ಎಸ್ಐಟಿ ವರದಿ ಕೇಳಿದ ‘ಸುಪ್ರೀಂ’
ನವದೆಹಲಿ (ಪಿಟಿಐ): ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗ ಪ್ರಕರಣದ ತನಿಖೆಯಲ್ಲಿನ ಪ್ರಗತಿ ಕುರಿತ ಸ್ಥಿತಿಗತಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್, ಉತ್ತರ ಪ್ರದೇಶ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಸೋಮವಾರ ನಿರ್ದೇಶಿಸಿದೆ.ದೇಣಿಗೆ ದುರುಪಯೋಗ ವಿವಾದದ ಕುರಿತು ನ್ಯಾಯಯುತ ಮತ್ತು ಕಾಲಮಿತಿಯ ತನಿಖೆಗೆ ಕೋರಿ ಸಲ್ಲಿಸಲಾದ

ನವದೆಹಲಿ (ಪಿಟಿಐ): ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗ ಪ್ರಕರಣದ ತನಿಖೆಯಲ್ಲಿನ ಪ್ರಗತಿ ಕುರಿತ ಸ್ಥಿತಿಗತಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್, ಉತ್ತರ ಪ್ರದೇಶ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಸೋಮವಾರ ನಿರ್ದೇಶಿಸಿದೆ.ದೇಣಿಗೆ ದುರುಪಯೋಗ ವಿವಾದದ ಕುರಿತು ನ್ಯಾಯಯುತ ಮತ್ತು ಕಾಲಮಿತಿಯ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ.ಮೋಹನ್ ಅವರ ಪೀಠ, ಈ ಸಂಬಂಧ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ನೋಟಿಸ್ ಜಾರಿಗೊಳಿಸಿತು.ಮೂವರು ಅರ್ಜಿದಾರರಲ್ಲಿ ಒಬ್ಬರಾದ ನರೇಂದ್ರ ಕುಮಾರ್ ಗೋಸ್ವಾಮಿ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ರಾಮಮಂದಿರದ ಆಡಳಿತವನ್ನು ನೋಡಿಕೊಳ್ಳುವ ಟ್ರಸ್ಟ್ನ ಹಣಕಾಸು ವ್ಯವಹಾರಗಳ ಬಗ್ಗೆ ಮಹಾಲೇಖಪಾಲರು (ಸಿಎಜಿ) ಲೆಕ್ಕಪರಿಶೋಧನೆ ನಡೆಸಬೇಕೆಂದೂ ಅವರು ಕೋರಿದ್ದಾರೆ.ವಕೀಲರಾದ ಅಜಯ್ ಕುಮಾರ್ ರಾಯ್ ಮತ್ತು ದಿನೇಶ್ ಕುಮಾರ್ ಯಾದವ್ ಇದೇ ರೀತಿಯ ಕ್ರಮಗಳನ್ನು ಜರುಗಿಸುವಂತೆ ಕೋರಿ ಎರಡನೇ ಅರ್ಜಿ ಸಲ್ಲಿಸಿದ್ದಾರೆ. ಆರ್ಜೆಡಿ ಸಂಸದ ಸುಧಾಕರ್ ಸಿಂಗ್ ಸಲ್ಲಿಸಿರುವ ಮೂರನೇ ಅರ್ಜಿಯಲ್ಲಿ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಕೋರಲಾಗಿದೆ.ಈ ಹಿಂದೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ಪೀಠವು, ಪ್ರಕರಣವನ್ನು ಮುಂದಿನ ದಿನಾಂಕದಂದು ತುರ್ತು ವಿಚಾರಣೆಗೆ ಉಲ್ಲೇಖಿಸುವಂತೆ ಅರ್ಜಿದಾರರಲ್ಲಿ ಒಬ್ಬರಿಗೆ ಸೂಚಿಸಿತ್ತು.ಅಜಯ್ ಕುಮಾರ್ ಮತ್ತು ದಿನೇಶ್ ಕುಮಾರ್ ಸಲ್ಲಿಸಿರುವ ಅರ್ಜಿಯಲ್ಲಿ, ದೇವಾಲಯದ ಟ್ರಸ್ಟ್ ನಡೆಸಿದೆ ಎನ್ನಲಾದ ಹಣಕಾಸಿನ ಅವ್ಯವಹಾರ, ಟ್ರಸ್ಟ್ನ ದೈನಂದಿನ ಕೆಲಸ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಬಿಐ ನೇತೃತ್ವದ ಬಹು–ಶಿಸ್ತೀಯ ಎಸ್ಐಟಿಯಿಂದ ತನಿಖೆಗೆ ನಿರ್ದೇಶಿಸುವಂತೆ ಕೋರಲಾಗಿದೆ.ಉತ್ತರ ಪ್ರದೇಶ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು, ಎಫ್ಐಆರ್ ಅಥವಾ ಯಾವುದೇ ಕ್ರಿಮಿನಲ್ ಪ್ರಕರಣವನ್ನು ದಾಖಲಿಸದೆಯೇ ಈ ಪ್ರಕರಣದ ಕುರಿತು ತನಿಖೆಯನ್ನು ಪ್ರಾರಂಭಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.ದೇಣಿಗೆ ದುರುಪಯೋಗದ ಆರೋಪ ಕೇಳಿಬಂದ ಬಳಿಕ, ದೇವಾಲಯದ ಟ್ರಸ್ಟ್ನ ಮನವಿಯಂತೆ ಉತ್ತರ ಪ್ರದೇಶ ಸರ್ಕಾರವು ಜೂನ್ 13ರಂದು ಎಸ್ಐಟಿಯನ್ನು ರಚಿಸಿತ್ತು. ಲಖನೌ ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ್ ಪಂತ್, ಪೊಲೀಸ್ ಮಹಾನಿರ್ದೇಶಕ ಕಿರಣ್ ಎಸ್. ಮತ್ತು ವಿಶೇಷ ಕಾರ್ಯದರ್ಶಿ (ಹಣಕಾಸು) ನೀಲ್ ರತನ್ ಅವರು ಎಸ್ಐಟಿಯಲ್ಲಿ ಇದ್ದಾರೆ.