ಭಾರತ ತಂಡಕ್ಕೆ ರೋಹಿತ್–ವಿರಾಟ್ ಬಲ
ಬರ್ಮಿಂಗ್ಹ್ಯಾಮ್ (ಪಿಟಿಐ): ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಇಂಗ್ಲೆಂಡ್ ತಂಡದ ವಿರುದ್ಧ ಆರಂಭವಾಗುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನದ ಜೊತೆಗೆ, ಟಿ20 ಸೋಲಿನಿಂದ ಹೈರಾಣಾಗಿರುವ ಭಾರತ ತಂಡದಲ್ಲಿ ಜೀವಕಳೆ ಮೂಡಿಸಬೇಕಾಗಿದೆ.ಐದು ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯನ್ನು ‘ಗುಡಿಸಿಹಾಕಿರುವ’ ಇಂಗ್ಲೆಂಡ್ ತಂಡವು ಮಂ

ಬರ್ಮಿಂಗ್ಹ್ಯಾಮ್ (ಪಿಟಿಐ): ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಇಂಗ್ಲೆಂಡ್ ತಂಡದ ವಿರುದ್ಧ ಆರಂಭವಾಗುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನದ ಜೊತೆಗೆ, ಟಿ20 ಸೋಲಿನಿಂದ ಹೈರಾಣಾಗಿರುವ ಭಾರತ ತಂಡದಲ್ಲಿ ಜೀವಕಳೆ ಮೂಡಿಸಬೇಕಾಗಿದೆ.ಐದು ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯನ್ನು ‘ಗುಡಿಸಿಹಾಕಿರುವ’ ಇಂಗ್ಲೆಂಡ್ ತಂಡವು ಮಂಗಳವಾರ ಆರಂಭವಾಗುವ ಮೂರು ಪಂದ್ಯಗಳ ಸರಣಿಗೆ ಉತ್ಸಾಹದಿಂದ ಸಜ್ಜಾಗಿದೆ. ಕೊಹ್ಲಿ ಮತ್ತು ರೋಹಿತ್ ಜೊತೆಗೆ ದೇಶದ ಅಗ್ರ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ, ನಾಯಕ ಶುಭಮನ್ ಗಿಲ್, ವಿಕೆಟ್ ಕೀಪರ್–ಬ್ಯಾಟರ್ ಕೆ.ಎಲ್.ರಾಹುಲ್ ಅವರೂ ಭಾರತ ತಂಡಕ್ಕೆ ಮರಳುತ್ತಿದ್ದಾರೆ.39 ವರ್ಷದ ರೋಹಿತ್ ಮತ್ತು ಸದ್ಯದಲ್ಲೇ 38ನೇ ವರ್ಷಕ್ಕೆ ಕಾಲಿಡಲಿರುವ ಕೊಹ್ಲಿ ಅವರು ಈಗಲೂ ರನ್ ಹಸಿವು ಉಳಿಸಿಕೊಂಡಿದ್ದಾರೆ. ಮುಂದಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿ ವಿದಾಯ ಹೇಳಲು ಬಯಸಿರುವ ಈ ದಿಗ್ಗಜ ಆಟಗಾರರ ಪಾಲಿಗೆ ಪ್ರತಿಯೊಂದು ಸರಣಿಯೂ ಸತ್ವಪರೀಕ್ಷೆ.ಉಪಖಂಡದ ನಿರ್ಜೀವ ಪಿಚ್ಗಳಿಗೆ ಹೋಲಿಸಿದರೆ ಲವಲವಿಕೆಯಿಂದ ಕೂಡಿರುವ ಇಂಗ್ಲೆಂಡ್ನ ಪಿಚ್ಗಳಲ್ಲಿ ಜೋಫ್ರಾ ಆರ್ಚರ್ ಮತ್ತು ಜೋಶ್ ಟಂಗ್ ಅವರನ್ನು ಎದುರಿಸುವುದು ಭಾರತದ ಬ್ಯಾಟರ್ಗಳಿಗೆ ವಿಭಿನ್ನ ರೀತಿಯ ಸವಾಲಾಗಲಿದೆ. ಇಂಥ ಪರೀಕ್ಷೆ ರೋಹಿತ್, ಕೊಹ್ಲಿ ಅವರಿಗೆ ಹೊಸದೇನಲ್ಲ. ಆದರೆ ತಂಡದಲ್ಲಿ ಅವರ ಸೇರ್ಪಡೆ ಹಿಂದೆಂದಿಗಿಂತ ಮಹತ್ವದ್ದಾಗಿದೆ. ಟಿ20 ತಂಡದ ಹೊಸ ನಾಯಕ ಶ್ರೇಯಸ್ ಅಯ್ಯರ್ ಅವರ ಸಾರಥ್ಯದಲ್ಲಿ ಏಳು ಪಂದ್ಯಗಳಲ್ಲಿ ಆರನ್ನು ಸೋತು ಭಾರತ ಅತೀವ ಒತ್ತಡದಲ್ಲಿದೆ. ಉಳಿದೊಂದು ಪಂದ್ಯ ಮಳೆಯ ಪಾಲಾಗಿತ್ತು. ಈ ಏಳರಲ್ಲಿ ಎರಡು ಸೋಲು ಎದುರಾಗಿದ್ದು ಅನನುಭವಿ ಐರ್ಲೆಂಡ್ ಎದುರು.ಹೀಗಾಗಿ ತಂಡಕ್ಕೂ ಇಬ್ಬರು ದಿಗ್ಗಜರ ನೆರವು ಅಗತ್ಯವಾಗಿದೆ. ಈ ಸರಣಿಯಲ್ಲಿ ಗೆದ್ದರೂ ಟಿ20ಯಲ್ಲಿ ಅನುಭವಿಸಿದ ಮುಖಭಂಗ ಮರೆಯುವುದು ಕಷ್ಟ. ಆದರೆ ತಂಡಕ್ಕೆ ವಿಶ್ವಾಸ ಗಳಿಸಲು ನೆರವಾಗಲಿದೆ.ಏಕದಿನ ಕ್ರಿಕೆಟ್ನ ಪರಿಣತ ಗಿಲ್ ಮತ್ತು ರಾಹುಲ್ ಅವರಿಂದಾಗಿ ತಂಡದ ಅಗ್ರ ಸರದಿ ಇನ್ನಷ್ಟು ಬಲಗೊಳ್ಳಲಿದೆ. ಅಯ್ಯರ್ ಟಿ20 ಸರಣಿಯಲ್ಲಿ ಎರಡು ಉತ್ತಮ ಇನಿಂಗ್ಸ್ ಆಡಿದ್ದಾರೆ.ಬೌಲಿಂಗ್ ವಿಭಾಗದ ಚಿಂತೆ:ಸಾಕಷ್ಟು ವಿಶ್ರಾಂತಿಯ ನಂತರ ಬೂಮ್ರಾ ತಂಡಕ್ಕೆ ಮರಳಿದ್ದರೂ, ಬೌಲಿಂಗ್ ವಿಭಾಗ ಪರಿಣಾಮಕಾರಿ ಎನಿಸುತ್ತಿಲ್ಲ. ಅಫ್ಗಾನಿಸ್ತಾನ ವಿರುದ್ಧ ತವರಿನಲ್ಲಿ ಏಕೈಕ ಟೆಸ್ಟ್ ಆಡಿದ್ದ ಗುರ್ನೂರ್ ಬ್ರಾರ್ ಅವರಿಗೆ ಇಲ್ಲಿ ಹೊಸ ರೀತಿಯ ಸವಾಲು ಕಾದಿದೆ. ಅರ್ಷದೀಪ್ ಸಿಂಗ್ ದಾಳಿಗೆ ವೈವಿಧ್ಯತೆ ನೀಡಬಲ್ಲರು. ಗಾಯಾಳುಗಳಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ಹಾರ್ದಿಕ್ ಪಾಂಡ್ಯ ಗೈರಿನಲ್ಲಿ ಶಿವಂ ದುಬೆ ಅವರನ್ನು ಆಡಿಸುವುದು ಅನಿವಾರ್ಯವಾಗಿದೆ. ಸ್ಪಿನ್ ವಿಭಾಗದಲ್ಲಿ ಸ್ಥಾನಕ್ಕೆ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ನಡುವೆ ಪೈಪೋಟಿಯಿದೆ.ಇಂಗ್ಲೆಂಡ್ ತಂಡವು ಜನವರಿ ಕೊನೆಯಿಂದ ಯಾವುದೇ ಏಕದಿನ ಪಂದ್ಯ ಆಡಿಲ್ಲ. ಸಾಕಷ್ಟು ಟಿ20 ಮತ್ತು ಕೆಲವು ಟೆಸ್ಟ್ಗಳನ್ನು ಆಡಿದೆ. ಜೋ ರೂಟ್ ಅವರ ಸೇರ್ಪಡೆ ಬ್ಯಾಟಿಂಗ್ಗೆ ಬಲ ನೀಡಲಿದೆ. ಬೀಸಾಟವಾಡುವ ಹ್ಯಾರಿ ಬ್ರೂಕ್, ಜೇಕಬ್ ಬೆಥೆಲ್ ಮತ್ತು ಜೋಸ್ ಬಟ್ಲರ್ ಅವರಿಂದಾಗಿ ಬ್ಯಾಟಿಂಗ್ ವಿಭಾಗ ಸಶಕ್ತವಾಗಿದೆ.ತಂಡಗಳು:ಭಾರತ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪ ನಾಯಕ), ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್ ಮತ್ತು ಪ್ರಿನ್ಸ್ ಯಾದವ್.ಇಂಗ್ಲೆಂಡ್: ಹ್ಯಾರಿ ಬ್ರೂಕ್ (ನಾಯಕ), ಬೆನ್ ಡಕೆಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಟಾಮ್ ಬ್ಯಾಂಟನ್, ಜೋ ರೂಟ್, ಜೇಕಬ್ ಬೆಥೆಲ್, ವಿಲ್ ಜಾಕ್ಸ್, ರೆಹಾನ್ ಅಹ್ಮದ್, ಲಿಯಾಮ್ ಡಾಸನ್, ಜೇಮ್ಸ್ ಕೋಲ್ಸ್, ಸ್ಯಾಮ್ ಕರನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಜೋಶ್ಅ ಟಂಗ್, ಸಖಿಬ್ ಮಹಮೂದ್, ಅದಿಲ್ ರಶೀದ್.ಪಂದ್ಯ ಆರಂಭ: ಮಧ್ಯಾಹ್ನ 3.30.