ಇ.ಡಿ ಸಮನ್ಸ್ ಬೆನ್ನಲ್ಲೇ ಮಮತಾ ಬಣ ತೊರೆದು ಬಂಡಾಯ ಬಣ ಸೇರಿದ ಮದನ್ ಮಿತ್ರಾ
ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಹಿರಿಯ ನಾಯಕ ಮದನ್ ಮಿತ್ರಾ ಅವರು ಬುಧವಾರ ಮಮತಾ ಬಣ ತೊರೆದು ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವನ್ನು ಸೇರಿಕೊಂಡಿದ್ದಾರೆ.ಬಂಡಾಯ ಬಣ ಸೇರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಿತ್ರಾ, ‘ನಾನು ನನ್ನ ಕೋಣೆಯನ್ನು ಮಾತ್ರ ಬದಲಾಯಿಸಿದ್ದೇನೆ, ಮನೆಯನ್ನಲ್ಲ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಹಿರಿಯ ನಾಯಕ ಮದನ್ ಮಿತ್ರಾ ಅವರು ಬುಧವಾರ ಮಮತಾ ಬಣ ತೊರೆದು ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವನ್ನು ಸೇರಿಕೊಂಡಿದ್ದಾರೆ.ಬಂಡಾಯ ಬಣ ಸೇರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಿತ್ರಾ, ‘ನಾನು ನನ್ನ ಕೋಣೆಯನ್ನು ಮಾತ್ರ ಬದಲಾಯಿಸಿದ್ದೇನೆ, ಮನೆಯನ್ನಲ್ಲ. ನಾನು ಈಗಲೂ ಟಿಎಂಸಿಯಲ್ಲೇ ಇದ್ದೇನೆ’ ಎಂದು ಹೇಳಿದ್ದಾರೆ.ಮೇ ತಿಂಗಳನಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಹೀನಾಯ ಸೋಲನುಭವಿಸಿತ್ತು. 208 ಕ್ಷೇತ್ರಗಳನ್ನು ಗೆದ್ದು ಬಿಜೆಪಿ ಮೊದಲ ಬಾರಿಗೆ ಗದ್ದುಗೆ ಏರಿತ್ತು. ಟಿಎಂಸಿಯು 80 ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದು, ಮಿತ್ರಾ ಅವರು ತಮ್ಮ ಕಮರ್ಹಟಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.ಚುನಾವಣೆ ಬೆನ್ನಲ್ಲೇ ಟಿಎಂಸಿಯಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಶಾಸಕರು, ಸಂಸದರಾದಿಯಾಗಿ ಮಮತಾ ಬ್ಯಾನರ್ಜಿ ವಿರುದ್ಧ ತಿರುಗಿ ಬಿದ್ದಿದ್ದರು. ಇಲ್ಲಿಯರವೆಗೆ ಸುಮಾರು 55ಕ್ಕೂ ಹೆಚ್ಚು ಶಾಸಕರು ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವನ್ನು ಸೇರಿಕೊಂಡಿದ್ದಾರೆ.ಪತ್ನಿ, ಪುತ್ರರಿಗೆ ಇ.ಡಿ ಸಮನ್ಸ್: ಪೌರಾಡಳಿತ ನೇಮಕಾತಿ ಹಗರಣದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಮದನ್ ಮಿತ್ರಾ ಅವರ ಪತ್ನಿ ಮತ್ತು ಇಬ್ಬರು ಪುತ್ರರಿಗೆ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.ಮಿತ್ರಾ ಅವರನ್ನು ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ನಾರದ ಸ್ಟಿಂಗ್ ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2021ರಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದರು.