ಕೊಡಗು | 3 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ
– ನಮ್ಮಲ್ಲಿ ಬಹಿಷ್ಕಾರ ಪದ್ದತಿಯೇ ಇಲ್ಲ ಅಂತಾರೆ ಗ್ರಾಮಸ್ಥರು ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರದ ಆರೋಪ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದಲ್ಲಿ ಮೂರು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ ಕೇಳಿಬಂದಿದೆ. ಆದ್ರೆ ಗ್ರಾಮದ ಪ್ರಮುಖರು ಈ ಆರೋಪವನ್ನ ಸಂಪೂರ್ಣವಾಗಿ ತಳ್ಳಿಹಾಕಿದ್ದು, ನಮ್ಮ ಗ್ರಾಮದ

– ನಮ್ಮಲ್ಲಿ ಬಹಿಷ್ಕಾರ ಪದ್ದತಿಯೇ ಇಲ್ಲ ಅಂತಾರೆ ಗ್ರಾಮಸ್ಥರು ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರದ ಆರೋಪ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದಲ್ಲಿ ಮೂರು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ ಕೇಳಿಬಂದಿದೆ. ಆದ್ರೆ ಗ್ರಾಮದ ಪ್ರಮುಖರು ಈ ಆರೋಪವನ್ನ ಸಂಪೂರ್ಣವಾಗಿ ತಳ್ಳಿಹಾಕಿದ್ದು, ನಮ್ಮ ಗ್ರಾಮದಲ್ಲಿ ಬಹಿಷ್ಕಾರದ ಪದ್ಧತಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದಲ್ಲಿ 3 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ಆರೋಪ ವಿವಾದಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ಜಾಗದ ವಿಚಾರವಾಗಿ ಆರಂಭವಾದ ಗಲಾಟೆ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ, ಗ್ರಾಮದ ಕೆಲ ಮುಖಂಡರು ತಮ್ಮ ವಿರುದ್ಧ ಬಹಿಷ್ಕಾರ ಹೇರಿದ್ದಾರೆ ಎಂದು ಆ ಕುಟುಂಬಗಳ ಸದಸ್ಯರು ಆರೋಪಿಸುತ್ತಿದ್ದಾರೆ. ತಮ್ಮೊಂದಿಗೆ ಯಾರೇ ಮಾತನಾಡಿದರೂ ದಂಡ ವಿಧಿಸುವುದಾಗಿ ಗ್ರಾಮದ ಪ್ರಮುಖರು ಎಚ್ಚರಿಕೆ ನೀಡುತ್ತಿದ್ದಾರೆ. ಅಲ್ಲದೆ, ಗ್ರಾಮದ ದೇವಾಲಯಕ್ಕೂ ಪ್ರವೇಶ ನಿರ್ಬಂಧ ವಿಧಿಸಲಾಗಿದೆ ಎಂದು ಬಹಿಷ್ಕಾರಕ್ಕೆ ಒಳಗಾದ ಕುಟುಂಬಗಳು ಅಳಲು ತೋಡಿಕೊಂಡಿವೆ. ಈ ಹಿಂದೆಯೇ ಸಮಾಜ ಕಲ್ಯಾಣ ಇಲಾಖೆ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಸಂಧಾನ ಸಭೆ ನಡೆಸಿ, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದರು. ಅಧಿಕಾರಿಗಳು ಹಿಂತಿರುಗಿದ ಬಳಿಕ ಮತ್ತೆ ಬಹಿಷ್ಕಾರದ ಬೆದರಿಕೆ ಮುಂದುವರಿದಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಗ್ರಾಮದ ಮುಖಂಡರು ಹೇಳೋದೇನು? ಇನ್ನೊಂದೆಡೆ, ಗ್ರಾಮದ ಮುಖಂಡರು ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ನಮ್ಮ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರದ ಪದ್ಧತಿಯೇ ಇಲ್ಲ. ಮೂರು ಕುಟುಂಬಗಳಿಗೆ ಯಾರೂ ಬಹಿಷ್ಕಾರ ಹಾಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗ್ರಾಮದ ಹಬ್ಬ-ಹರಿದಿನಗಳು, ದೇವಾಲಯದ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಈ 3 ಕುಟುಂಬಗಳು ಭಾಗಿಯಾಗಿಲ್ಲ. ಇಡೀ ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದರೂ, ಅವರು ಮಾತ್ರ ಸಹಕರಿಸುತ್ತಿಲ್ಲ. ಆದ್ದರಿಂದ ಗ್ರಾಮಸ್ಥರು ಸಹಜವಾಗಿಯೇ ಅವರೊಂದಿಗೆ ವ್ಯವಹರಿಸುತ್ತಿಲ್ಲ ಎಂದು ಗ್ರಾಮದ ಪ್ರಮುಖರು ತಮ್ಮವಾದ ಮಂಡಿಸಿದ್ದಾರೆ. ಈಗಾಗಲೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ತಮ್ಮ ವರದಿಯಲ್ಲಿಯೂ ಈ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರದ ಪದ್ಧತಿ ಇಲ್ಲ ಎಂದು ಉಲ್ಲೇಖಿಸಿದ್ದಾರೆ ಎಂದು ಗ್ರಾಮದ ಪ್ರಮುಖರು ಹೇಳುತ್ತಿದ್ದಾರೆ. 3 ಕುಟುಂಬಗಳು ಅನಗತ್ಯವಾಗಿ ಗ್ರಾಮದ ಮರ್ಯಾದೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿವೆ. ಈ ವಿಚಾರದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಅಧಿಕಾರಿಗಳೇ ಬಹಿರಂಗಪಡಿಸಬೇಕು ಎಂದು ಗ್ರಾಮದ ಪ್ರಮುಖರು ಒತ್ತಾಯಿಸಿದ್ದಾರೆ.