ತಾಪಮಾನ ಏರಿಕೆಯಿಂದ ನಿದ್ರಾಹೀನತೆ ಹೆಚ್ಚಳ: ಆಘಾತಕಾರಿ ವರದಿ ಬಹಿರಂಗ
ನವದೆಹಲಿ: ಹವಾಮಾನ ಬದಲಾವಣೆಯು ಕೇವಲ ಬಿಸಿಲು, ಪ್ರವಾಹ ಅಥವಾ ಬರಕ್ಕೆ ಮಾತ್ರ ಸೀಮಿತವಾಗಿಲ್ಲ. ಈಗ ಅದು ಜನರ ನಿದ್ರೆಯ ಮೇಲೆಯೂ ಪರಿಣಾಮ ಬೀರುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಕ್ಲೈಮೇಟ್ ಸೆಂಟ್ರಲ್ ವರದಿಯ ಪ್ರಕಾರ, ಹವಾಮಾನ ಸಂಬಂಧಿತ ನಿದ್ರಾಹೀನತೆ ಸಮಸ್ಯೆ ಹೆಚ್ಚುತ್ತಿದ್ದು, ಭಾರತದಲ್ಲಿ ಈ ಸಮಸ್ಯೆ ಗಂಭೀರವಾಗಿದೆ.ಜಾಗತಿಕವಾಗಿ, 2020 ಮತ್ತು 2025ರ ನಡುವೆ ರಾತ್ರಿಯ

ನವದೆಹಲಿ: ಹವಾಮಾನ ಬದಲಾವಣೆಯು ಕೇವಲ ಬಿಸಿಲು, ಪ್ರವಾಹ ಅಥವಾ ಬರಕ್ಕೆ ಮಾತ್ರ ಸೀಮಿತವಾಗಿಲ್ಲ. ಈಗ ಅದು ಜನರ ನಿದ್ರೆಯ ಮೇಲೆಯೂ ಪರಿಣಾಮ ಬೀರುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಕ್ಲೈಮೇಟ್ ಸೆಂಟ್ರಲ್ ವರದಿಯ ಪ್ರಕಾರ, ಹವಾಮಾನ ಸಂಬಂಧಿತ ನಿದ್ರಾಹೀನತೆ ಸಮಸ್ಯೆ ಹೆಚ್ಚುತ್ತಿದ್ದು, ಭಾರತದಲ್ಲಿ ಈ ಸಮಸ್ಯೆ ಗಂಭೀರವಾಗಿದೆ.ಜಾಗತಿಕವಾಗಿ, 2020 ಮತ್ತು 2025ರ ನಡುವೆ ರಾತ್ರಿಯ ಉಷ್ಣತೆಯಿಂದಾಗಿ ಪ್ರತಿ ವರ್ಷ ವ್ಯಕ್ತಿಯೊಬ್ಬರು ಸರಾಸರಿ ಸುಮಾರು 56 ಗಂಟೆಗಳ ನಿದ್ರೆಯನ್ನು ಕಳೆದುಕೊಂಡಿದ್ದಾರೆ. ಇದು ಏಳು ರಾತ್ರಿಗಳ ನಿದ್ದೆಗೆ ಸಮವಾಗಿದೆ. ಇದರಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಒಂದು ರಾತ್ರಿಯೂ ಸೇರಿದೆ ಎಂದು ವರದಿ ಹೇಳಿದೆ.‘ಈ ಸಂಶೋಧನೆಯಲ್ಲಿ 1970ರ ದಶಕದ ಆರಂಭದಿಂದ 1,338 ಪ್ರಮುಖ ಜಾಗತಿಕ ನಗರಗಳನ್ನು ವಿಶ್ಲೇಷಿಸಲಾಗಿದೆ. ತಾಪಮಾನ ಹೆಚ್ಚಳದಿಂದಾಗಿರುವ ನಿದ್ರಾಹೀನತೆ ಪ್ರಮಾಣ ದ್ವಿಗುಣಗೊಂಡಿದೆ’ ಎಂದು ಕ್ಲೈಮೇಟ್ ಸೆಂಟ್ರಲ್ನ ವಿಜ್ಞಾನ ವಿಭಾಗದ ಉಪಾಧ್ಯಕ್ಷೆ ಕ್ರಿಸ್ಟಿನಾ ಡಹ್ಲ್ ಅವರು ಹೇಳಿದ್ದಾರೆ.ಈ ವಿಶ್ಲೇಷಣೆಯು ಭಾರತದ 107 ನಗರಗಳನ್ನು ಒಳಗೊಂಡಿದ್ದು, ಅದರಲ್ಲಿ ತಮಿಳುನಾಡು ಹವಾಮಾನ ಸಂಬಂಧಿತ ನಿದ್ರಾಹೀನತೆ ಎದುರಿಸುತ್ತಿರುವ ಅಗ್ರ ರಾಜ್ಯವಾಗಿದೆ.ಇದಕ್ಕೆ ಮುಖ್ಯ ಕಾರಣ ರಾತ್ರಿ ವೇಳೆಯ ಉಷ್ಣಾಂಶ ಹೆಚ್ಚಾಗುತ್ತಿರುವುದು. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ವಾತಾವರಣ ತಂಪಾಗುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ಉತ್ತಮ ನಿದ್ರೆ ಬರುತ್ತದೆ. ಆದರೆ ಹವಾಮಾನ ಬದಲಾವಣೆಯಿಂದ ಈಗ ಅನೇಕ ನಗರಗಳಲ್ಲಿ ರಾತ್ರಿ ಕೂಡ ವಾತಾವರಣ ಬಿಸಿಯಾಗಿಯೇ ಇರುತ್ತದೆ. ಇದರ ಪರಿಣಾಮವಾಗಿ ಜನರಿಗೆ ನಿದ್ರೆ ತಡವಾಗಿ ಬರುತ್ತದೆ, ಮಧ್ಯರಾತ್ರಿ ಪದೇಪದೇ ಎಚ್ಚರವಾಗುತ್ತದೆ ಮತ್ತು ನಿದ್ರೆಯ ಗುಣಮಟ್ಟ ಕುಸಿಯುತ್ತಿದೆ.ಭಾರತದ ಪ್ರಮುಖ ನಗರಗಳ ಪೈಕಿ ಚೆನ್ನೈನಲ್ಲಿ ವರ್ಷಕ್ಕೆ ಸುಮಾರು 93 ಗಂಟೆಗಳ, ಮುಂಬೈನಲ್ಲಿ 84 ಗಂಟೆಗಳ ಮತ್ತು ಕೋಲ್ಕತ್ತದಲ್ಲಿ 80 ಗಂಟೆಗಳ ನಿದ್ರೆ ನಷ್ಟವಾಗುತ್ತಿದೆ ಎಂದು ವರದಿ ಹೇಳಿದೆ. ಬೆಂಗಳೂರಿನಲ್ಲೂ ಹವಾಮಾನ ಬದಲಾವಣೆಯ ಪರಿಣಾಮ ಸ್ಪಷ್ಟವಾಗಿ ಕಂಡುಬಂದಿದ್ದು, ವರ್ಷಕ್ಕೆ ಸುಮಾರು 8 ಗಂಟೆಗಳ ನಿದ್ರೆ ನಷ್ಟಕ್ಕೆ ಅದು ಕಾರಣವಾಗಿದೆ.– ಡಾ. ಕೋರ್ಟ್ನಿ ಹೋವರ್ಡ್, ಗ್ಲೋಬಲ್ ಕ್ಲೈಮೇಟ್ ಅಂಡ್ ಹೆಲ್ತ್ ಅಲಯನ್ಸ್ನ ಅಧ್ಯಕ್ಷೆಉತ್ತಮ ಆರೋಗ್ಯಕ್ಕಾಗಿ ವಯಸ್ಕರಿಗೆ ರಾತ್ರಿ ಏಳರಿಂದ ಒಂಬತ್ತು ಗಂಟೆಗಳ ನಿದ್ರೆಯ ಅಗತ್ಯವಿರುತ್ತದೆ. ರಾತ್ರಿಯ ತಾಪಮಾನದಲ್ಲಿನ ಹೆಚ್ಚಳವು ನೇರವಾಗಿ ನಿದ್ರೆಯ ಮೇಲೆ ಪರಿಣಾಮ ಬೀರುತ್ತಿದೆ. ಇದರ ಹೆಚ್ಚಿನ ಪರಿಣಾಮವು ಬಡ ದೇಶಗಳ ನಿವಾಸಿಗಳು, ಹಿರಿಯ ನಾಗರಿಕರು ಮತ್ತು ಮಹಿಳೆಯರಲ್ಲಿ ಕಂಡುಬರುತ್ತದೆ.