ಸಂಪಾದಕೀಯ: ‘ಕೆಪಿಎಸ್ಸಿ’ಗೆ ಮತ್ತೊಮ್ಮೆ ಮಸಿ; ಕಳಂಕ ಸರಣಿಗೆ ಕೊನೆ ಎಂದು?
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಎಸ್. ಸಾಹುಕಾರ ಅಮಾನತುಗೊಂಡಿರುವುದು, ನ್ಯಾಯ, ಅರ್ಹತೆ ಮತ್ತು ನೈತಿಕತೆಯ ಪ್ರತೀಕ ಆಗಿರಬೇಕಾದ ಸಂಸ್ಥೆಯ ಇತಿಹಾಸಕ್ಕೆ ಸೇರ್ಪಡೆಯಾಗಿರುವ ಮತ್ತೊಂದು ವಿಷಾದಕರ ಅಧ್ಯಾಯವಾಗಿದೆ. ಕೆಪಿಎಸ್ಸಿ ಅಧ್ಯಕ್ಷರನ್ನು ಅಮಾನತುಗೊಳಿಸಿರುವ ಹಾಗೂ ಅವರ ವಿರುದ್ಧದ ಆರೋಪಗಳ ಕುರಿತ ತನಿಖೆಗೆ ಸಂವಿಧಾನದ 317(

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಎಸ್. ಸಾಹುಕಾರ ಅಮಾನತುಗೊಂಡಿರುವುದು, ನ್ಯಾಯ, ಅರ್ಹತೆ ಮತ್ತು ನೈತಿಕತೆಯ ಪ್ರತೀಕ ಆಗಿರಬೇಕಾದ ಸಂಸ್ಥೆಯ ಇತಿಹಾಸಕ್ಕೆ ಸೇರ್ಪಡೆಯಾಗಿರುವ ಮತ್ತೊಂದು ವಿಷಾದಕರ ಅಧ್ಯಾಯವಾಗಿದೆ. ಕೆಪಿಎಸ್ಸಿ ಅಧ್ಯಕ್ಷರನ್ನು ಅಮಾನತುಗೊಳಿಸಿರುವ ಹಾಗೂ ಅವರ ವಿರುದ್ಧದ ಆರೋಪಗಳ ಕುರಿತ ತನಿಖೆಗೆ ಸಂವಿಧಾನದ 317(1)ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ನ ಗಮನಕ್ಕೆ ತರುವಂತೆ ರಾಷ್ಟ್ರಪತಿಗೆ ಶಿಫಾರಸು ಮಾಡಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಕ್ರಮವು, ಈ ಸಂಸ್ಥೆಯ ವಿಶ್ವಾಸಾರ್ಹತೆ ಸಂಪೂರ್ಣ ಅಧೋಗತಿಗೆ ಮುಟ್ಟಿರುವುದನ್ನು ಸೂಚಿಸುವಂತಿದೆ. ಸಾಹುಕಾರ ಅವರು ತಮ್ಮ ಇಬ್ಬರು ಪುತ್ರಿಯರಿಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಕೈಗಾರಿಕಾ ವಿಸ್ತರಣಾಧಿಕಾರಿಯ ಹುದ್ದೆಗೆ ಆಯ್ಕೆಯಾಗಲು ಅನುಕೂಲ ಮಾಡಿಕೊಟ್ಟಿದ್ದಾರೆ. ಆ ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿ ಸಂಘರ್ಷ ಸ್ಪಷ್ಟವಾಗಿದ್ದರೂ ಆಯ್ಕೆ ಪ್ರಕ್ರಿಯೆಯಿಂದ ದೂರ ಉಳಿಯದಿರುವುದರ ಜೊತೆಗೆ, ಪ್ರಮುಖ ಮಾಹಿತಿಗಳನ್ನು ಮರೆಮಾಚುವ ಮೂಲಕ ಮೀಸಲಾತಿ ಸೌಲಭ್ಯ ದೊರೆಯುವಂತೆ ಮಾಡಿದ್ದಾರೆ ಎನ್ನಲಾಗಿದೆ. ಅವರ ಪುತ್ರಿ ಸುಮಾ ಎಸ್. ಸಾಹುಕಾರ ವಿರುದ್ಧ ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಿರುವ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಈ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಆಯೋಗದ ಸಭೆಗಳು ಮತ್ತು ಪರೀಕ್ಷೆಗೆ ಸಂಬಂಧಿಸಿದ ಪ್ರಕ್ರಿಯೆಗಳಿಂದ ಅಧ್ಯಕ್ಷರನ್ನು ದೂರ ಇಡುವ ನಿರ್ಣಯವನ್ನು ಕೆಪಿಎಸ್ಸಿಯ ಎಲ್ಲ ಸದಸ್ಯರು ಸರ್ವಾನುಮತದಿಂದ ಕೈಗೊಂಡಿದ್ದರು. ಆ ನಿರ್ಣಯವನ್ನು ಪ್ರಕ್ರಿಯಾತ್ಮಕ ಕಾರಣಗಳಿಗಾಗಿ ಹೈಕೋರ್ಟ್ ತಡೆ ಹಿಡಿದಿದ್ದರೂ, ರಾಜ್ಯಪಾಲರ ಮಧ್ಯಪ್ರವೇಶದಿಂದಾಗಿ ಪ್ರಕರಣವು ಸಾಂವಿಧಾನಿಕ ಹಂತವನ್ನು ತಲಪಿದೆ. ಕೆಪಿಎಸ್ಸಿಯ ಸದ್ಯದ ಹಗರಣವನ್ನು ಆಕಸ್ಮಿಕ ಅಥವಾ ಅಪವಾದ ಎಂದು ಭಾವಿಸುವಂತಿಲ್ಲ. ಕಳೆದ ಎರಡು ದಶಕಗಳಿಂದಲೂ ಒಂದಲ್ಲಾ ಒಂದು ಬಗೆಯ ನಿರಾಶಾದಾಯಕ ಬೆಳವಣಿಗೆಗಳೊಂದಿಗೆ ಕೆಪಿಎಸ್ಸಿ ವಿವಾದಗಳ ಕೇಂದ್ರವಾಗಿದ್ದು, ಆ ಸರಣಿಗೆ ಈಗ ಹೊಸ ಕೊಂಡಿಯೊಂದು ಸೇರ್ಪಡೆಯಾಗಿದೆ. ನೇಮಕಾತಿ ಹಗರಣಗಳು, ಲಂಚದ ಆರೋಪಗಳು, ಉತ್ತರಪತ್ರಿಕೆಗಳ ತಿರುಚುವಿಕೆ, ನೇಮಕಾತಿಯಲ್ಲಿ ವಿಳಂಬ ಹಾಗೂ ದೀರ್ಘಕಾಲದ ನ್ಯಾಯಾಂಗ ಹೋರಾಟಗಳಂತಹ ವಿದ್ಯಮಾನಗಳ ಕಳಂಕ ಕೆಪಿಎಸ್ಸಿಗೆ ಮೆತ್ತಿಕೊಂಡಿದೆ. ಆಯೋಗದ ಬಗ್ಗೆ ಸಾರ್ವಜನಿಕರ ವಿಶ್ವಾಸ ಎಷ್ಟರಮಟ್ಟಿಗೆ ಕುಸಿದಿದೆಯೆಂದರೆ, ಪ್ರತಿಯೊಂದು ನೇಮಕಾತಿ ಪ್ರಕ್ರಿಯೆಯನ್ನೂ ಗುಮಾನಿಯಿಂದ ನೋಡುವ ಪರಿಸ್ಥಿತಿಯಿದೆ. ಸರ್ಕಾರಿ ಸೇವೆಯ ಕನಸು ಹೊಂದಿರುವ ಸಾವಿರಾರು ಯುವ ಉದ್ಯೋಗಾಕಾಂಕ್ಷಿಗಳ ಪಾಲಿಗೆ ಆಯೋಗ ಅವಕಾಶಗಳ ಬಾಗಿಲಾಗಬೇಕಿತ್ತು. ಆದರೆ, ಅದು ಅನಿಶ್ಚಯ ಹಾಗೂ ನಿರಾಶೆಯ ಮೂಲವಾಗಿ ಪರಿಣಮಿಸಿದೆ. ನಾಡಿನ ಅತ್ಯುತ್ತಮ ಪ್ರತಿಭೆಗಳನ್ನು ಸಾರ್ವಜನಿಕ ಸೇವೆಗೆ ಆಯ್ಕೆ ಮಾಡುವ ಹೊಣೆ ಹೊತ್ತಿರುವ ಸಂಸ್ಥೆಯೇ, ರಾಜ್ಯದ ಕೊರಳಿಗೆ ತೂಗುಗುಂಡಾಗಿ ಪರಿಣಮಿಸಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಕೆಪಿಎಸ್ಸಿಯ ಎಲ್ಲ ದುರಂತಗಳಿಗೆ ಸುಧಾರಣಾ ಪ್ರಯತ್ನಗಳ ಕೊರತೆ ಕಾರಣವಾಗಿರದೆ, ಅವುಗಳನ್ನು ಜಾರಿಗೊಳಿಸುವಲ್ಲಿ ಆಗಿರುವ ವೈಫಲ್ಯವೇ ಕಾರಣವಾಗಿದೆ. ಆಯೋಗದ ಕಾರ್ಯ ನಿರ್ವಹಣೆಯನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ‘ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು, ತಿದ್ದುಪಡಿ) ಮಸೂದೆ–2025’ನ್ನು ಜಾರಿಗೆ ತಂದಿದೆ. ಅದಕ್ಕೂ ಮುನ್ನ ಪಿ.ಸಿ. ಹೋಟಾ ಸಮಿತಿಯು ಆಯೋಗದ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಶಿಫಾರಸುಗಳನ್ನು ಸಲ್ಲಿಸಿತ್ತು. ನೇಮಕಾತಿಗೆ ಸಂಬಂಧಿಸಿದಂತೆ ವಾರ್ಷಿಕ ವೇಳಾಪಟ್ಟಿ ರೂಪಿಸುವುದು, ಸಂದರ್ಶನ ಸಮಿತಿಯ ವಿವೇಚನಾ ಅಧಿಕಾರ ಕನಿಷ್ಠಗೊಳಿಸುವುದು, ಮೌಲ್ಯಮಾಪನ ವ್ಯವಸ್ಥೆ ಬಲಪಡಿಸುವುದು ಹಾಗೂ ಆಯೋಗದ ಸದಸ್ಯರ ನೇಮಕಾತಿಯಲ್ಲಿ ಪಾರದರ್ಶಕತೆ ಖಾತರಿಪಡಿಸುವುದು ಸಮಿತಿಯ ಶಿಫಾರಸುಗಳಲ್ಲಿ ಸೇರಿದ್ದವು. ಪ್ರಸ್ತುತ ಶಾಸಕ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿಯನ್ನು ರಚಿಸಲಾಗಿದೆ. ಕೆಪಿಎಸ್ಸಿಗೆ ಅಗತ್ಯವಾಗಿರುವುದು ಮತ್ತೊಂದು ತನಿಖಾ ಸಮಿತಿ ಅಥವಾ ಹೊಸ ವರದಿಗಳಲ್ಲ. ರಾಜಕೀಯ ಇಚ್ಛಾಶಕ್ತಿ ಬೆನ್ನೆಲುಬಾಗಿರುವ ಮೂಲಭೂತ ರಚನಾತ್ಮಕ ಸುಧಾರಣೆಗಳು ಆಯೋಗದ ಸುಧಾರಣೆಗೆ ಅಗತ್ಯವಾಗಿವೆ. ಆಯೋಗದ ಸದಸ್ಯರ ನೇಮಕಾತಿಯು ಸಂಪೂರ್ಣ ಪಾರದರ್ಶಕವಾಗಿದ್ದು, ಅರ್ಹತೆ ಮತ್ತು ಕಳಂಕಗಳಿಲ್ಲದ ಪ್ರಾಮಾಣಿಕತೆಯೇ ನೇಮಕಕ್ಕೆ ಮಾನದಂಡಗಳಾಗಿರಬೇಕು. ಉದ್ಯೋಗ ನೇಮಕಾತಿಗಳು ತಂತ್ರಜ್ಞಾನವನ್ನು ಆಧರಿಸಿ, ನಿಗದಿತ ಕಾಲಮಿತಿಯೊಳಗೆ ಹಾಗೂ ಸ್ವತಂತ್ರ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಅರ್ಹತೆಯಷ್ಟೇ ಏಕೈಕ ಮಾನದಂಡವಾಗಿರುವ ನೇಮಕಾತಿ ವ್ಯವಸ್ಥೆಗೆ ಕರ್ನಾಟಕದ ಯುವಜನ ಅರ್ಹರು. ಆಯೋಗದ ವಿಶ್ವಾಸಾರ್ಹತೆಯನ್ನು ಪುನರ್ ಸ್ಥಾಪಿಸುವುದು ಆಡಳಿತಾತ್ಮಕ ಅಗತ್ಯ ಮಾತ್ರವಲ್ಲ; ಅದು ಸಂವಿಧಾನಬದ್ಧ ಹೊಣೆಗಾರಿಕೆಯೂ ಆಗಿದೆ.