ಸಂಗತ | ದಲಿತ ನಾಯಕತ್ವ: ಕೊಡುಗೆ ಅಪರಿಮಿತ
ಹೋರಾಟಗಾರರು, ಚಳವಳಿಕಾರರನ್ನು ಎಷ್ಟು ಸೌಜನ್ಯ–ಗೌರವದಿಂದ ನಡೆಸಿಕೊಳ್ಳಲಾಗುತ್ತದೆ ಎನ್ನುವುದು ಸಮಾಜವೊಂದರ ಪ್ರಜಾಸತ್ತಾತ್ಮಕ ಪ್ರಬುದ್ಧತೆಯ ಲಕ್ಷಣಗಳಲ್ಲೊಂದಾಗಿದೆ. ಒಂದು ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಅಭಿಪ್ರಾಯಭೇದಗಳ ಬಗ್ಗೆ ಚರ್ಚೆಗೆ ಅವಕಾಶವಿದೆ. ಹಾಗೆಯೇ ಚಳವಳಿಗಳ ಕಾರ್ಯವೈಖರಿಯನ್ನು ಟೀಕಿಸಲೂ ಅವಕಾಶವಿದೆ. ಆದರೆ, ಒಂದು ಚಳವಳಿಯ ಕಾರ್ಯಕರ್ತರನ

ಹೋರಾಟಗಾರರು, ಚಳವಳಿಕಾರರನ್ನು ಎಷ್ಟು ಸೌಜನ್ಯ–ಗೌರವದಿಂದ ನಡೆಸಿಕೊಳ್ಳಲಾಗುತ್ತದೆ ಎನ್ನುವುದು ಸಮಾಜವೊಂದರ ಪ್ರಜಾಸತ್ತಾತ್ಮಕ ಪ್ರಬುದ್ಧತೆಯ ಲಕ್ಷಣಗಳಲ್ಲೊಂದಾಗಿದೆ. ಒಂದು ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಅಭಿಪ್ರಾಯಭೇದಗಳ ಬಗ್ಗೆ ಚರ್ಚೆಗೆ ಅವಕಾಶವಿದೆ. ಹಾಗೆಯೇ ಚಳವಳಿಗಳ ಕಾರ್ಯವೈಖರಿಯನ್ನು ಟೀಕಿಸಲೂ ಅವಕಾಶವಿದೆ. ಆದರೆ, ಒಂದು ಚಳವಳಿಯ ಕಾರ್ಯಕರ್ತರನ್ನು ವ್ಯಂಗ್ಯ, ಅಪಹಾಸ್ಯ ಮತ್ತು ವೈಯಕ್ತಿಕ ಅವಹೇಳನದ ಭಾಷೆಯಲ್ಲಿ ಚಿತ್ರಿಸುವುದು ರಾಜಕೀಯ ಸಂವಾದದ ಅಧಃಪತನದ ಸಂಕೇತವಾಗಿದೆ.ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ ಅವರು ದಲಿತ ಮುಖಂಡರ ಕುರಿತು ಇತ್ತೀಚೆಗೆ ನೀಡಿರುವ ಹೇಳಿಕೆ ಸದಭಿರುಚಿಯದ್ದೂ ಅಲ್ಲ,ಮಾದರಿ ರಾಜಕಾರಣದ್ದೂ ಅಲ್ಲ. ‘ಬೆಳಗ್ಗೆಯಿಂದ ಸಂಜೆವರೆಗೆಸರ್ಕಾರದ ವಿರುದ್ಧ ಹೋರಾಟ ಮಾಡಿ, ಸಂಜೆ ಕುಡಿದು ತೂರಾಡುತ್ತಿದ್ದರು’ ಎಂದು ಅವರು ಹೇಳಿದ್ದಾರೆ. ಈಗಿನ ಸರ್ಕಾರದ ದಲಿತ ವಿರೋಧಿ ನೀತಿಗಳ ಬಗ್ಗೆ ಹೋರಾಟಗಾರರೇಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅವರು ಯಾರ ಹೆಸರನ್ನೂ ಉಲ್ಲೇಖಿಸಿಲ್ಲವಾದರೂ, ಅವರ ಮಾತಿನ ಧಾಟಿ ದಲಿತ ಸಂಘರ್ಷ ಸಮಿತಿಗೆ (ದಸಂಸ) ಅನ್ವಯಿಸುವಂತಿದೆ. ಏಕೆಂದರೆ, ದಸಂಸ ಹೊರತುಪಡಿಸಿ ದಲಿತ ಚಳವಳಿ ಮುಖಂಡರನ್ನು ಕರ್ನಾಟಕದಲ್ಲಿ ಕಲ್ಪಿಸಿಕೊಳ್ಳಲಾಗದು.ನಾರಾಯಣಸ್ವಾಮಿ ಅವರ ಮಾತುಗಳನ್ನು ಒಬ್ಬ ವ್ಯಕ್ತಿಯ ಅಭಿಪ್ರಾಯವಾಗಿ ನೋಡಲಿಕ್ಕೆ ಸಾಧ್ಯವಿದೆ. ಆದರೆ, ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿ ಆಡುವ ಇಂಥ ಮಾತುಗಳಿಗೆ ವೈಯಕ್ತಿಕತೆಯನ್ನು ಮೀರುವ ಸಾಮಾಜಿಕ ಪರಿಣಾಮಗಳ ಸಾಧ್ಯತೆ ಇರುತ್ತದೆ.ದಸಂಸ ಬರೀ ಒಂದು ಸಂಘಟನೆಯಲ್ಲ; ಅದು ಕರ್ನಾಟಕದ ಸಾಮಾಜಿಕ ಇತಿಹಾಸದ ಮಹತ್ವದ ಅಧ್ಯಾಯ. 1970ರ ದಶಕದಲ್ಲಿ ಜಾತಿ ದೌರ್ಜನ್ಯ, ಅಸ್ಪೃಶ್ಯತೆ, ಭೂಹೀನತೆ ಮತ್ತು ಸಾಮಾಜಿಕ ಅವಮಾನಗಳ ವಿರುದ್ಧ ರೂಪುಗೊಂಡ ಈ ಚಳವಳಿ, ಸಾವಿರಾರು ಹಳ್ಳಿಗಳಲ್ಲಿ ದಲಿತರಿಗೆ ಧ್ವನಿ ಆಯಿತು. ಪ್ರೊ. ಬಿ. ಕೃಷ್ಣಪ್ಪ, ಕವಿ ಸಿದ್ಧಲಿಂಗಯ್ಯ, ದೇವನೂರ ಮಹಾದೇವ, ಬಿ. ಬಸವಲಿಂಗಪ್ಪ ಅವರ ಚಿಂತನೆಗಳಿಂದ ಪ್ರೇರಿತವಾದ ಚಳವಳಿಯು, ಕರ್ನಾಟಕದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬದುಕಿನ ಮೇಲೆ ಆಳವಾದ ಪ್ರಭಾವ ಬೀರಿತು. ಈ ಚಳವಳಿಯು ಸಂವಿಧಾನದಲ್ಲಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ಘನತೆಯ ಮೌಲ್ಯಗಳನ್ನು ಜನರ ಬದುಕಿನ ಪ್ರಶ್ನೆಗಳನ್ನಾಗಿ ಪರಿವರ್ತಿಸಿತು.ದಲಿತರ ಮೇಲೆ ನಡೆದ ಅನೇಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಮೊದಲು ಬೀದಿಗಿಳಿದವರು ದಸಂಸ ಕಾರ್ಯಕರ್ತರೇ. ಭೂಮಿಗಾಗಿ, ಕುಡಿಯುವ ನೀರಿಗಾಗಿ, ದೇವಸ್ಥಾನ ಪ್ರವೇಶಕ್ಕಾಗಿ, ಶಾಲೆಯಲ್ಲಿ ಗೌರವಕ್ಕಾಗಿ, ಮಾನವ ಘನತೆಗಾಗಿ ಅವರು ಹೋರಾಡಿದರು. ಇವರಲ್ಲಿ ಅನೇಕರು ಅಧಿಕಾರವನ್ನೂ ಸಂಪತ್ತನ್ನೂ ಗಳಿಸಲಿಲ್ಲ; ಬದಲಾಗಿ ಬಂಧನ, ಹಲ್ಲೆ, ಸುಳ್ಳು ಮೊಕದ್ದಮೆ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದುರಿಸಿದರು. ಅಂತಹ ದಿಟ್ಟ ಹೋರಾಟಗಾರರ ಬದುಕನ್ನು ಒಂದು ವ್ಯಂಗ್ಯ ವಾಕ್ಯದಲ್ಲಿ ಸೀಮಿತಗೊಳಿಸುವುದು ಇತಿಹಾಸಕ್ಕೆ ಎಸಗುವ ಅಪಚಾರ; ಅದು ನ್ಯಾಯಸಮ್ಮತವೂ ಅಲ್ಲ.ಇಲ್ಲಿ ಮತ್ತೊಂದು ಪ್ರಶ್ನೆಯೂ ಇದೆ. ಬಿ.ಆರ್. ಅಂಬೇಡ್ಕರ್ ಅವರಹೆಸರನ್ನು ಗೌರವದಿಂದ ಉಲ್ಲೇಖಿಸುವ ರಾಜಕೀಯ ಪಕ್ಷಗಳು, ಅಂಬೇಡ್ಕರ್ ಅವರ ಹೋರಾಟದ ಪರಂಪರೆಯನ್ನು ಮುಂದುವರಿಸಿದ ಜನಚಳವಳಿಗಳನ್ನೂ ಅದೇ ಗೌರವದಿಂದ ಕಾಣುತ್ತಿವೆಯೆ? ಅಂಬೇಡ್ಕರ್ ಅವರನ್ನು ಬರೀ ಪ್ರತಿಮೆಗಳಲ್ಲಿ ಆರಾಧಿಸಿ, ಅವರ ವಿಚಾರಗಳನ್ನು ಬದುಕಿನಲ್ಲಿ ನಿರ್ಲಕ್ಷಿಸಿದರೆ ಅದು ಗೌರವವಲ್ಲ; ರಾಜಕೀಯ ಅನುಕೂಲ ಮಾತ್ರ.ಇಂದು ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ದಲಿತ ನಾಯಕರು ಇದ್ದಾರೆ. ಅದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಆ ಅವಕಾಶಗಳು ಶೂನ್ಯದಿಂದ ಹುಟ್ಟಿಲ್ಲ. ದಶಕಗಳ ಕಾಲ ನಡೆದ ದಲಿತ ಚಳವಳಿಗಳು, ದಸಂಸದಂತಹ ಸಂಘಟನೆಗಳು ನಿರ್ಮಿಸಿದ ಸಾಮಾಜಿಕ ಜಾಗೃತಿಯ ಫಲವಾಗಿ ಇಂದಿನ ರಾಜಕೀಯದಲ್ಲಿ ದಲಿತ ನಾಯಕತ್ವಕ್ಕೆ ಹೆಚ್ಚಿನ ಸ್ಥಳ ದೊರೆತಿದೆ. ಹೀಗಿರುವಾಗ ಆ ಹೋರಾಟದ ಪರಂಪರೆಯನ್ನೇ ಅಪಹಾಸ್ಯ ಮಾಡುವುದು ಕೃತಘ್ನತೆಯಂತೆ ಕಾಣುತ್ತದೆ. ಇದರರ್ಥ ದಸಂಸ ವಿಮರ್ಶೆಗೆ ಅತೀತ ಎಂಬುದಲ್ಲ. ಯಾವುದೇ ಸಾಮಾಜಿಕ ಚಳವಳಿಯಂತೆ ದಲಿತ ಸಂಘರ್ಷ ಸಮಿತಿಗೂ ಮಿತಿಗಳು, ಸಂಘಟನಾ ವಿಭಜನೆಗಳು, ವೈಚಾರಿಕ ಭಿನ್ನಾಭಿಪ್ರಾಯಗಳು ಮತ್ತು ಕಾಲಾನುಗುಣ ಸವಾಲುಗಳಿವೆ. ಅವುಗಳ ಬಗ್ಗೆ ತೀಕ್ಷ್ಣ ಚರ್ಚೆ ನಡೆಯಬೇಕು. ಆದರೆ, ವಿಮರ್ಶೆ ಮತ್ತು ಅವಮಾನ ಎರಡೂ ಒಂದೇ ಅಲ್ಲ. ಪ್ರಜಾಪ್ರಭುತ್ವದಲ್ಲಿ ವಿಮರ್ಶೆ ವಿಚಾರಗಳ ಮೇಲೆ ಇರಬೇಕು; ವ್ಯಕ್ತಿಗಳ ಘನತೆಯ ಮೇಲೆ ಅಲ್ಲ.ಸಾರ್ವಜನಿಕ ಜೀವನದಲ್ಲಿ ಮಾತುಗಳಿಗೂ ಒಂದು ನೈತಿಕ ಹೊಣೆಗಾರಿಕೆ ಇದೆ. ವಿಶೇಷವಾಗಿ ಇತಿಹಾಸದುದ್ದಕ್ಕೂ ಶೋಷಣೆಯನ್ನು ಅನುಭವಿಸಿದ ಸಮುದಾಯಗಳ ಹೋರಾಟಗಳನ್ನು ಕುರಿತು ಮಾತನಾಡುವಾಗ ಭಾಷೆ ಜವಾಬ್ದಾರಿಯುತವಾಗಿರಬೇಕು. ಮಾತುಗಳು ಬರೀ ಅಭಿಪ್ರಾಯಗಳನ್ನು ಮಾತ್ರವಲ್ಲ, ಸಮಾಜದ ಮನೋಭಾವಗಳನ್ನೂ ರೂಪಿಸುತ್ತವೆ.ದಲಿತ ಸಂಘರ್ಷ ಸಮಿತಿಯನ್ನು ಒಪ್ಪಬಹುದು, ವಿರೋಧಿಸಬಹುದು, ಅದರ ರಾಜಕೀಯ ನಿಲುವುಗಳನ್ನು ಪ್ರಶ್ನಿಸಬಹುದು. ಆದರೆ, ಅದರ ಐದು ದಶಕಗಳ ಸಾಮಾಜಿಕಕೊಡುಗೆಯನ್ನು ನಿರಾಕರಿಸಲಾಗುವುದಿಲ್ಲ. ಹೋರಾಟಗಾರರನ್ನು ಹೀಯಾಳಿಸುವುದರಿಂದ ಇತಿಹಾಸ ಅಳಿಸಿಹೋಗುವುದಿಲ್ಲ; ಬದಲಿಗೆ ಇತಿಹಾಸದ ಅರಿವಿನ ಕೊರತೆ ಬಹಿರಂಗ ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಶಾಶ್ವತವಲ್ಲ. ನ್ಯಾಯಕ್ಕಾಗಿ ನಡೆದ ಹೋರಾಟಗಳ ನೆನಪು ಶಾಶ್ವತ. ಆ ನೆನಪಿಗೆಗೌರವ ಕೊಡುವುದೇ ನಮ್ಮ ರಾಜಕೀಯ ಸಂಸ್ಕೃತಿಯ ನಿಜವಾದ ಪರೀಕ್ಷೆ. ಇತಿಹಾಸವನ್ನು ಮರೆತು ಮಾತನಾಡುವವರು ವೀರರೂ ಅಲ್ಲ, ಉದಾರಚರಿತರೂ ಅಲ್ಲ.