ದಸರೆಯಲ್ಲಿ ಕಂಬಳ ಆಯೋಜನೆ ಕುರಿತು ಸಿಎಂ ತೀರ್ಮಾನಿಸುತ್ತಾರೆ: ಯತೀಂದ್ರ
ಮೈಸೂರು: ‘ನಾಡಹಬ್ಬ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ಆಯೋಜಿಸುವುದು ಇನ್ನೂ ತೀರ್ಮಾನವಾಗಿಲ್ಲ. ಈ ವಿಷಯದಲ್ಲಿ ಮುಖ್ಯಮಂತ್ರಿಯವರೇ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕಂಬಳ ಬೇಡ ಎಂಬ ಕೂಗು ಕೆಲವು ಸಂಘಟನೆಗಳಿಂದ ಎದ್ದಿದ್ದೆ. ಸಾಧಕ–ಬಾಧಕಗಳನ್ನು ಮುಖ್

ಮೈಸೂರು: ‘ನಾಡಹಬ್ಬ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ಆಯೋಜಿಸುವುದು ಇನ್ನೂ ತೀರ್ಮಾನವಾಗಿಲ್ಲ. ಈ ವಿಷಯದಲ್ಲಿ ಮುಖ್ಯಮಂತ್ರಿಯವರೇ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕಂಬಳ ಬೇಡ ಎಂಬ ಕೂಗು ಕೆಲವು ಸಂಘಟನೆಗಳಿಂದ ಎದ್ದಿದ್ದೆ. ಸಾಧಕ–ಬಾಧಕಗಳನ್ನು ಮುಖ್ಯಮಂತ್ರಿ ಪರಿಶೀಲನೆ ಮಾಡುತ್ತಾರೆ’ ಎಂದರು.‘ಕಂಬಳ ಕೂಡ ನಮ್ಮ ರಾಜ್ಯದ್ದೇ ಆದ ಹೆಮ್ಮೆಯ ಸಾಂಸ್ಕೃತಿಕ ಕ್ರೀಡೆ. ಅದನ್ನು ಮೈಸೂರಿನಲ್ಲೂ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲು ಚಿಂತನೆ ನಡೆದಿದೆ. ದಸರೆಯಲ್ಲಿ ಪ್ರತಿ ವರ್ಷವೂ ಹೊಸದನ್ನು ಪರಿಚಯಿಸಲಾಗುತ್ತಿದೆ. ಹಾಗೆಂದು ಕಂಬಳಕ್ಕಾಗಿ ನೂರಾರು ಮರಗಳನ್ನು ಕತ್ತರಿಸಿಲ್ಲ, ಕೇವಲ ಜಾಗ ಸ್ವಚ್ಛಗೊಳಿಸಲಾಗಿದೆ. ಒಂದು ವೇಳೆ ಆಯೋಜನೆಗೆ ಅನುಮತಿ ಸಿಕ್ಕರೆ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಎಂಎಲ್ಸಿ ಮತ್ತು ರಾಜ್ಯಸಭಾ ಸದಸ್ಯರ ಚುನಾವಣೆ ಕಾರಣದಿಂದ ಪ್ರಕ್ರಿಯೆ ತಡವಾಗಿದೆ. ಹೈಕಮಾಂಡ್ ಸೂಚನೆ ಮೇರೆಗೆ ಮುಖ್ಯಮಂತ್ರಿ ಹಾಗೂ ಪ್ರಮುಖ ನಾಯಕರು ನವದೆಹಲಿಗೆ ತೆರಳುತ್ತಿದ್ದು, ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗಲಿದೆ’ ಎಂದರು.ಸಚಿವ ಸ್ಥಾನಕ್ಕೆ ಹಣ ನೀಡಬೇಕು ಎಂಬ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಇಂತಹ ಆರೋಪಗಳು ವಿರೋಧಪಕ್ಷಗಳ ಸೃಷ್ಟಿ. ಸೂಟ್ಕೇಸ್ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ. ಕೊಟ್ಟರೆ ಮಂತ್ರಿ ಸ್ಥಾನ ಕೊಡುತ್ತಾರೆ ಎಂಬುದು ಸುಳ್ಳು. ಅಂತಹ ಸಂಸ್ಕೃತಿ ಇರುವುದು ವಿರೋಧ ಪಕ್ಷದವರಲ್ಲೇ’ ಎಂದು ಹೇಳಿದರು.‘ನಮ್ಮಲ್ಲಿ ದಕ್ಷತೆ ಮತ್ತು ಪಕ್ಷನಿಷ್ಠೆ ಆಧಾರದ ಮೇಲಷ್ಟೇ ಸ್ಥಾನ ನೀಡಲಾಗುತ್ತದೆ. ಯಾರು ದುಡ್ಡು ಕೊಟ್ಟು ಮಂತ್ರಿಗಳಾಗುತ್ತಾರೋ ಅವರ ಸರ್ಕಾರ ಸರಿಯಾಗಿ ನಡೆಯುವುದಿಲ್ಲ. ಇದು ವಿಪಕ್ಷಗಳ ಸಂಸ್ಕೃತಿ’ ಎಂದರು. ‘ಬಿಡದಿ ಭಾಗದಲ್ಲಿ ಜಮೀನು ಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಮುಖ್ಯಮಂತ್ರಿಯವರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದರು.