ರಸ್ತೆ ವಿಸ್ತರಣೆ ಆದರೂ ನಿಲ್ಲದ ಅಪಘಾತಗಳು: ಮೃತ್ಯು ಕೂಪವಾದ ಹನುಮಂತದೇವರ ಕಣಿವೆ!
ಹೊಳಲ್ಕೆರೆ: ಪಟ್ಟಣದ ಹೊರವಲಯದಲ್ಲಿರುವ ಹನುಮಂತ ದೇವರ ಕಣಿವೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ–13 ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ಇಲ್ಲಿ ವಾರಕ್ಕೆ ಕನಿಷ್ಠ ಒಂದಾದರೂ ಅಪಘಾತ ಸಂಭವಿಸುತ್ತದೆ. ವಾಹನ ಚಾಲಕರ ಅಜಾರೂಕತೆ, ಗುತ್ತಿಗೆದಾರರ ನಿರ್ಲಕ್ಷ್ಯ, ಸೂಚನಾ ಫಲಕ ಅಳವಡಿಸದ್ದರಿಂದ ವರ್ಷಕ್ಕೆ ನೂರಾರು ಜೀವಗಳು ಬಲಿಯಾಗುತ್ತಿವೆ.ಹನುಮಂತದೇವರ ಕಣಿವೆ ಮೂರು ತಿರುವುಗಳನ್ನು ಒ

ಹೊಳಲ್ಕೆರೆ: ಪಟ್ಟಣದ ಹೊರವಲಯದಲ್ಲಿರುವ ಹನುಮಂತ ದೇವರ ಕಣಿವೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ–13 ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ಇಲ್ಲಿ ವಾರಕ್ಕೆ ಕನಿಷ್ಠ ಒಂದಾದರೂ ಅಪಘಾತ ಸಂಭವಿಸುತ್ತದೆ. ವಾಹನ ಚಾಲಕರ ಅಜಾರೂಕತೆ, ಗುತ್ತಿಗೆದಾರರ ನಿರ್ಲಕ್ಷ್ಯ, ಸೂಚನಾ ಫಲಕ ಅಳವಡಿಸದ್ದರಿಂದ ವರ್ಷಕ್ಕೆ ನೂರಾರು ಜೀವಗಳು ಬಲಿಯಾಗುತ್ತಿವೆ.ಹನುಮಂತದೇವರ ಕಣಿವೆ ಮೂರು ತಿರುವುಗಳನ್ನು ಒಳಗೊಂಡಿರುವ ಅಂದಾಜು 1 ಕಿ.ಮೀ ವ್ಯಾಪ್ತಿ ಹೊಂದಿದೆ. ಸೊಲ್ಲಾಪುರ– ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಈ ಭಾಗದಲ್ಲಿ ಚಿತ್ರದುರ್ಗ– ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಹಿಂದೆ ಸೊಲ್ಲಾಪುರದಿಂದ ಚಿತ್ರದುರ್ಗದವರೆಗೆ ಇದ್ದ ಹೆದ್ದಾರಿಯನ್ನು 15 ವರ್ಷಗಳ ಹಿಂದೆ ಶಿವಮೊಗ್ಗ, ಕಾರ್ಕಳ ಮೂಲಕ ಮಂಗಳೂರುವರೆಗೆ ವಿಸ್ತರಿಸಲಾಗಿದೆ.ಈ ಮಾರ್ಗ ರಾಷ್ಟ್ರೀಯ ಹೆದ್ದಾರಿ ಆಗಿ ಮೇಲ್ದರ್ಜೆಗೆ ಏರಿದ ನಂತರ ದ್ವಿಪಥವಾಗಿ ವಿಸ್ತರಿಸಲಾಯಿತು. ಕಡಿದಾಗಿದ್ದ ಹನುಮಂತದೇವರ ಕಣಿವೆಯಲ್ಲಿನ ರಸ್ತೆಯನ್ನೂ ದ್ವಿಪಥವನ್ನಾಗಿ ವಿಸ್ತರಿಸಲಾಯಿತು. ಆದರೆ, ಹೊಸ ರಸ್ತೆಯಲ್ಲಿ ತಿರುವುಗಳು ಇದ್ದುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ.ಕಣಿವೆ ಪ್ರವೇಶಿಸುವಾಗ ಯಾವ ಸೂಚನಾ ಫಲಕಗಳೂ ಇಲ್ಲ. ಏಕಾಏಕಿ ರಸ್ತೆ ವಿಭಜಕ ಇರುವ ಬಗ್ಗೆಯೂ ಸಣ್ಣ ಸ್ಟಿಕ್ಕರ್ ಹಾಕಿಲ್ಲ. ಹೀಗಾಗಿ ವೇಗವಾಗಿ ಬರುವ ವಾಹನಗಳು ಡಿವೈಡರ್ಗೆ ಗುದ್ದುವ ಪ್ರಕರಣಗಳು ತೀವ್ರಗೊಳ್ಳುತ್ತಿವೆ.ಚಿತ್ರದುರ್ಗ– ಶಿವಮೊಗ್ಗ ಮಾರ್ಗದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಆಗಿದ್ದರಿಂದ ವಾಹನಗಳ ಸಂಖ್ಯೆಯೂ ಹೆಚ್ಚುತ್ತಾ ಬಂತು. ಬೆಂಗಳೂರಿನಿಂದ ಹಾಸನ, ಸಕಲೇಶಪುರ ಮೂಲಕ ಮಂಗಳೂರು ಕಡೆ ಸಂಚರಿಸುತ್ತಿದ್ದ ವಾಹನಗಳು ಗೂಗಲ್ ಮ್ಯಾಪ್ ಸಮಯದ ಉಳಿತಾಯ ತೋರಿಸುವುದರಿಂದ ರಾಷ್ಟ್ರೀಯ ಹೆದ್ದಾರಿ– 48ರ ಮೂಲಕ ಚಿತ್ರದುರ್ಗ ತಲುಪಿ ಅಲ್ಲಿಂದ ಶಿವಮೊಗ್ಗ, ತೀರ್ಥಹಳ್ಳಿ ಮೂಲಕ ಮಂಗಳೂರು, ಉಡುಪಿ ತಲುಪುತ್ತಾರೆ.ಉತ್ತರ ಕನ್ನಡದ ಹೊನ್ನಾವರ, ಕಾರವಾರ, ಗೋವಾ ಕಡೆಗೆ ಹೋಗುವ ವಾಹನಗಳೂ ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಆದ್ದರಿಂದ ಬೆಳಿಗ್ಗೆ ಮತ್ತು ಸಂಜೆ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ. ರಾತ್ರಿ ಬೆಂಗಳೂರು– ಮಂಗಳೂರು– ಕಾರವಾರಗಳತ್ತ ನೂರಾರು ಖಾಸಗಿ ಬಸ್ಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ವೋಲ್ವೊದಂತಹ ಐಶಾರಾಮಿ ಬಸ್ಗಳೂ ಇಲ್ಲಿ ಅಪಘಾತಕ್ಕೀಡಾಗಿ ಹಲವು ಜನ ಪ್ರಾಣ ಬಿಟ್ಟಿದ್ದಾರೆ.ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹನುಮಂತದೇವರ ಕಣಿವೆ ಪ್ರದೇಶದ ರಸ್ತೆಯನ್ನು ಈಚೆಗೆ ಚತುಷ್ಪಥವನ್ನಾಗಿ ವಿಸ್ತರಿಸಲಾಗಿದೆ. ಆದರೂ ಇಲ್ಲಿ ಅಪಘಾತಗಳು ಸಂಭವಿಸುವುದು ತಪ್ಪಿಲ್ಲ. ಪಟ್ಟಣ ಅಥವಾ ಚಿತ್ರದುರ್ಗದ ಕಡೆಯಿಂದ ದ್ವಿಪಥದಲ್ಲಿ ಬರುವ ವಾಹನಗಳು ಇದ್ದಕ್ಕಿದ್ದಂತೆ ಚತುಷ್ಪಥಕ್ಕೆ ಸೇರಿಕೊಳ್ಳುವಾಗ ವಿಭಜಕ ಕಾಣದೇ ಅಪಘಾತಗಳು ಸಂಭವಿಸುತ್ತಿವೆ.‘ಸಣ್ಣ ರಸ್ತೆಯ ತಿರುವಿನಲ್ಲಿ ಬಂದು ವಿಸ್ತಾರವಾದ ರಸ್ತೆಗೆ ಸೇರಿಕೊಳ್ಳಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ಸರಿಯಾದ ಸೂಚನಾ ಫಲಕಗಳಿಲ್ಲ. ರಸ್ತೆ ನಿರ್ಮಿಸಿದ ಗುತ್ತಿಗೆದಾರರು ಕೆಲಸ ಪೂರ್ಣಗೊಳಿಸದೆ ಹೋಗಿದ್ದಾರೆ. ಹೊಸಬರು ಈ ಮಾರ್ಗದಲ್ಲಿ ಬಂದರೆ ಅಪಘಾತ ಆಗುವುದು ಪಕ್ಕಾ’ ಎನ್ನುತ್ತಾರೆ ಪಟ್ಟಣದ ಕುಮಾರ್.ಪಟ್ಟಣದ ಟೋಲ್ ಗೇಟ್ನಿಂದ ಹಳೇಹಳ್ಳಿ ಗೇಟ್ವರೆಗೆ ಚತುಷ್ಪತ ನಿರ್ಮಿಸಬೇಕು. ಸೂಚನಾ ಫಲಕಗಳು, ರೇಡಿಯಂ, ರಸ್ತೆಗೆ ಬಿಳಿಪಟ್ಟಿ ಅಳವಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260714-44-969052010