ತ್ರಿವಳಿ ಕೊಲೆ: ತನಿಖೆ ಚುರುಕು
ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ನಡೆದ ತ್ರಿವಳಿ ಕೊಲೆಯ ಕಾರಣ ಪತ್ತೆಗೆ ಸಂಬಂಧಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಅಕ್ಕಪಕ್ಕದ ನಿವಾಸಿಗಳು, ಅವರ ಸಂಬಂಧಿಕರು ಮತ್ತು ಸ್ನೇಹಿತರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.ತಾಯಿ, ಅಜ್ಜಿ ಹಾಗೂ ಸೋದರ ಮಾವನನ್ನು ಹತ್ಯೆ ಮಾಡಿದ ಬಳಿಕ ನೇಣು ಹಾಕಿಕೊಂಡು ಆತ್ಮಹತ್ಯೆ

ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ನಡೆದ ತ್ರಿವಳಿ ಕೊಲೆಯ ಕಾರಣ ಪತ್ತೆಗೆ ಸಂಬಂಧಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಅಕ್ಕಪಕ್ಕದ ನಿವಾಸಿಗಳು, ಅವರ ಸಂಬಂಧಿಕರು ಮತ್ತು ಸ್ನೇಹಿತರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.ತಾಯಿ, ಅಜ್ಜಿ ಹಾಗೂ ಸೋದರ ಮಾವನನ್ನು ಹತ್ಯೆ ಮಾಡಿದ ಬಳಿಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕಾರು ಚಾಲಕ ಪ್ರಶಾಂತ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.‘ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ. ಇತ್ತೀಚೆಗೆ ವರ್ತನೆಯಲ್ಲಿ ತುಂಬಾ ಬದಲಾವಣೆಗಳಾಗಿದ್ದವು. ಏಕಾಏಕಿ ಕೋಪಿಸಿಕೊಂಡು ಗಲಾಟೆ ಮಾಡುತ್ತಿದ್ದ, ಕೆಲವೊಮ್ಮೆ ಮೌನವಾಗಿರುತ್ತಿದ್ದ. ಶನಿವಾರ ಯಾವುದೋ ವಿಚಾರಕ್ಕೆ ಕೋಪಗೊಂಡು, ಮೂವರನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ ’ ಎಂದು ಪೊಲೀಸರು ತಿಳಿಸಿದ್ದಾರೆ.ಕುಣಿಗಲ್ ಬಳಿಯ ಮಾಗಡಿಪಾಳ್ಯದ ಕುಟುಂಬವು ಕೊಟ್ಟಿಗೆ ಪಾಳ್ಯದಲ್ಲಿ ಹಲವು ವರ್ಷಗಳಿಂದ ನೆಲಸಿತ್ತು. ಚಿಕ್ಕಣ್ಣ ಹಾಗೂ ಮಂಗಳಮ್ಮ ದಂಪತಿಗೆ ಪ್ರಶಾಂತ್ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಭಾರತ್ ನಗರದಲ್ಲಿ ಚಿಕ್ಕಣ್ಣ ಲಾಂಡ್ರಿ ಅಂಗಡಿ ಇಟ್ಟುಕೊಂಡಿದ್ದಾರೆ.ಅವಿವಾಹಿತನಾಗಿದ್ದ ಪ್ರಶಾಂತ್, ಒಂದು ವರ್ಷದಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಸಂಜೆ ಹೊರಗೆ ಹೋಗಿ ಕುಡಿದು ಬಂದು ತನ್ನ ಸೋದರ ಮಾವನ ಜತೆ ಜಗಳ ಮಾಡುತ್ತಿದ್ದ ಎಂದು ಗೊತ್ತಾಗಿದೆ.ಅವಿವಾಹಿತರಾಗಿದ್ದ ಸತೀಶ್ ಅವರು ಪ್ಲಂಬರ್ ಕೆಲಸ ಮಾಡಿಕೊಂಡು ಇವರ ಮನೆಯಲ್ಲೇ ವಾಸವಾಗಿದ್ದರು. ಪ್ರಶಾಂತ್ ತಂದೆ ಚಿಕ್ಕಣ್ಣ ಬೆಳಿಗ್ಗೆ ಕೆಲಸಕ್ಕೆ ಹೋದ ಬಳಿಕ ಸತೀಶ್ ಮತ್ತು ಪ್ರಶಾಂತ್ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ ಮಾವನನ್ನು ಮೊದಲು ಕೊಲೆ ಮಾಡಿದ್ದ, ತಾಯಿ ಮತ್ತು ಅಜ್ಜಿ ಕೊಠಡಿಯ ಬಳಿ ಬಂದಾಗ, ಅವರಿಬ್ಬರನ್ನೂ ಬಾಗಿಲ ಬಳಿಯೇ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಯಾವ ವಿಚಾರಕ್ಕೆ ಸತೀಶ್ ಹಾಗೂ ಪ್ರಶಾಂತ್ ನಡುವೆ ಜಗಳ ನಡೆದಿತ್ತು? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಕುಟುಂಬದಲ್ಲಿ ಉಳಿದಿರುವ ಪ್ರಶಾಂತ್ ಅವರ ತಂದೆ ಚಿಕ್ಕಣ್ಣ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿ, ಮಾಹಿತಿ ಸಂಗ್ರಹಿಸುತ್ತಿದ್ದಾರೆ.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಅವರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ತಾಯಿಯನ್ನು ಕಳೆದುಕೊಂಡ ದಿವ್ಯಾ ಹಾಗೂ ಸೌಮ್ಯಾ ಅವರ ಆಕ್ರಂದನ ಮುಗಿಲುಮುಟ್ಟಿತ್ತು. ಮಗನಿಂದಲೇ ಪತ್ನಿ ಹಾಗೂ ಅತ್ತೆ, ಬಾಮೈದನ ಹತ್ಯೆಯಾಗಿರುವುದನ್ನು ಕಂಡು ಚಿಕ್ಕಣ್ಣ ರೋದಿಸುತ್ತಿದ್ದರು.