ಹಾವೇರಿ: ಅಕ್ರಮ ‘ಲಕ್ಕಿ ಡ್ರಾ’;ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಕಂಪನಿ ಮೇಲೆ ದಾಳಿ
ಹಾವೇರಿ: ‘ಪ್ರತಿ ತಿಂಗಳು ಜನರಿಂದ ಅಕ್ರಮವಾಗಿ ಕಂತಿನ ರೂಪದಲ್ಲಿ ಹಣ ಕಟ್ಟಿಸಿಕೊಂಡು ಲಕ್ಕಿ ಡ್ರಾ ಮೂಲಕ ವಿವಿಧ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತಿದೆ’ ಎಂಬ ಆರೋಪದಡಿ ನಗರದಲ್ಲಿರುವ ‘ಮುಂಟೆಕ್ 999’ ಕಂಪನಿ ಕಚೇರಿ ಮೇಲೆ ಜಿಲ್ಲಾಡಳಿತದ ಅಧಿಕಾರಿಗಳು ಬುಧವಾರ ದಾಳಿ ಮಾಡಿದ್ದಾರೆ.ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾವೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರ

ಹಾವೇರಿ: ‘ಪ್ರತಿ ತಿಂಗಳು ಜನರಿಂದ ಅಕ್ರಮವಾಗಿ ಕಂತಿನ ರೂಪದಲ್ಲಿ ಹಣ ಕಟ್ಟಿಸಿಕೊಂಡು ಲಕ್ಕಿ ಡ್ರಾ ಮೂಲಕ ವಿವಿಧ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತಿದೆ’ ಎಂಬ ಆರೋಪದಡಿ ನಗರದಲ್ಲಿರುವ ‘ಮುಂಟೆಕ್ 999’ ಕಂಪನಿ ಕಚೇರಿ ಮೇಲೆ ಜಿಲ್ಲಾಡಳಿತದ ಅಧಿಕಾರಿಗಳು ಬುಧವಾರ ದಾಳಿ ಮಾಡಿದ್ದಾರೆ.ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾವೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಗುಡ್ಡನಗೌಡ್ರ ಶ್ರೀಕಾಂತಗೌಡ ಅಂದಾನಿಗೌಡ್ರ ಅವರು ಪಾಲುದಾರಿಕೆಯಲ್ಲಿ ಮುಂಟೆಕ್ ಕಂಪನಿ ತೆರೆದಿದ್ದಾರೆ. ‘ಹೋಲ್ಸೇಲ್ ಗೃಹೋಪಯೋಗಿ ವಸ್ತುಗಳ ಮಾರಾಟ’ಕ್ಕೆ ಅನುಮತಿ ಪಡೆದುಕೊಂಡಿದ್ದಾರೆ. ಆದರೆ, ಯಾವುದೇ ಅನುಮತಿ ಹಾಗೂ ನೋಂದಣಿ ಇಲ್ಲದೇ ಜನರಿಂದ ಕಂತಿನಲ್ಲಿ ಹಣ ಕಟ್ಟಿಸಿಕೊಳ್ಳುತ್ತಿರುವ ಆರೋಪ ವ್ಯಕ್ತವಾಗಿದೆ.ಮುಂಟೆಕ್ ಕಂಪನಿ ಬಗ್ಗೆ ಪ್ರಾಥಮಿಕ ಮಾಹಿತಿ ಕಲೆಹಾಕಿರುವ ಜಿಲ್ಲಾಡಳಿತದ ಅಧಿಕಾರಿಗಳು, ನಗರದ ವಾಲ್ಮೀಕಿ ವೃತ್ತದಲ್ಲಿರುವ ಕಚೇರಿ ಮೇಲೆ ಬುಧವಾರ ಮಧ್ಯಾಹ್ನ ದಿಢೀರ್ ದಾಳಿ ಮಾಡಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಂಪನಿ ಮಾಲೀಕ ಹಾಗೂ ವ್ಯವಸ್ಥಾಪಕರು, ದಾಖಲೆ ತರುವ ನೆಪ ಹೇಳಿ ಕಚೇರಿಯಿಂದ ಹೊರಟು ಹೋಗಿದ್ದಾರೆ. ಸಂಜೆಯಾದರೂ ಅವರು ಕಚೇರಿಗೆ ವಾಪಸು ಬಂದಿಲ್ಲ. ಮೊಬೈಲ್ ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅವರಿಬ್ಬರಿಗಾಗಿ ಅಧಿಕಾರಿಗಳು ಕಚೇರಿಯಲ್ಲಿ ಕಾಯುತ್ತಿದ್ದಾರೆ.ಕಂಪನಿ ಕಚೇರಿಯಲ್ಲಿರುವ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು, ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಅಧಿಕಾರಿಗಳು ಕೇಳುತ್ತಿರುವ ಮಾಹಿತಿಯನ್ನು ಸಿಬ್ಬಂದಿ ನೀಡುತ್ತಿಲ್ಲ. ‘ಮಾಲೀಕರು ಹಾಗೂ ವ್ಯವಸ್ಥಾಪಕರಿಗೆ ಹೆಚ್ಚಿನ ಮಾಹಿತಿ ಇದೆ. ಅವರನ್ನೇ ಕೇಳಬೇಕು’ ಎಂದು ಸಿಬ್ಬಂದಿ ಉತ್ತರಿಸುತ್ತಿದ್ದಾರೆ.ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಹಾಗೂ ಜಿಲ್ಲಾ ನೋಂದಣಾಧಿಕಾರಿಯವರು ಕಚೇರಿಯಲ್ಲಿ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ಹಿನ್ನೆಲೆಯಲ್ಲಿ ಮುಂಟೆಕ್ ಕಚೇರಿ ಹಾಗೂ ಗೃಹೋಪಯೋಗಿ ವಸ್ತುಗಳ ಮಳಿಗೆಗೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಹೆಚ್ಚುವರಿ ಎಸ್.ಪಿ. ಲಕ್ಷ್ಮಣ ಶಿರಕೋಳ ಸೇರಿದಂತೆ ಇಬ್ಬರು ಡಿವೈಎಸ್ಪಿ, ನಾಲ್ವರು ಇನ್ಸ್ಪೆಕ್ಟ್ಗಳು ಭದ್ರತೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.