ಜಪಾನ್ ಓಪನ್ ಬ್ಯಾಡ್ಮಿಂಟನ್: ಪಿ.ವಿ.ಸಿಂಧು ಮುನ್ನಡೆ
ಟೋಕಿಯೊ (ಪಿಟಿಐ): ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ ಅವರಿಗೆ ಭುಜದ ನೋವು ಮರುಕಳಿಸಿತು. ಹೀಗಾಗಿ ಅವರು ಚಿರಾಗ್ ಶೆಟ್ಟಿ ಜೊತೆ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಅರ್ಧದಲ್ಲೇ ಹಿಂದೆಸರಿದರು. ಮಹಿಳೆಯರ ಸಿಂಗಲ್ಸ್ನಲ್ಲಿ ಪಿ.ವಿ.ಸಿಂಧು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.ಸಿಂಗಪುರ ಓಪನ್ ಟೂರ್ನಿ ಗೆದ್ದು, ಎರಡು

ಟೋಕಿಯೊ (ಪಿಟಿಐ): ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ ಅವರಿಗೆ ಭುಜದ ನೋವು ಮರುಕಳಿಸಿತು. ಹೀಗಾಗಿ ಅವರು ಚಿರಾಗ್ ಶೆಟ್ಟಿ ಜೊತೆ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಅರ್ಧದಲ್ಲೇ ಹಿಂದೆಸರಿದರು. ಮಹಿಳೆಯರ ಸಿಂಗಲ್ಸ್ನಲ್ಲಿ ಪಿ.ವಿ.ಸಿಂಧು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.ಸಿಂಗಪುರ ಓಪನ್ ಟೂರ್ನಿ ಗೆದ್ದು, ಎರಡು ವರ್ಷಗಳ ಪ್ರಶಸ್ತಿ ಬರ ನೀಗಿಸಿದ್ದ ಭಾರತದ ಅಗ್ರ ಜೋಡಿ, ಕಳೆದ ತಿಂಗಳು ಇಂಡೊನೇಷ್ಯಾ ಓಪನ್ ಟೂರ್ನಿಯಲ್ಲೂ ಹಿಂದೆಸರಿದಿತ್ತು. ಈ ಬಾರಿ ಡೆನ್ಮಾರ್ಕ್ನ ಡೇನಿಯಲ್ ಲಂಡ್ಗಾರ್ಡ್– ಮಾಡ್ಸ್ ವೆಸ್ಟರ್ಗಾರ್ಡ್ ಎದುರು 19–21ರಲ್ಲಿ ಮೊದಲ ಗೇಮ್ ಕಳೆದುಕೊಂಡ ಬಳಿಕ ಪಂದ್ಯದಿಂದ ಭಾರತದ ಆಟಗಾರರು ಹಿಂದೆಸರಿದರು.ಭಾರತದ ಆಟಗಾರರು ಮುಂದಿನ ವಾರ ಚೀನಾ ಓಪನ್ನಿಂದಲೂ ಹಿಂದೆಸರಿಯಲಿದ್ದಾರೆ. ಆಗಸ್ಟ್ನಲ್ಲಿ ತವರಿನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಷಿಪ್ಗೆ ಮುನ್ನ ಪೂರ್ಣಪ್ರಮಾಣದಲ್ಲಿ ಫಿಟ್ನೆಸ್ ಪಡೆಯುವ ಕಡೆ ಗಮನಹರಿಸಲಿದ್ದಾರೆ ಎಂದು ಡಬಲ್ಸ್ ಮುಖ್ಯ ಕೋಚ್ ತಾನ್ ಕಿಮ್ ಹರ್ ಹೇಳಿದರು.‘ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಹಿಡಿಯಲಿದೆ. ವಿಶ್ವ ಚಾಂಪಿಯನ್ಷಿಪ್ಗೆ ಸಜ್ಜಾಗಲು ಕನಿಷ್ಠ ನಾಲ್ಕು ವಾರ ಹಿಡಿಯಲಿದೆ’ ಎಂದು ಅವರು ಪಿಟಿಐಗೆ ತಿಳಿಸಿದರು.ಪ್ರಸ್ತುತ ವಿಶ್ವ ರ್ಯಾಂಕಿಂಗ್ನಲ್ಲಿ 10ನೇ ಸ್ಥಾನದಲ್ಲಿರುವ ಸಿಂಧು, ಸೂಪರ್ 750 ಶ್ರೇಣಿಯ ಈ ಟೂರ್ನಿಯ ಸಿಂಗಲ್ಸ್ ಮೊದಲ ಸುತ್ತಿನಲ್ಲಿ 21–14, 21–11ರಲ್ಲಿ 37ನೇ ಕ್ರಮಾಂಕದ ವಾಂಗ್ ಲಿಂಗ್ ಚಿಂಗ್ (ಮಲೇಷ್ಯಾ) ಅವರನ್ನು ಸೋಲಿಸಿದರು.ಮಿಶ್ರ ಡಬಲ್ಸ್ನಲ್ಲಿ ಭಾರತದ ಧ್ರುವ್ ಕಪಿಲ– ತನಿಶಾ ಕ್ರಾಸ್ಟೊ ಜೋಡಿ 21–16, 21–14 ರಿಂದ ಸ್ಕಾಟ್ಲೆಂಡ್ನ ಅಲೆಕ್ಸಾಂಡರ್ ಡುನ್– ಜೂಲಿ ಮೆಕ್ಫರ್ಸನ್ ಜೋಡಿಯನ್ನು ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿತು.ಆದರೆ ರೋಹನ್ ಕಪೂರ್ ಮತ್ತು ರುತ್ವಿಕಾ ಶಿವಾನಿ ಗದ್ದೆ ಜೋಡಿ 11–21, 10–21ರಲ್ಲಿ ಅಗ್ರ ಶ್ರೇಯಾಂಕದ ಫೆಂಗ್ ಯಾನ್ ಝ್ಸೆ– ಹುವಾಂಗ್ ಡಾಂಗ್ ಪಿಂಗ್ (ಚೀನಾ) ಅವರಿಗೆ ಮಣಿಯಿತು.