ಕೆ ನಡೆಯಲಿದೆ. ಕರಾಟೆ ಮತ್ತು ಯೋಗ ವಿಭಿನ್ನ ಕ್ರೀಡಾ ಕಲೆಗಳಾಗಿದ್ದು, ಪ್ರತ್ಯೇಕ ಪರಿಣತಿ ಹಾಗೂ ಬೋಧನೆ ಅಗತ್ಯ’ ಎಂದು ಪ್ರತಿಪಾದಿಸಿದರು.‘ಇದೇ ಶೈಕ್ಷಣಿಕ ಸಾಲಿನಿಂದಲೇ ಶಿಕ್ಷಕರಿಗೆ ಪರಿಚಯಾತ್ಮಕ ತರಬೇತಿ ನೀಡಿ ಬೋಧನಾ ಪ್ರಕ್ರಿಯೆ ಆರಂಭಿಸಬೇಕಿತ್ತು. ಆದೇಶದಿಂದ ಉಂಟಾದ ಗೊಂದಲದಿಂದಾಗಿ ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ. ಕರಾಟೆ ಶಿಕ್ಷಕರ ಸಂಘ, ಯೋಗ ತಜ್ಞರೊಂದಿಗೆ ಚರ್ಚಿಸಿ ಮಾರ್ಗಸೂಚಿಯನ್ನು ರೂಪಿಸಿ, ಹೊಸ ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದರು. ‘ಕರಾಟೆ ಪರಿಣತರೆಂಬ ನಕಲಿ ಪ್ರಮಾಣ ಪತ್ರ ನೀಡಿ ಯೋಗ ತರಬೇತುದಾರರು ನೇಮಕವಾಗುತ್ತಿರುವ ದೂರುಗಳು ಬಂದಿವೆ. ಹೀಗಾಗಿ ಸರ್ಕಾರವು ಪಾರದರ್ಶಕವಾಗಿ ನೇಮಕ ಪ್ರಕ್ರಿಯೆ ನಡೆಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಮೊಹಮ್ಮದ್ ನದೀಮ್, ಲಕ್ಷ್ಮಿನಾರಾಯಣ ಆಚಾರ್ಯ, ಶಿವಕುಮಾರ್, ಮೌನೇಶ್, ವಿಶಾಲ್ ನಾಯಕ್, ಪ್ರವೀಣ್ ಕಾರಂಜಿ, ಜಿ.ಕೆ.ರಾಘವೇಂದ್ರ, ಪ್ರಕಾಶ್ ಉಪಸ್ಥಿತರಿದ್ದರು.