ಮಳೆ ಕೊರತೆ | ತುಂಬಿಲ್ಲ ಬೆಟ್ಟುಗದ್ದೆ: ಭತ್ತಕ್ಕೆ ಎಳ್ಳುನೀರು
ಮಂಗಳೂರು: ‘ಇನ್ನೇನು ಆಟಿ ತಿಂಗಳು ಶುರುವಾಗಲಿದೆ. ಇಷ್ಟು ಹೊತ್ತಿಗೆ ನಾಟಿ ಕಾರ್ಯಗಳೆಲ್ಲ ಮುಕ್ತಾಯದ ಹಂತಕ್ಕೆ ಬರಬೇಕಿತ್ತು. ಈ ಸಲ ಬೈಲು ಗದ್ದೆಗಳ ನಾಟಿಯೇ ಇನ್ನೂ ಪೂರ್ತಿಯಾಗಿ ನಡೆದಿಲ್ಲ. ಬೆಟ್ಟು ಗದ್ದೆಗಳಲ್ಲಿ ನೀರೇ ಆಗಿಲ್ಲ. ಜಿಲ್ಲೆಯ ಬೆಟ್ಟು ಗದ್ದೆಗಳಲ್ಲಿ ಈ ಸಲ ಭತ್ತ ಬೆಳೆಯುವುದು ಕಷ್ಟಸಾಧ್ಯ...’ಬಂಟ್ವಾಳ ತಾಲ್ಲೂಕಿನ ಕಾಡಬೆಟ್ಟು ಗ್ರಾಮದ ಕೃಷಿಕ ಕೇಶವ ಶೆಟ್ಟಿ

ಮಂಗಳೂರು: ‘ಇನ್ನೇನು ಆಟಿ ತಿಂಗಳು ಶುರುವಾಗಲಿದೆ. ಇಷ್ಟು ಹೊತ್ತಿಗೆ ನಾಟಿ ಕಾರ್ಯಗಳೆಲ್ಲ ಮುಕ್ತಾಯದ ಹಂತಕ್ಕೆ ಬರಬೇಕಿತ್ತು. ಈ ಸಲ ಬೈಲು ಗದ್ದೆಗಳ ನಾಟಿಯೇ ಇನ್ನೂ ಪೂರ್ತಿಯಾಗಿ ನಡೆದಿಲ್ಲ. ಬೆಟ್ಟು ಗದ್ದೆಗಳಲ್ಲಿ ನೀರೇ ಆಗಿಲ್ಲ. ಜಿಲ್ಲೆಯ ಬೆಟ್ಟು ಗದ್ದೆಗಳಲ್ಲಿ ಈ ಸಲ ಭತ್ತ ಬೆಳೆಯುವುದು ಕಷ್ಟಸಾಧ್ಯ...’ಬಂಟ್ವಾಳ ತಾಲ್ಲೂಕಿನ ಕಾಡಬೆಟ್ಟು ಗ್ರಾಮದ ಕೃಷಿಕ ಕೇಶವ ಶೆಟ್ಟಿ ಅವರ ಈ ಮಾತುಗಳು ಜಿಲ್ಲೆಯ ಬಹುತೇಕ ಭತ್ತದ ಬೇಸಾಯಗಾರರ ಅಭಿಪ್ರಾಯಕ್ಕೆ ಕನ್ನಡಿ ಹಿಡಿಯುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಶೇ 37ರಷ್ಟು ಮಳೆ ಕೊರತೆ ಎದುರಾಗಿದೆ. ಮುಂಗಾರು ಮಳೆ ಕೊರತೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಬಹುತೇಕ ರೈತರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.‘ಬೆಟ್ಟು ಗದ್ದೆಗಳ ಉಳುಮೆಗೆ ಜಿಲ್ಲೆಯ ಬಹುತೇಕ ರೈತರು ಟಿಲ್ಲರ್ ಗಳನ್ನೇ ನೆಚ್ಚಿಕೊಂಡಿದ್ದಾರೆ. ಗದ್ದೆ ಕೆಸರಾಗುವಷ್ಟು ನೀರು ಇಲ್ಲದಿದ್ದರೆ ಟಿಲ್ಲರ್ನಲ್ಲಿ ಉಳುಮೆ ಮಾಡಲು ಸಾಧ್ಯವಿಲ್ಲ. ನಾನು ಬೆಟ್ಟು ಗದ್ದೆಗಳಿಗೆ ಸತತ ಮೂರು ದಿನ 5 ಎಚ್ಪಿ ಸಾಮರ್ಥ್ಯದ ಮೂರು ಪಂಪ್ಸೆಟ್ಗಳಿಂದ ನೀರು ಹರಿಸಿದ್ದೆ. ಮರುದಿನ ಗದ್ದೆಯಲ್ಲಿ ನೀರಿನ ಪಸೆಯೂ ಇಲ್ಲ. ಪರಿಸ್ಥಿತಿ ಹೀಗಾದರೆ ಉತ್ತಿ ಬೆಳೆಯುವುದು ಹೇಗೆ’ ಎಂಬುದು ಕೇಶವ ಶೆಟ್ಟಿ ಅವರ ಪ್ರಶ್ನೆ.ಈಗಾಗಲೇ ನೆಲದ ಮೇಲೆ ಹುಲ್ಲು ಬೆಳೆದಿದ್ದು, ಇನ್ನು ಎಷ್ಟು ಮಳೆ ಬಂದರೂ ನೀರು ಆಳಕ್ಕೆ ಇಂಗುವುದಿಲ್ಲ. ಹಾಗಾಗಿ ಗದ್ದೆಯಲ್ಲಿ ನೀರು ನಿಲ್ಲಿಸುವುದು ಕಷ್ಟ ಎಂದರು.‘ಇಲ್ಲಿ ಭತ್ತದ ನಾಟಿಗೆ ಆರ್ದ್ರಾ ಹಾಗೂ ಪುನರ್ವಸು ಮಳೆಯೇ ಬಲ. ಆದರೆ, ಈ ಸಲ ಈ ಎರಡೂ ಮಳೆಗಳು ಕೈಕೊಟ್ಟಿವೆ. ಆಟಿಯಲ್ಲಿ ಮಳೆಯಾಗುವ ಲಕ್ಷಣವೂ ಕಾಣಿಸುತ್ತಿಲ್ಲ. ಸೋಣ ತಿಂಗಳಲ್ಲಿ ಬಿಸಿಲು ಹೆಚ್ಚು ಇರುತ್ತದೆ. ಬೆಟ್ಟು ಗದ್ದೆಯಲ್ಲಿ ನಾಟಿ ಮಾಡುವ ಸಾಹಸಕ್ಕೆ ಮುಂದಾಗದಿರುವುದೇ ಲೇಸು. ಹಾಗಾಗಿ ಬೆಟ್ಟು ಗದ್ದೆಗಳಲ್ಲಿ ಈ ವರ್ಷ ಭತ್ತ ಬೆಳೆಯುವುದು ಕಷ್ಟ’ ಎಂದು ಮೂಡುಬಿದಿರೆ ತಾಲ್ಲೂಕಿನ ಕೆಲ್ಲಪುತ್ತಿಗೆಯ ಕೃಷಿಕ ಗೋಪಾಲ್ ತಿಳಿಸಿದರು.‘ಕಳೆದ ವರ್ಷ ಮಳೆ ಜಾಸ್ತಿಯಾಗಿ, ನಾವು ನಾಟಿ ಮಾಡಿದ್ದ ಪೈರೆಲ್ಲ ಕೊಳೆತು ಹೋಗಿತ್ತು. ಈ ಸಲ ಬಿತ್ತನೆ ಮಾಡುವುದಕ್ಕೂ ನೀರಿಲ್ಲ. ನಮ್ಮಲ್ಲಿ ತೋಡಿಗೆ ಕಟ್ಟ ಕಟ್ಟಿದ್ದಾರೆ. ಹಾಗಾಗಿ ತೋಡಿನಲ್ಲಿ ನೀರಿನ ಹರಿವು ಇದೆ. ಬೈಲುಗದ್ದೆಗಳಲ್ಲಿ ಕಷ್ಟ ಪಟ್ಟು ಬಿತ್ತನೆ ಮಾಡಿದ್ದೇವೆ. ಎಣೆಲ್ ಬೆಳೆಯನ್ನು ಹೇಗಾದರೂ ಮಾಡಿ ಮುಗಿಸಬಹುದು. ಆದರೆ, ಸುಗ್ಗಿ ಬೆಳೆ ಈ ಸಲ ಕಷ್ಟ’ ಎಂದು ಅವರು ಅಭಿಪ್ರಾಯಪಟ್ಟರು.‘ನಾನು 40 ವರ್ಷಗಳಿಂದ ಕೃಷಿ ಮಾಡುತ್ತಾ ಬಂದಿದ್ದೇನೆ. ಈಚಿನ ವರ್ಷಗಳಲ್ಲಿ ಯಾವತ್ತೂ ಇಷ್ಟೊಂದು ಮಳೆ ಕೊರತೆ ಎದುರಾಗಿದ್ದೇ ಇಲ್ಲ. 1987–88ರಲ್ಲಿ ಒಮ್ಮೆ ಇದೇ ರೀತಿಯ ವಾತಾವರಣ ಸೃಷ್ಟಿಯಾಗಿದ್ದ ನೆನಪು. 2018ರಲ್ಲಿ ಮಳೆ ಕೊರತೆ ಎದುರಾಗಿತ್ತಾದರೂ, ಅದರ ತೀವ್ರತೆ ಇಷ್ಟೊಂದು ಇರಲಿಲ್ಲ’ ಎನ್ನುತ್ತಾರೆ ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿ ಕೊಲ್ಲಿಯ ಕೃಷಿಕ ಪರಮೇಶ್ವರ ರಾವ್ ಬಿ.ಕೆ.ಇಳುವರಿ ಕುಸಿತ– ದರ ಏರಿಕೆ ಆತಂಕ‘ನಾಟಿ ಮಾಡಿದ ಭತ್ತದ ಸಸಿಗಳಿಗೆ ಆರಂಭದಲ್ಲಿ ಸಾಕಷ್ಟು ನೀರು ಸಿಗುವುದು ಬಹಳ ಮುಖ್ಯ. ಆರಂಭಿಕ ಹಂತದ ಪೋಷಣೆ ಸರಿಯಾಗಿ ಸಿಗದಿದ್ದರೆ ಇಳುವರಿಯಲ್ಲಿ ಗಣನೀಯವಾಗಿ ಕುಸಿತವಾಗಲಿದೆ. ಶೇ 30ರಿಂದ ಶೇ 40 ರಷ್ಟು ಇಳುವರಿ ಸಿಕ್ಕರೆ ಹೆಚ್ಚು’ ಎನ್ನುತ್ತಾರೆ ಪರಮೇಶ್ವರ ರಾವ್ ಬಿ.ಕೆ.‘ಮಳೆ ಕೊರತೆಯಾದಾಗ ಬಿತ್ತನೆಯ ಪ್ರಮಾಣದ ಜೊತೆಗೆ ಇಳುವರಿಯೂ ಕುಸಿಯುತ್ತದೆ. ಭತ್ತ ಬಳೆಯಲು ತಗಲುವ ಖರ್ಚು ಹೆಚ್ಚಾಗುತ್ತದೆ. ಇದು ಪರೋಕ್ಷವಾಗಿ ಭತ್ತದ ದರ ಏರಿಕೆಗೂ ಕಾರಣವಾಗುತ್ತದೆ. ಭತ್ತದ ಬೆಳೆ ಕಟಾವಿಗೆ ಬಂದ ಬಳಿಕ ಭತ್ತ ಹಾಗೂ ಅಕ್ಕಿಯ ದರ ದುಪ್ಪಟ್ಟಾದರೂ ಆಶ್ಚರ್ಯ ಇಲ್ಲ’ ಎನ್ನುತ್ತಾರೆ ಕೆಲ್ಲಪುತ್ತಿಗೆಯ ಗೋಪಾಲ್. ಕೀಟ ಬಾಧೆ ಹೆಚ್ಚಳ– ಕಳವಳಗದ್ದೆಗಳಲ್ಲಿ ನೀರಿನ ಒರತೆ ಕಡಿಮೆಯಾದರೆ ಭತ್ತದ ಸಸಿಗಳು ಟಿಸಿಲೊಡೆ ಯುವುದು ಕಡಿ ಮೆಯಾಗುತ್ತದೆ. ಗದ್ದೆಯಲ್ಲಿ ನೀರು ನಿಲ್ಲದಿದ್ದರೆ, ಹಳ್ಳ ಕೊಳ್ಳಗಳಲ್ಲಿ ನೀರಿನ ಹರಿವು ಕಡಿಮೆಯಾದರೆ, ಮೀನು, ಕಪ್ಪೆ, ಏಡಿ ಮುಂತಾದ ಜೀವಿಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಜೀವಿಗಳು ಕೀಟ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಮಳೆ ಕೊರತೆ ಅಂತಿಮವಾಗಿ ಕೀಟ ಬಾಧೆ ಹೆಚ್ಚಳಕ್ಕೂ ಕಾರಣವಾಗು ತ್ತದೆ ಎಂದು ಅನುಭವಿ ಕೃಷಿಕ ಪರಮೇಶ್ವರ ರಾವ್ ಬಿ.ಕೆ. ತಿಳಿಸಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260714-29-1460167404