ಸರ್ಕಾರದ ವಿರುದ್ಧ ಘೋಷಣೆ ಕೂಗುವುದೇ ದೇಶದ್ರೋಹ ಎನ್ನಲಾಗದು: ಹರಿಯಾಣ ಹೈಕೋರ್ಟ್
ಚಂಡೀಗಢ (ಪಿಟಿಐ): ಚುನಾಯಿತ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಅಥವಾ ಅದರ ಅಂಗ ಸಂಸ್ಥೆಯ ವಿರುದ್ಧ ಘೋಷಣೆ ಕೂಗಿದ್ದಾರೆ ಎಂದ ಮಾತ್ರಕ್ಕೆ ನಾಗರಿಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹರಿಯಾಣ ಹೈಕೋರ್ಟ್ ಹೇಳಿದೆ.ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ 2017ರಲ್ಲಿ ಶಿಕ್ಷೆ ಪ್ರಕಟವಾದ ಬಳಿಕ ನಡೆ

ಚಂಡೀಗಢ (ಪಿಟಿಐ): ಚುನಾಯಿತ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಅಥವಾ ಅದರ ಅಂಗ ಸಂಸ್ಥೆಯ ವಿರುದ್ಧ ಘೋಷಣೆ ಕೂಗಿದ್ದಾರೆ ಎಂದ ಮಾತ್ರಕ್ಕೆ ನಾಗರಿಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹರಿಯಾಣ ಹೈಕೋರ್ಟ್ ಹೇಳಿದೆ.ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ 2017ರಲ್ಲಿ ಶಿಕ್ಷೆ ಪ್ರಕಟವಾದ ಬಳಿಕ ನಡೆದ ಘಟನೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಿಡುಗಡೆ ಮಾಡಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿರುವ ನ್ಯಾಯಾಲಯವು, ‘ಸರ್ಕಾರದ ವಿರುದ್ಧ ಘೋಷಣೆ ಕೂಗುವುದು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಒಂದು ಮಾರ್ಗ ಮಾತ್ರ. ಅದನ್ನೇ ದ್ವೇಷ ಅಥವಾ ತಿರಸ್ಕಾರ ಎಂದು ಹೇಳಲಾಗದು’ ಎಂದು ಅಭಿಪ್ರಾಯಪಟ್ಟಿದೆ.‘ಹಿಂಸಾತ್ಮಕ ಪ್ರತಿಭಟನೆಯು ಗಲಭೆಗೆ ಕಾರಣವಾಗಬಹುದು. ಆದರೆ ಅಂತಹ ಪ್ರತಿಭಟನೆಯು ಸರ್ಕಾರದ ವಿರುದ್ಧ ದ್ವೇಷ, ತಿರಸ್ಕಾರ ಹುಟ್ಟಿಸುವಂಥ ಕೃತ್ಯ ಎಂದು ಗ್ರಹಿಸಲಾಗುವುದಿಲ್ಲ’ ಎಂದು ಅದು ಹೇಳಿದೆ.ಶಿಕ್ಷೆ ಪ್ರಕಟವಾದ ಬಳಿಕ ಸೇರಿದ ಗುಂಪು, ಹರಿಯಾಣದ ಕೈಥಲ್ನಲ್ಲಿ ವಿದ್ಯುತ್ ವಿತರಣಾ ಇಲಾಖೆಯ ಕಚೇರಿಗೆ ಹಾನಿ ಮಾಡಿತ್ತು. ಪ್ರಕರಣದ ಆರೋಪಿಗಳನ್ನು ವಿಚಾರಣಾ ನ್ಯಾಯಾಲಯವು 2019ರಲ್ಲಿ ಬಿಡುಗಡೆ ಮಾಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು.‘ಸರ್ಕಾರದ ವಿರುದ್ಧದ ಹತಾಶೆ, ಅತೃಪ್ತಿ, ಆಕ್ರೋಶಗಳನ್ನು ಅವಿಶ್ವಾಸ ಅಥವಾ ದ್ವೇಷ ಎಂದು ಪರಿಗಣಿಸಲಾಗದು. ಆರೋಪವು ಗಂಭೀರ ಮತ್ತು ಶಿಕ್ಷೆಯು ಕಠಿಣವಾಗಿರುವ ಸಂದರ್ಭದಲ್ಲಿ, ಅಂಥ ಪ್ರಕರಣಗಳಲ್ಲಿ ಅಡಕವಾಗಿರುವ ಅಂಶಗಳು ಮತ್ತು ಹಿನ್ನೆಲೆ ಅಷ್ಟು ತೀವ್ರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದೆ.