ದೇಗುಲ ಕಾಣಿಕೆಗೆ ಕಣ್ಗಾವಲು
ಬೆಂಗಳೂರು: ಅಯೋಧ್ಯೆ ರಾಮಮಂದಿರದ ಹುಂಡಿ ಕಳವು ಪ್ರಕರಣ ದೇಶದಾದ್ಯಂತ ಸುದ್ದಿಯಾದ ಬಳಿಕ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ, ದೇಗುಲಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾಗಳ ಬದಲು ಸಿ.ಸಿ. ಟಿ.ವಿ ವೆಬ್ ಕ್ಯಾಮೆರಾಗಳನ್ನು ಅಳವಡಿಸಿ, ಹುಂಡಿ, ನಗದು, ಚಿನ್ನ, ಬೆಳ್ಳಿಯ ರಕ್ಷಣೆಗಾಗಿ ಮಾರ್ಗಸೂಚಿ ಹೊರಡಿಸಿದೆ.ರಾಜ್ಯದ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಈ ಕುರಿತು

ಬೆಂಗಳೂರು: ಅಯೋಧ್ಯೆ ರಾಮಮಂದಿರದ ಹುಂಡಿ ಕಳವು ಪ್ರಕರಣ ದೇಶದಾದ್ಯಂತ ಸುದ್ದಿಯಾದ ಬಳಿಕ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ, ದೇಗುಲಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾಗಳ ಬದಲು ಸಿ.ಸಿ. ಟಿ.ವಿ ವೆಬ್ ಕ್ಯಾಮೆರಾಗಳನ್ನು ಅಳವಡಿಸಿ, ಹುಂಡಿ, ನಗದು, ಚಿನ್ನ, ಬೆಳ್ಳಿಯ ರಕ್ಷಣೆಗಾಗಿ ಮಾರ್ಗಸೂಚಿ ಹೊರಡಿಸಿದೆ.ರಾಜ್ಯದ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಈ ಕುರಿತು ಮಾರ್ಗಸೂಚಿ ಪ್ರಕಟಿಸಿದೆ. ದೇವಾಲಯಗಳಲ್ಲಿ ಈಗಿರುವ ಸಿ.ಸಿ. ಟಿ.ವಿ. ಕ್ಯಾಮೆರಾಗಳಿಗೆ ಹಾನಿ ಮಾಡುವುದು, ಡಿವಿಆರ್ ಕಳವು ಮಾಡುವುದು, ನಿಷ್ಕ್ರಿಯಗೊಳಿಸುವುದು, ಧ್ವಂಸಗೊಳಿಸುವುದು, ಕರ್ಪೂರ ಹಚ್ಚಿ ಅದರ ಹೊಗೆಯಲ್ಲಿ ಕ್ಯಾಮೆರಾ ಲೆನ್ಸ್ ಕಾಣದಂತೆ ಮಾಡುವಂತಹ ಮೋಸಗಳನ್ನು ತಪ್ಪಿಸಲು ಸಿ.ಸಿ. ಟಿ.ವಿ. ವೆಬ್ ಕ್ಯಾಮೆರಾ ಅಳವಡಿಸಬೇಕು ಎಂದು ಸೂಚನೆ ನೀಡಿದೆ.ದೇವಾಲಯಗಳಲ್ಲಿ ಎಲ್ಲರಿಗೂ ಕಾಣುವ ಸ್ಥಳದಲ್ಲಿ ಹುಂಡಿಗಳನ್ನು ಇಡಬೇಕು. ನಾಲ್ಕು ದಿಕ್ಕುಗಳಲ್ಲೂ ಸಿ.ಸಿ. ಟಿ.ವಿ. ವೆಬ್ ಕ್ಯಾಮೆರಾ ಅಳವಡಿಸಿ ಚಲನವಲನಗಳನ್ನು ಸರ್ವರ್ನಲ್ಲಿ ಸಂರಕ್ಷಿಸಬೇಕು. ಜಿಲ್ಲಾಧಿಕಾರಿ ಅಥವಾ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿರುವ ಮುಜರಾಯಿ ವಿಭಾಗದಲ್ಲಿ ಇವುಗಳನ್ನು ನಿಯಂತ್ರಿಸಬೇಕು. ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸರ್ವರ್ ಅಳವಡಿಸಿ, ವಸತಿ ಕೋಶದ ವತಿಯಿಂದ ವೆಬ್ ಕ್ಯಾಮೆರಾ ಮೂಲಕ ಎಲ್ಲ ದೇವಾಲಯಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳ ಮೇಲ್ವಿಚಾರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.ಇನ್ನಿತರ ಕ್ರಮಗಳು ಯಾವುವು?ದೇವಾಲಯಗಳಲ್ಲಿ ಅಳವಡಿಸಿರುವ ಸಿ.ಸಿ. ಟಿ.ವಿ. ವೆಬ್ ಕ್ಯಾಮೆರಾಗಳ ಸಂಪರ್ಕವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಪೊಲೀಸ್ ಠಾಣೆಗೆ ಕಲ್ಪಿಸಬೇಕು. ಅವುಗಳ ವೀಕ್ಷಣೆಗೆ ಸಂಚಾರ ನಿಯಂತ್ರಣ ಕೊಠಡಿಯಲ್ಲಿರುವ ಡ್ಯಾಶ್ಬೋರ್ಡ್ಗಳ ವ್ಯವಸ್ಥೆ ಮಾಡಬೇಕು.ಭಕ್ತರು ನಗದು, ಚೀಲಗಳನ್ನು ಹೊತ್ತು ಬಂದಾಗ ಜನಸಂದಣಿಯಲ್ಲಿ ಜೇಬು ಕಳವು, ಬ್ಯಾಗ್ ಕಳವು ಆಗುವುದನ್ನು ತಪ್ಪಿಸಲು ಡಿಜಿಟಲ್ ಪಾವತಿ ವ್ಯವಸ್ಥೆಗೆ ಒತ್ತು ನೀಡಬೇಕು. ಕ್ಯುಆರ್ ಕೋಡ್ ಅಳವಡಿಸಿ, ಅದರ ಅಡಿಯಲ್ಲಿ ಸಂಬಂಧಪಟ್ಟ ಐಎಫ್ಎಸ್ಸಿ ಸಹಿತ ಬ್ಯಾಂಕ್ ವಿವರಗಳನ್ನು ನೀಡಬೇಕು.ಡಿಜಿಟಲ್ ದೇಣಿಗೆ, ನಗದುರಹಿತ ಪಾವತಿಗಳನ್ನು ಸುಗಮಗೊಳಿಸಲು, ಪ್ರಸಾದ, ಸೇವಾ ಟಿಕೆಟ್, ದೇವಾಲಯದ ಇತರ ಸೇವೆಗಳನ್ನು ನಗದುರಹಿತವಾಗಿ ಖರೀದಿಸಲು ಯುಪಿಐ, ಭೀಮ್, ಕ್ಯುಆರ್ ಕೋಡ್ಗಳನ್ನು ಒದಗಿಸಬೇಕು. ಹುಂಡಿ ಇರುವ ಕಡೆ ಮಾತ್ರ ಕ್ಯುಆರ್ ಕೋಡ್ ಅಳವಡಿಸಬೇಕು. ಕ್ಯುಆರ್ ಕೋಡ್ಗಳಿಗೆ ಹಾನಿ ಮಾಡುವುದು, ಬೇರೆ ಖಾತೆಯ ಕ್ಯುಆರ್ ಕೋಡ್ ಅಳವಡಿಸುವುದನ್ನು ತಪ್ಪಿಸಲು ದೇವಾಲಯದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಹುಂಡಿ ಎಣಿಸುವಾಗ ಕಂದಾಯ ಅಧಿಕಾರಿ ಕಡ್ಡಾಯವಾಗಿ ಭಾಗವಹಿಸಬೇಕು. ಸಂಬಂಧಪಟ್ಟ ತಹಶೀಲ್ದಾರ್ ಮೇಲ್ವಿಚಾರಣೆಯಲ್ಲಿ ಈ ಕಾರ್ಯ ನಡೆಯಬೇಕು. ಅದಕ್ಕಾಗಿ ಮುಂಚಿತವಾಗಿಯೇ ದಿನಾಂಕ ನಿಗದಿಪಡಿಸಬೇಕು. ಹೆಚ್ಚು ಕಾಣಿಕೆ, ದೇಣಿಗೆ ಬರುವ ದೇವಸ್ಥಾನಗಳಲ್ಲಿ ವಾರಕ್ಕೆ ಒಮ್ಮೆ, ಉಳಿದ ದೇವಸ್ಥಾನಗಳಲ್ಲಿ ಎರಡು ವಾರಕ್ಕೊಮ್ಮೆ ಎಣಿಕೆ ಮಾಡಬೇಕು. ಎಣಿಕೆ ಸಂದರ್ಭದಲ್ಲಿ ಸ್ವೀಕೃತವಾಗುವ ಚಿನ್ನ, ಬೆಳ್ಳಿಯನ್ನು ಅಂದೇ ಮೌಲ್ಯಮಾಪನ ಮಾಡಿಸಬೇಕು. ಅದೇ ದಿನ ಜಿಲ್ಲಾ/ ಉಪ ಖಜಾನೆಯಲ್ಲಿ ಮೇಲ್ವಿಚಾರಣೆಯೊಂದಿಗೆ ಜಮಾ ಮಾಡಬೇಕು.ಎಣಿಕೆ ಸಂದರ್ಭದಲ್ಲಿ ಹಾಜರಿರುವ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಖಚಿತಪಡಿಸಿಕೊಳ್ಳಲು ‘ಫೇಸ್ ರೆಕಗ್ನಿಶನ್’ ಅಳವಡಿಸಬೇಕು. ಸಿಬ್ಬಂದಿ ಮತ್ತು ಅಧಿಕಾರಿಗಳು ಎಣಿಕೆ ಪ್ರಕ್ರಿಯೆಗೆ ಪ್ರವೇಶಿಸುವ ಸಂದರ್ಭದಲ್ಲಿ ‘ಕೈಯಲ್ಲಿರುವ ನಗದು’ ಘೋಷಣೆ ಮಾಡಬೇಕು.ಎಣಿಕೆಯಿಂದ ಹಿಡಿದು ಬ್ಯಾಂಕ್ಗೆ ಹಸ್ತಾಂತರ ಆಗುವವರೆಗೆ ಸಮಯ, ದಿನಾಂಕ ದಾಖಲೆಯೊಂದಿಗೆ ಸಂಪೂರ್ಣವಾಗಿ ವಿಡಿಯೊ ಚಿತ್ರೀಕರಣ ಮಾಡಬೇಕು. ಹುಂಡಿ ಸ್ಥಳಾಂತರ, ಎಣಿಕೆಗೆ ನೀಡುವುದು, ಹಿಂತಿರುಗಿಸುವುದು ಸಹಿತ ಎಲ್ಲವುದರ ಚಿತ್ರೀಕರಣ ಆಗಬೇಕು. ಸಾರ್ವಜನಿಕರ ನೆರವು ಪಡೆಯುವ ಬದಲು ಗೃಹರಕ್ಷಕ ದಳದ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ಸರ್ಕಾರಿ ನೌಕರರನ್ನು ಬಳಸಿಕೊಳ್ಳಬೇಕು. ಎಣಿಕೆ ಸಂದರ್ಭದಲ್ಲಿ ಕಳವು ಮತ್ತು ಹುಂಡಿ ಕಳವು ಪ್ರಕರಣಗಳು ನಡೆದರೆ ಸಂಬಂಧಪಟ್ಟ ದೇವಸ್ಥಾನದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.ಪರಿಶೀಲನಾ ಕ್ರಮಗಳೇನು?ಸ್ಥಳೀಯ ಪೊಲೀಸರೊಂದಿಗೆ ಸಿ.ಸಿ. ಟಿ.ವಿ. ಲೈವ್ಫೀಡ್ ಸಮನ್ವಯಗೊಳಿಸಬೇಕು. ತುರ್ತು ಪರಿಸ್ಥಿತಿ ಬೆಂಕಿ ಅವಘಡ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಇತರ ಭದ್ರತಾ ಕಾಳಜಿಯ ಸಂದರ್ಭದಲ್ಲಿ ಆಯಾ ಪೊಲೀಸ್ ಠಾಣೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಯೊಂದಿಗೆ ಲೈವ್ ಸಿ.ಸಿ. ಟಿ.ವಿ. ಕ್ಯಾಮೆರಾ ಫೀಡ್ ಅನ್ನು ಹಂಚಿಕೊಳ್ಳಬೇಕು. ಸಿ.ಸಿ. ಟಿ.ವಿ. ಕ್ಯಾಮೆರಾ ಫೀಡ್ಗಳು ಮತ್ತು ಭದ್ರತೆಯನ್ನು ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಠಾಣಾಧಿಕಾರಿ ನಿಯತಕಾಲಿಕವಾಗಿ ಪರಿಶೀಲಿಸಬೇಕು. ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚಿಸಬೇಕು. ಪೊಲೀಸ್ ವರಿಷ್ಠಾಧಿಕಾರಿ ಅಥವಾ ಪೊಲೀಸ್ ಕಮಿಷನರ್ ಮುಜರಾಯಿ ಇಲಾಖೆಯ ಸ್ಥಳೀಯ ಅಧಿಕಾರಿಗಳು ಮುಖ್ಯ ಅಗ್ನಿಶಾಮಕ ಅಧಿಕಾರಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪ್ರತಿನಿಧಿ ಸಮಿತಿಯಲ್ಲಿ ಇರಬೇಕು. ತಿಂಗಳಿಗೆ ಕನಿಷ್ಠ ಒಂದು ಸಭೆಯನ್ನಾದರೂ ಮಾಡಿ ಪರಿಶೀಲಿಸಬೇಕು. ಸ್ಥಳೀಯ ಕಂದಾಯ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರು ದೇವಾಲಯಗಳಿಗೆ 15 ದಿನಗಳಿಗೊಮ್ಮೆ ಭೇಟಿ ನೀಡಬೇಕು. ಅನುಷ್ಠಾನದ ಹಂತ ಗಮನಿಸಿದ ಕೊರತೆಗಳು ಸರಿಪಡಿಸಲು ಕೈಗೊಂಡ ಕ್ರಮಗಳು ಕ್ರಿಯಾ ಯೋಜನೆಗಳ ಅಂಶಗಳನ್ನು ಒಟ್ಟು ಮಾಡಿ ಅನುಸರಣಾ ಮತ್ತು ಪರಿಶೀಲನಾ ವರದಿಯನ್ನು ತಿಂಗಳಿಗೊಮ್ಮೆ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು. ಅದರ ಪ್ರತಿಯನ್ನು ಒಳಾಡಳಿತ ಇಲಾಖೆ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರೀಕ್ಷಕರಿಗೆ ಸಲ್ಲಿಸಬೇಕು.