ಶಾಲೆಗೆ ನುಗ್ಗಿ ಗಲಾಟೆ: 12 ಮಂದಿ ವಿರುದ್ಧ ಎಫ್ಐಆರ್
ಬೆಂಗಳೂರು: ಥಣಿಸಂದ್ರದ ನಾರಾಯಣಪುರದಲ್ಲಿ ಮದರಸಾ ಜಾಗದ ವಿಚಾರಕ್ಕೆ ಶಾಲೆಗೆ ನುಗ್ಗಿ ಗಲಾಟೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು–ಪ್ರತಿ ದೂರು ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ 12 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.ಇಲಿಯಾಸ್, ಮೊಹಮ್ಮದ್ ಶೋಯೆಬ್, ಮೊಹಮ್ಮದ್ ಅಲಿ, ಅಬ್ದುಲ್ ಮತೀನ್, ಸುಫಾಯಿನ್ ಸಬೀರ್, ವಾಸೀಂ ಅ

ಬೆಂಗಳೂರು: ಥಣಿಸಂದ್ರದ ನಾರಾಯಣಪುರದಲ್ಲಿ ಮದರಸಾ ಜಾಗದ ವಿಚಾರಕ್ಕೆ ಶಾಲೆಗೆ ನುಗ್ಗಿ ಗಲಾಟೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು–ಪ್ರತಿ ದೂರು ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ 12 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.ಇಲಿಯಾಸ್, ಮೊಹಮ್ಮದ್ ಶೋಯೆಬ್, ಮೊಹಮ್ಮದ್ ಅಲಿ, ಅಬ್ದುಲ್ ಮತೀನ್, ಸುಫಾಯಿನ್ ಸಬೀರ್, ವಾಸೀಂ ಅಹ್ಮದ್, ಅಬ್ದುಲ್ ಸಮೀರ್, ನೂರ್ ಅಲ್ಮಾ, ಫೈರೋಜ್ ಖಾನ್, ಮೊಹಮ್ಮದ್ ಅಖ್ತರ್, ಮುಸ್ತಾರಿ, ಆಸ್ಮಾ ತಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಎಎಸ್ಐ ಸತೀಶ್ ಕುಮಾರ್ ಅವರು ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲಾಗಿದೆ. ರಾಡ್, ಸುತ್ತಿಗೆ, ಗಾಜು ತೆಗೆದುಕೊಂಡು ಹಲ್ಲೆ ನಡೆಸಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.ಸಾಮರ್ ಇಂಟರ್ನ್ಯಾಷನಲ್ ಸ್ಕೂಲ್ಗೆ ನುಗ್ಗಿದ ಕೆಲವರು ಅಲ್ಲಿನ ಕಿಟಕಿ ಗಾಜುಗಳನ್ನು ಒಡೆದು ಒಳಗೆ ನುಗ್ಗಲು ಪ್ರಯತ್ನಿಸಿದ್ದರು. ಈ ವೇಳೆ ಒಳಗಿದ್ದ ಕೆಲವು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಖಾರದ ಪುಡಿ ಹಾಕಿದ ನೀರನ್ನು ಎರಚಿ ಅವರನ್ನು ಓಡಿಸಲು ಯತ್ನಿಸಿದ್ದರು. ಆ ವೇಳೆ ಜಗಳ ತಾರಕಕ್ಕೇರಿತ್ತು ಎಂದು ಮೂಲಗಳು ತಿಳಿಸಿವೆ.ಮಸೀ ಅಹಮದ್ ಅವರು 1988ರಲ್ಲಿ ಮದರಸಾಗೆ 10 ಗುಂಟೆ ಜಮೀನನ್ನು ದಾನವಾಗಿ ಕೊಟ್ಟಿದ್ದರು. ಆ ಜಾಗದಲ್ಲಿ ಖಲೀದ್ ಮುಶ್ರಫ್, ಮದರಸಾ ಮಾಡಿಕೊಂಡು 5 ಎಕರೆ ಜಾಗದಲ್ಲಿ ಶಾಲೆ, ಕಾಲೇಜು ನಿರ್ಮಿಸಿ ಕಳೆದ ಕೆಲವು ವರ್ಷಗಳಿಂದ ನಿರ್ವಹಣೆ ಮಾಡುತ್ತಿದ್ದರು ಎಂದು ಮೂಲಗಳು ಹೇಳಿವೆ.‘10 ಗುಂಟೆ ಜಮೀನು ದಾನವಾಗಿ ಕೊಟ್ಟಿದ್ದೇವೆ. ಆದರೆ, ಮದರಸಾದವರು ಅಕ್ರಮವಾಗಿ ಪಕ್ಕದ 5 ಎಕರೆ ಜಾಗವನ್ನು ಕಬಳಿಸಿಕೊಂಡಿದ್ದಾರೆ’ ಎಂಬುದು ಮೂಲ ಮಾಲೀಕ ಮಸೀ ಅಹಮದ್ ಅವರ ಮಕ್ಕಳು, ಮೊಮ್ಮಕ್ಕಳ ಆರೋಪವಾಗಿದೆ. ಇದೇ ವಿಚಾರಕ್ಕೆ ಕೆಲವರು ಶಾಲೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗಿದೆ.