ಧಾರವಾಡ: ಅಪಾರ್ಟ್ಮೆಂಟ್ನಲ್ಲಿ ವೈದ್ಯನ ಕೊಲೆ, ಪತ್ನಿ ವಶಕ್ಕೆ
ಧಾರವಾಡ: ನಗರದ ಬಾರಾಕೋಟ್ರಿಯ ರಂಕಾ ಸ್ಟೆಲೋ ಅಪಾರ್ಟ್ಮೆಂಟ್ನ ಆರನೇ ಮಹಡಿಯ ಮನೆಯ ಕೋಣೆಯಲ್ಲಿ ಡಾ.ಕಿರಣ್ ಹೊನ್ನಣ್ಣ(ಅರಿವಳಿಕೆ ತಜ್ಞ) ಅವರನ್ನು ಇರಿದು ಕೊಲೆ ಮಾಡಲಾಗಿದೆ. ಗಾಯಗೊಂಡಿದ್ದ ಅವರ ಪುತ್ರ ನಿಹಿತ್ನನ್ನು ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಿರಣ್ ಪತ್ನಿ ಡಾ.ಪ್ರಿಯಾಂಕಾ ಕತ್ತನಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಿರಣ್ ಅವರು ಚಿರಾ

ಧಾರವಾಡ: ನಗರದ ಬಾರಾಕೋಟ್ರಿಯ ರಂಕಾ ಸ್ಟೆಲೋ ಅಪಾರ್ಟ್ಮೆಂಟ್ನ ಆರನೇ ಮಹಡಿಯ ಮನೆಯ ಕೋಣೆಯಲ್ಲಿ ಡಾ.ಕಿರಣ್ ಹೊನ್ನಣ್ಣ(ಅರಿವಳಿಕೆ ತಜ್ಞ) ಅವರನ್ನು ಇರಿದು ಕೊಲೆ ಮಾಡಲಾಗಿದೆ. ಗಾಯಗೊಂಡಿದ್ದ ಅವರ ಪುತ್ರ ನಿಹಿತ್ನನ್ನು ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಿರಣ್ ಪತ್ನಿ ಡಾ.ಪ್ರಿಯಾಂಕಾ ಕತ್ತನಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಿರಣ್ ಅವರು ಚಿರಾಯು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಕಿರಣ್ ಅವರ ಕುತ್ತಿಗೆ ಮತ್ತು ಬೆನ್ನಿನ ಭಾಗಕ್ಕೆ ಇರಿದು ಹತ್ಯೆ ಮಾಡಲಾಗಿದೆ. ‘ಮನೆಯ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಕಿರಣ್ ಶವ ಇತ್ತು. ಯಾರು, ಯಾವಾಗ ಮತ್ತು ಯಾಕೆ ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಾಗಿಲ್ಲ. ಪತ್ನಿ ಪ್ರಿಯಾಂಕಾ ಕೃತ್ಯ ಎಸಗಿರಬಹುದು ಎಂದು ಕಿರಣ್ ಅವರ ಕುಟುಂಬದವರು ಆರೋಪಿಸಿದ್ದಾರೆ’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು. ‘ಮನೆಯಲ್ಲಿ ಪತಿ, ಪತ್ನಿ ಮತ್ತು ಪುತ್ರ ಮೂವರು ವಾಸ ಇದ್ದರು. ಕಿರಣ್ಗೆ ಬೆಳಿಗ್ಗೆ ಕುಟುಂಬದವರು, ಸ್ನೇಹಿತರು ಫೋನ್ ಮಾಡಿದಾಗ ಪತ್ನಿ ಪ್ರಿಯಾಂಕಾ ಮಾತನಾಡಿ ಕಿರಣ್ ಡ್ಯೂಟಿ ಹೋಗಿದ್ದಾರೆ, ವಿಶ್ರಾಂತಿ ಪಡೆಯುತ್ತಿದ್ಧಾರೆ ಎಂದು ಹೇಳಿದ್ದಾರೆ. ಅಕ್ಕಪಕ್ಕದ ಮನೆಯವರು ಕೇಳಿದಾಗ ಕಿರಣ್ ಹೊರಗೆ ಹೋಗಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಪತಿ ಮತ್ತು ಪತ್ನಿ ನಡುವೆ ಕಲಹವಾಗಿ ಘಟನೆ ನಡೆದಿರಬಹುದು’ ಎಂದು ಅವರು ತಿಳಿಸಿದರು. ‘ಈ ವೈದ್ಯ ದಂಪತಿ ಪುತ್ರ ನಿಹಿತ್ಗೂ (8 ವರ್ಷ) ಆಯುಧದಿಂದ ಇರಿದಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾರ್ಟ್ಮೆಂಟ್ನಲ್ಲಿನ ಸಿ.ಸಿ.ಕ್ಯಾಮೆರಾಗಳಲ್ಲಿ ಫೂಟೇಜ್ ಪರಿಶೀಲಿಸಲಾಗುತ್ತಿದೆ. ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು’ ಎಂದರು.