ಚಾಮುಂಡಿಬೆಟ್ಟ, ಸುತ್ತಮುತ್ತ ‘ಪ್ರಸಾದ’: ಪಾಲಿಕೆಯಿಂದ ಹಲವು ಸೂಚನೆ
ಮೈಸೂರು: ಆಷಾಢ ಪ್ರಯುಕ್ತ ಚಾಮುಂಡಿಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಪ್ರಸಾದ ವಿತರಿಸುವ ಸಂಘ–ಸಂಸ್ಥೆಗಳಿಗೆ ಮಹಾನಗರಪಾಲಿಕೆ ಹಲವು ಸೂಚನೆಗಳನ್ನು ನೀಡಿದೆ.ಪ್ರಸಾದ, ಆಹಾರ ಮತ್ತು ಮಜ್ಜಿಗೆ, ಲಸ್ಸಿ ಹಾಗೂ ಕುಡಿಯುವ ನೀರು ವಿತರಣೆ ವೇಳೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆಹಾರ ತ್ಯಾಜ್ಯ, ಎಲೆ-ತಟ್ಟೆಗಳು, ಕಾಗದದ ಕಪ್ಗಳು, ನೀರಿನ ಬಾಟಲಿಗಳು,

ಮೈಸೂರು: ಆಷಾಢ ಪ್ರಯುಕ್ತ ಚಾಮುಂಡಿಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಪ್ರಸಾದ ವಿತರಿಸುವ ಸಂಘ–ಸಂಸ್ಥೆಗಳಿಗೆ ಮಹಾನಗರಪಾಲಿಕೆ ಹಲವು ಸೂಚನೆಗಳನ್ನು ನೀಡಿದೆ.ಪ್ರಸಾದ, ಆಹಾರ ಮತ್ತು ಮಜ್ಜಿಗೆ, ಲಸ್ಸಿ ಹಾಗೂ ಕುಡಿಯುವ ನೀರು ವಿತರಣೆ ವೇಳೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆಹಾರ ತ್ಯಾಜ್ಯ, ಎಲೆ-ತಟ್ಟೆಗಳು, ಕಾಗದದ ಕಪ್ಗಳು, ನೀರಿನ ಬಾಟಲಿಗಳು, ಪ್ಯಾಕಿಂಗ್ ವಸ್ತುಗಳು ಹಾಗೂ ಇತರ ತ್ಯಾಜ್ಯ ಹೆಚ್ಚಾಗಿ ಉತ್ಪತ್ತಿಯಾಗುವ ಸಾಧ್ಯತೆ ಇದ್ದು, ಸಂಘ–ಸಂಸ್ಥೆಯವರು, ಆಯೋಜಕರು ವಿತರಣಾ ಸ್ಥಳದಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ತಿಳಿಸಿದೆ.‘ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ಬಣ್ಣದ ಡಸ್ಟ್ ಬಿನ್ಗಳನ್ನು ಸ್ಥಳದಲ್ಲಿಡಬೇಕು. ಉಳಿದ ಆಹಾರ, ಎಲೆ-ತಟ್ಟೆ ಮತ್ತು ಜೈವಿಕ ತ್ಯಾಜ್ಯವನ್ನು ಹಸಿ ತ್ಯಾಜ್ಯವಾಗಿ ಹಾಗೂ ಕಾಗದ, ಬಾಟಲಿ, ಕಪ್, ಪ್ಯಾಕಿಂಗ್ ವಸ್ತುಗಳನ್ನು ಒಣ ತ್ಯಾಜ್ಯವಾಗಿ ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಯಾವುದೇ ಕಾರಣಕ್ಕೂ ರಸ್ತೆ, ಪಾದಚಾರಿ ಮಾರ್ಗ, ಅರಣ್ಯ ಪ್ರದೇಶ, ಬೆಟ್ಟದ ಇಳಿಜಾರು ಅಥವಾ ಚರಂಡಿಗಳಲ್ಲಿ ತ್ಯಾಜ್ಯವನ್ನು ಎಸೆಯಬಾರದು’ ಎಂದು ಆಯುಕ್ತೆ ಎಂ.ಕೆ. ಸವಿತಾ ತಿಳಿಸಿದ್ದಾರೆ.‘ಸ್ಥಳದಲ್ಲಿ ಸ್ವಚ್ಛತೆ ಕಾಪಾಡಲು ಅಗತ್ಯ ಸಿಬ್ಬಂದಿ ಅಥವಾ ಸ್ವಯಂಸೇವಕರನ್ನು ನಿಯೋಜಿಸಬೇಕು. ಸಂಗ್ರಹಿಸಿದ ತ್ಯಾಜ್ಯವನ್ನು ಪಾಲಿಕೆಯ ವಾಹನಗಳಿಗೆ ಕೊಡಬೇಕು. ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ತಟ್ಟೆ, ಕಪ್, ಗ್ಯಾಸ್, ಚಮಚ, ಸ್ಮಾ, ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಾಗೂ ಥರ್ಮೋಕೋಲ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಾಳೆ ಎಲೆ, ಅಡಿಕೆ ಹಾಳೆ, ಕಾಗದ ಅಥವಾ ಇತರ ಪರಿಸರ ಸ್ನೇಹಿ ಮತ್ತು ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಮಾತ್ರ ಬಳಸಬೇಕು’ ಎಂದು ಸೂಚಿಸಿದ್ದಾರೆ.‘ಸಾಕಷ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಪಾಲಿಕೆ ಅಧಿಕಾರಿಗಳು ಬೆಟ್ಟ ಮತ್ತು ಪ್ರಸಾದ ವಿತರಣಾ ಕೇಂದ್ರಗಳಲ್ಲಿ ತಪಾಸಣೆ ನಡೆಸುತ್ತಾರೆ. ಸೂಚನೆ ಉಲ್ಲಂಘಿಸಿದಲ್ಲಿ ಸಂಬಂಧಿಸಿದ ಸಂಘ-ಸಂಸ್ಥೆ ಅಥವಾ ಆಯೋಜಕರ ವಿರುದ್ಧ ದಂಡ ವಿಧಿಸುವುದು ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ.‘ಸ್ವಚ್ಛ ಚಾಮುಂಡಿಬೆಟ್ಟ-ಪ್ಲಾಸ್ಟಿಕ್ ಮುಕ್ತ ಆಷಾಢ’ ಅಭಿಯಾನದ ಯಶಸ್ಸಿಗೆ ಸಹಕರಿಸಬೇಕು’ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.