ಚಿತ್ತಾಪುರ | ಬಾರದ ಮಳೆ: ಬೆಳೆ ಹರಗುತ್ತಿರುವ ರೈತರು..!
ಚಿತ್ತಾಪುರ: ಮುಂಗಾರು ಮಳೆ ಸಕಾಲಕ್ಕೆ ಬಾರದೆ, ಬಿತ್ತನೆ ಮಾಡಿರುವ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ಬಾಡುತ್ತಿವೆ. ತೊಗರಿ ಮೊಳಕೆ ನೆಲಕಚ್ಚಿ ಕುಳಿತಿವೆ. ಬಿತ್ತನೆ ಮಾಡಿರುವ ಬೆಳೆಗಳು ಸರಿಯಾಗಿ ಬೆಳವಣಿಗೆ ಕಾಣದಿರುವುದನ್ನು ಕಂಡು ರೈತರು ಹೊಲಗಳನ್ನು ಹರಗಲು ಶುರು ಮಾಡಿದ್ದಾರೆ.ಮುಡಬೂಳ, ಮರಗೋಳ, ಇಟಗಾ, ದಂಡೋತಿ, ಭಾಗೋಡಿ ಗ್ರಾಮಗಳಲ್ಲಿ ಅನೇಕ ರೈತರು ಮಳೆ ಬರುವ ನಿರೀ

ಚಿತ್ತಾಪುರ: ಮುಂಗಾರು ಮಳೆ ಸಕಾಲಕ್ಕೆ ಬಾರದೆ, ಬಿತ್ತನೆ ಮಾಡಿರುವ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ಬಾಡುತ್ತಿವೆ. ತೊಗರಿ ಮೊಳಕೆ ನೆಲಕಚ್ಚಿ ಕುಳಿತಿವೆ. ಬಿತ್ತನೆ ಮಾಡಿರುವ ಬೆಳೆಗಳು ಸರಿಯಾಗಿ ಬೆಳವಣಿಗೆ ಕಾಣದಿರುವುದನ್ನು ಕಂಡು ರೈತರು ಹೊಲಗಳನ್ನು ಹರಗಲು ಶುರು ಮಾಡಿದ್ದಾರೆ.ಮುಡಬೂಳ, ಮರಗೋಳ, ಇಟಗಾ, ದಂಡೋತಿ, ಭಾಗೋಡಿ ಗ್ರಾಮಗಳಲ್ಲಿ ಅನೇಕ ರೈತರು ಮಳೆ ಬರುವ ನಿರೀಕ್ಷೆ ಬಿಟ್ಟು ತಮ್ಮ ಹೊಲದಲ್ಲಿ ಬಾಡಿದ ಹೆಸರು, ಉದ್ದು ಬೆಳೆ ಹರಗುತ್ತಿದ್ದಾರೆ. ಇನ್ನು ಮುಂದೆ ಮಳೆ ಬಂದಾಗ ತೊಗರಿಯಾದರೂ ಬಿತ್ತನೆ ಮಾಡಬಹುದು ಎನ್ನುವ ಆಶಾಭಾವನೆ ಇಟ್ಟುಕೊಂಡು ಹೊಲ ಹಸನು ಮಾಡುತ್ತಿದ್ದಾರೆ.ಮುಂಗಾರು ಹಂಗಾಮಿನಲ್ಲಿ ಅಲ್ಪಾವಧಿ ಬೆಳೆ ಬೆಳೆದು ಲಾಭ ಮಾಡಿಕೊಳ್ಳುವ ಸದುದ್ದೇಶದಿಂದ ರಸಗೊಬ್ಬರ, ಬಿತ್ತನೆ ಬೀಜಕ್ಕೆ ಖರ್ಚು ಮಾಡಿರುವ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.ಮುಂಗಾರು ಹಂಗಾಮಿನಲ್ಲಿ ಜೂ.1 ರಿಂದ ಜು.11ರ ವರೆಗೆ ವಾಡಿಕೆಯಂತೆ 147 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಕೇವಲ 71 ಮಿ.ಮೀ ಮಳೆಯಾಗಿದೆ. ಜೂನ್ ತಿಂಗಳಿನಲ್ಲಿ ಶೇ 40 ರಷ್ಟು ಮಳೆ ಕೊರತೆಯಾಗಿದೆ. ಜುಲೈ ತಿಂಗಳಿನಲ್ಲಿ ಈವರೆಗೆ ಶೇ 80ರಷ್ಟು ಮಳೆ ಕೊರತೆಯಾಗಿದೆ. ತಾಲ್ಲೂಕಿನಲ್ಲಿ ಒಟ್ಟು ಸರಾಸರಿ ಶೇ 51ರಷ್ಟು ಮಳೆ ಕೊರತೆಯಾಗಿದೆ.ಮುಂಗಾರು ಹಂಗಾಮಿನಲ್ಲಿ ಒಟ್ಟು 75,930 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, ಉದ್ದು, ತೊಗರಿ, ಸೋಯಾ ಮುಂತಾದ ಬೆಳೆಗಳ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, ಮಳೆ ಕೊರತೆಯಿಂದಾಗಿ ಕೇವಲ 37,815 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇ 49ರಷ್ಟು ಮಾತ್ರ ಬಿತ್ತನೆಯಾಗಿದೆ.ತಾಲ್ಲೂಕಿನಲ್ಲಿ 45,400 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿಯಿತ್ತು. ಆದರೆ, ಮಳೆ ಕೊರತೆಯಿಂದಾಗಿ ಕೇವಲ 16,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಕೇಲವ ಶೇ 36 ರಷ್ಟು ಸಾಧನೆ ಕಂಡಿದೆ. ಇನ್ನು ಶೇ 64ರಷ್ಟು ತೊಗರಿ ಬಿತ್ತನೆ ಮಾಡುವುದು ಬಾಕಿಯಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.ತಾಲ್ಲೂಕಿನಲ್ಲಿ ರೈತರ ಪ್ರಮುಖ ವಾಣಿಜ್ಯ ಬೆಳೆ ಎಂದೇ ಹೆಸರಾದ ತೊಗರಿ ಬಿತ್ತನೆ ಮಾಡಲಾಗದೆ ರೈತರು ಚಡಪಡಿಸುತ್ತಿದ್ದಾರೆ. ಬಿತ್ತನೆ ಮಾಡಿರುವ ತೊಗರಿ ಬೆಳೆಯು ತೇವಾಂಶದ ಕೊರತೆಯಿಂದಾಗಿ ಮೊಳಕೆಯ ಹಂತದಲ್ಲೆ ಬೆಳವಣಿಗೆ ಕುಂಠಿತಗೊಂಡು ನೆಲೆಬಿಟ್ಟು ಮೇಲೇಳುತ್ತಿಲ್ಲ. ಒಂದು ಕಡೆಗೆ ಬಿತ್ತನೆ ಮಾಡಿರುವ ಹೆಸರು, ಉದ್ದು ಬೆಳೆಯ ಹಾನಿಯ ಹೊಡೆತ, ಮತ್ತೊಂದೆಡೆ ತೊಗರಿ ಬಿತ್ತನೆ ಮಾಡಲಾಗದೆ ರೈತರ ಬದುಕು ಆರ್ಥಿಕ ಹಾನಿಯ ಜೊತೆಗೆ ಅತಂತ್ರ ಸ್ಥತಿಗೆ ತಲುಪಿದೆ.ಮಳೆ ಕೊರತೆಯಿಂದಾಗಿ ಹೊಲಗಳಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳುತ್ತಿವೆ. ಕೃಷಿ ಕೂಲಿಕಾರ್ಮಿಕರಿಗೆ ಕೆಲಸ ಸಿಗದೆ ಮನೆಯಲ್ಲೇ ಕುಳಿತು ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಟುಂಬ ಜೀವನ ನಿರ್ವಹಣೆ ಹೇಗೆ ಎನ್ನುವ ಚಿಂತೆ, ಆತಂಕ ಹೆಪ್ಪುಗಟ್ಟುತ್ತಿದೆ. ಮಳೆ ಬಾರದಿದ್ದರೆ ಬರಗಾಲದ ಛಾಯೆಯಲ್ಲಿ ಬದುಕಿನ ನಿರ್ವಹಣೆಗೆ ಕೆಲಸ ಅರಿಸಿಕೊಂಡು ದೂರದ ನಗರ ಪಟ್ಟಣಗಳಿಗೆ ಗುಳೆ ಹೋಗುಬೇಕಾಗುತ್ತದೆ ಎನ್ನುವ ಆತಂಕದ ಮಾತುಗಳು ಕೇಳಿ ಬರುತ್ತಿವೆ.ಇಂದುಶೇಖರ ಬೆಂಕಿ, ಭಾಗೋಡಿ ರೈತಮಳೆ ಬಾರದೆ ಬರದ ಛಾಯೆ ಆವರಿಸಿದೆ. ಹೊಲಗಳಲ್ಲಿ ಬೆಳೆಗಳು ಬಾಡುತ್ತಿವೆ. ಸರ್ಕಾರ ರೈತರ ನೆರವಿಗೆ ದಾವಿಸಬೇಕು. ದುಡಿಯುವ ವರ್ಗದ ಜನರಿಗೆ ಕೆಲಸ ಕೊಡಲು ತುರ್ತಾಗಿ ಮುಂದಾಗಬೇಕು ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260714-31-126531306