ನುಡಿ ಬೆಳಗು | ಭಾವ ಬೆಸೆದ ಭಾಗಗಳು
ಬಾಳಿನಲ್ಲಿ ಸಣ್ಣ ಸಣ್ಣ ಸಂಗತಿಗಳು ಬಹುಪಾಲು ಕಾಣುವುದೇ ಇಲ್ಲ. ಕೇವಲ ದೃಷ್ಟಿಗೆ ಗೋಚರವಾಗುವ ದೊಡ್ಡ ದೊಡ್ಡ ಸಂಗತಿಗಳಿಗಷ್ಟೇ ಮಹತ್ವ ಕೊಡುವ ನಮ್ಮ ಆಲೋಚನಾ ಕ್ರಮಗಳನ್ನು ಈ ದೃಷ್ಟಾಂತದಲ್ಲಿ ಹಿಡಿದು ಕೊಡಲಾಗಿದೆ. ಚಿತ್ರಕಲಾ ಶಿಕ್ಷಕರೊಬ್ಬರು ಒಂದು ಕುರ್ಚಿಯ ಚಿತ್ರ ಬರೆಯಲು ಹೇಳಿ ಎಲ್ಲರಿಗೂ ಹಾಳೆ, ಪೆನ್ಸಿಲ್ ಕೊಟ್ಟರು. ಕೆಲವೇ ನಿಮಿಷಗಳಲ್ಲಿ ಚಿತ್ರ ಬಿಡಿಸಿದ

ಬಾಳಿನಲ್ಲಿ ಸಣ್ಣ ಸಣ್ಣ ಸಂಗತಿಗಳು ಬಹುಪಾಲು ಕಾಣುವುದೇ ಇಲ್ಲ. ಕೇವಲ ದೃಷ್ಟಿಗೆ ಗೋಚರವಾಗುವ ದೊಡ್ಡ ದೊಡ್ಡ ಸಂಗತಿಗಳಿಗಷ್ಟೇ ಮಹತ್ವ ಕೊಡುವ ನಮ್ಮ ಆಲೋಚನಾ ಕ್ರಮಗಳನ್ನು ಈ ದೃಷ್ಟಾಂತದಲ್ಲಿ ಹಿಡಿದು ಕೊಡಲಾಗಿದೆ. ಚಿತ್ರಕಲಾ ಶಿಕ್ಷಕರೊಬ್ಬರು ಒಂದು ಕುರ್ಚಿಯ ಚಿತ್ರ ಬರೆಯಲು ಹೇಳಿ ಎಲ್ಲರಿಗೂ ಹಾಳೆ, ಪೆನ್ಸಿಲ್ ಕೊಟ್ಟರು. ಕೆಲವೇ ನಿಮಿಷಗಳಲ್ಲಿ ಚಿತ್ರ ಬಿಡಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲಾಯಿತು: ‘ನೀವು ಬರೆದ ಕುರ್ಚಿಯ ಚಿತ್ರದಲ್ಲಿ, ಅದರ ಯಾವ ಭಾಗ ಅತ್ಯಂತ ಮಹತ್ವದ್ದು ಎನಿಸುತ್ತದೆ’ ಎಂದು ಕೇಳಿದರು. ಅದರ ಬೆನ್ನು, ಅದರ ತಳ, ಅದರ ಕಾಲು, ಅದರ ಹಿಡಿ, ಅದರ ಮೇಲೆ ಮಾಡಲಾದ ವಿನ್ಯಾಸ ಮತ್ತು ನಿಜವಾದ ಕುರ್ಚಿಯ ವಿಷಯಕ್ಕೆ ಬಂದಾಗ ಅದಕ್ಕೆ ಬಳಸಲಾದ ಮರ, ಲೋಹದ ಗುಣ ಹೀಗೆ ನಾನಾ ತರಹದ ಉತ್ತರ. ಶಿಕ್ಷಕರಿಗೆ ಅವರ ಯಾವ ಉತ್ತರವೂ ಇಷ್ಟವಾಗಲಿಲ್ಲ. ಇಡೀ ತರಗತಿ ಅವರ ಪ್ರತಿಕ್ರಿಯೆಗಾಗಿ ಕಾಯುತ್ತ ಮೌನವಾಗಿತ್ತು.ಸ್ತಬ್ಧ ತರಗತಿಯೊಳಗೆ ಒಂದು ಉತ್ತರ ಸಾಕಿತ್ತು. ಶಿಕ್ಷಕರು ಮಾತಿಗೆ ಕೂತರು: ‘ನಿಮ್ಮಿಂದ ನಾನು ವಿಭಿನ್ನವಾದ ಉತ್ತರವನ್ನು ನಿರೀಕ್ಷೆ ಮಾಡಿದ್ದೆ. ಎಲ್ಲರೂ ಕುರ್ಚಿಯ ದೊಡ್ಡ ದೊಡ್ಡ ಸಂಗತಿಗಳನ್ನು ಮಾತ್ರ ಮುನ್ನೆಲೆಗೆ ತಂದಿದ್ದೀರಿ. ಆದರೆ ಅ ಕುರ್ಚಿಯ ಎಲ್ಲ ಅಂಗಗಳನ್ನು ಜೋಡಿಸುವ ಮೊಳೆಗಳ ಬಗ್ಗೆ ಯಾರೂ ಯೋಚಿಸದೇ ಉಳಿದುಬಿಟ್ಟಿರಿ. ಮೊಳೆ ನಮಗೆಲ್ಲ ಸಣ್ಣ, ನಗಣ್ಯ ವಸ್ತು. ಆದರೆ, ಅದು ಜೋಡಿಸಲು ಮೈಚಾಚಿಕೊಳ್ಳದಿದ್ದರೆ ಉಳಿದ ಭಾಗಗಳು ಒಂದಾಗುತ್ತಿರಲಿಲ್ಲ, ಕಳಚಿ ಬೀಳುತ್ತಿದ್ದವು. ನಿಜ, ನಿಮ್ಮ ಚಿತ್ರದಲ್ಲೂ ಅದು ಕಾಣಲ್ಲ. ನಿಜವಾದ ಕುರ್ಚಿಯಲ್ಲೂ ಅದು ಕಾಣಲ್ಲ. ಆದರೆ, ಅದು ಎಲ್ಲವನ್ನೂ ಒಂದುಮಾಡಿ ಮೌನವಾಗಿರುತ್ತದೆ’. ಶಿಕ್ಷಕರ ಈ ತೀವ್ರವಾದ ಒಳನೋಟದ ಮಾತು ವಿದ್ಯಾರ್ಥಿಗಳನ್ನು ಗಾಢವಾದ ಜಿಜ್ಞಾಸೆಗೆ ತಳ್ಳಿತು.‘ವನಸುಮದೊಳೆನ್ನ ಜೀವನವು ವಿಕಸಿಸುವಂತೆಮನವನನುಗೊಳಿಸು ಗುರುವೇ ಹೇ ದೇವಾ’ಎಂದು ಡಿ.ವಿ.ಜಿ ಬರೆದಂತೆ, ಯಾರ ಕಣ್ಣಿಗೂ ಕಾಣದಂತೆ ಇದ್ದು, ಮುನ್ನೆಲೆಗೆ ಬಾರದೇ ಇದ್ದರೂ ಸಾರ್ಥಕವಾದ ಜನುಮ ದಕ್ಕಿಸಿಕೊಳ್ಳುವ ಚೆಲುವಿದು.ಬಾಳೂ ಹೀಗೆಯೇ ಅಲ್ಲವೇ? ಪರಿಗಣಿಸಬೇಕಾದ ವಸ್ತುಗಳು ನಗಣ್ಯವಾಗುತ್ತವೆ. ಹೊರಗೆ ಕಾಣುವ ಅಂದ ಚೆಂದ, ಚೆಲುವು, ಚಿತ್ತಾರ, ಮನೆ ವಿನ್ಯಾಸದ ಐಷಾರಾಮಿ ವಸ್ತುಗಳು, ರಸ್ತೆ, ಮಹಲು, ಹಣ ಇವೇ ಮಾತನಾಡುತ್ತವೆ. ಇವೆಲ್ಲವನ್ನು ಬಂಧಿಸಿಡುವ ಅಂತಃಕರಣ, ಪ್ರೀತಿ, ಕಾಳಜಿಗಳ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಕನ್ನಡಿ, ಸೋಫಾ, ಡೈನಿಂಗ್ ಟೇಬಲ್ ಬಳಸುತ್ತ ಅಲ್ಲಿ ಹಿನ್ನೆಲೆಗೆ ನಿಲ್ಲುವ ಮೌಲ್ಯ ಸಂವೇದನೆಗಳ ಕುರಿತು ಚರ್ಚೆಯೇ ಮಾಡುವುದಿಲ್ಲ. ಹಣ ದುಡಿಮೆ, ಅಪ್ಪನ ಕರ್ತವ್ಯ, ಅಡುಗೆ ಬೇಯಿಸಿ ಹಾಕುವ ಅಮ್ಮನ ದಿನಚರಿ ಅಷ್ಟೇ ಕಾಣೋದು. ಅಪ್ಪ ಕೊಡಿಸಿದ ಬಣ್ಣಬಣ್ಣದ ಬಟ್ಟೆ, ದಿನಬಳಕೆ ವಸ್ತುಗಳು, ಅಮ್ಮ ಮಾಡಿಟ್ಟ ತರಹೇವಾರಿ ತಿನಿಸುಗಳು ಮುಖ್ಯವಾಗುತ್ತವೆಯೇ ಹೊರತು ಅದರ ಹಿಂದಿನ ಬಾಳಿನಂತಃಕರಣದ ಕೊಂಡಿ ಮರೆಯಾಗಿ ಹೋಗುತ್ತದೆ. ಒಂದು ಕೂಡು ಕುಟುಂಬದ ಭೌತಿಕ ವಸ್ತುಗಳು ಮಾತ್ರ ಹೊಗಳಿಕೆಗೆ ಪಾತ್ರವಾಗುವಾಗ ಅವುಗಳನ್ನು ಗಟ್ಟಿಯಾಗಿ ಜೋಡಿಸಿಟ್ಟ ಒಂದು ವಾತ್ಸಲ್ಯದ ಕೊಂಡಿ, ಮೊಳೆಗಳ ಬಗ್ಗೆ ಮಾತೇ ಇರದಾದ ಸ್ಥಿತಿ.ಊಟಕ್ಕೆ ಕೂತಾಗ ಆಸ್ತಿ ಬಗ್ಗೆ ಮಾತಾಡುವ ನಾವು ಒಮ್ಮೆಯಾದರೂ ನಮ್ಮನ್ನು ಬೆಸೆದಿರುವ ಜೀವಗಳ ಬಗ್ಗೆ ಮಾತಾಡಿದ್ದೀವಾ?