ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಕೊರತೆ, ಕೃಷಿ, ಮೀನುಗಾರಿಕೆಗೂ ತೊಂದರೆ
ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ಕೊಳವೆ ಬಾವಿಗಳನ್ನೇ ಆಶ್ರಯಿಸಿದ್ದು, ಮುಂಗಾರು ಕೈಕೊಟ್ಟಿರುವುದು ಜಲಕ್ಷಾಮದ ಆತಂಕ ಮೂಡಿಸಿದೆ.ಜುಲೈ 10ರ ವೇಳೆಗೆ ತಾಲ್ಲೂಕಿನಲ್ಲಿ 565 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಈ ವರ್ಷ 525 ಮಿಲಿ ಮೀಟರ್ ಮಳೆ ಮಾತ್ರ ದಾಖಲಾಗಿದೆ. ಕಳೆದ ಸಾಲಿನಷ್ಟೂ ಮಳೆಯಾಗದಿರುವುದು ರೈತರಲ್ಲಿ ಆತಂಕ ಮೂಡಿಸಿ

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ಕೊಳವೆ ಬಾವಿಗಳನ್ನೇ ಆಶ್ರಯಿಸಿದ್ದು, ಮುಂಗಾರು ಕೈಕೊಟ್ಟಿರುವುದು ಜಲಕ್ಷಾಮದ ಆತಂಕ ಮೂಡಿಸಿದೆ.ಜುಲೈ 10ರ ವೇಳೆಗೆ ತಾಲ್ಲೂಕಿನಲ್ಲಿ 565 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಈ ವರ್ಷ 525 ಮಿಲಿ ಮೀಟರ್ ಮಳೆ ಮಾತ್ರ ದಾಖಲಾಗಿದೆ. ಕಳೆದ ಸಾಲಿನಷ್ಟೂ ಮಳೆಯಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಿಗೆ ಜಲಜೀವನ್ ಮಿಷನ್(ಜೆಜೆಎಂ) ಸೇರಿ ವಿವಿಧ ಯೋಜನೆಗಳಡಿ ಕೊರೆದಿರುವ 554 ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಕೊಳವೆ ಬಾವಿಗಳು ಬತ್ತುವ ಭೀತಿ ಎದುರಾಗಿದೆ. ಕೊಳವೆ ಬಾವಿಗಳಲ್ಲಿ ಬೇಸಿಗೆ ಆರಂಭದಲ್ಲೇ ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆ ಇದೆ.ಪಟ್ಟಣ ಪಂಚಾಯಿತಿ ವ್ಯಾಪ್ತಿಯ 11 ವಾರ್ಡ್ಗಳಿಗೂ 39 ಕೊಳವೆ ಬಾವಿಗಳ ಮೂಲಕವೇ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಜುಲೈ ಮೊದಲ ವಾರದಲ್ಲಿ ಸುರಿದ ನಾಲ್ಕು ದಿನದ ಮಳೆ ಹೊರತುಪಡಿಸಿದರೆ ನಂತರ ಮಳೆ ಕ್ಷೀಣಿಸಿದೆ.ತಾಲ್ಲೂಕಿನಲ್ಲಿ 7,994 ಹೆಕ್ಟೇರ್ನಲ್ಲಿ ಅಡಿಕೆ, 3,522 ಹೆಕ್ಟೇರ್ನಲ್ಲಿ ಕಾಳುಮೆಣಸು, 3,969.81 ಹೆಕ್ಟೇರ್ನಲ್ಲಿ ಕಾಫಿ, 151.45 ಹೆಕ್ಟೇರ್ನಲ್ಲಿ ತೆಂಗು ಹಾಗೂ 87 ಹೆಕ್ಟೇರ್ನಲ್ಲಿ ಬಾಳೆ ಬೆಳೆಯಲಾಗುತ್ತಿದೆ. ಈ ತೋಟಗಾರಿಕಾ ಬೆಳೆಗಳು ಬಹುಪಾಲು ಕೊಳವೆಬಾವಿಗಳನ್ನೇ ಅವಲಂಬಿಸಿವೆ.‘ಮಳೆ ಕೈಕೊಟ್ಟರೆ ಉಷ್ಣಾಂಶ ಹೆಚ್ಚಾಗಿ ಅಡಿಕೆಯಲ್ಲಿ ಕಾಯಿ ಕಟ್ಟುವಿಕೆ ಕುಂಠಿತ ಆಗಬಹುದು. ಕಾಯಿ ಉದುರುವಿಕೆ ಹೆಚ್ಚಾಗುವುದರೊಂದಿಗೆ ಇಳುವರಿಯ ಮೇಲೂ ಪರಿಣಾಮ ಬೀರುತ್ತದೆ. ಅಂತ ರ್ಜಲ ಮಟ್ಟ ಕುಸಿದರೆ ತೋಟ ಉಳಿಸಿಕೊಳ್ಳುವುದೇ ಸವಾಲಾಗಲಿದೆ’ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.‘ಹೆಚ್ಚು ಮಳೆಯಾದಾಗ ಅಡಿಕೆ ಹಾಗೂ ಕಾಳುಮೆಣಸಿಗೆ ರೋಗಬಾಧೆ ಕಾಣಿಸಿಕೊಳ್ಳುತ್ತಿತ್ತು. ಈ ಬಾರಿ ಮಳೆ ಕೊರತೆಯಿಂದ ರೋಗಬಾಧೆ ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಪುನೀತ್ ಹೇಳಿದರು.ಮಳೆ ಕೊರತೆಯಿಂದ ಭದ್ರಾ ಜಲಾಶಯ ಸಮರ್ಪಕವಾಗಿ ಭರ್ತಿಯಾಗದಿದ್ದರೆ ತಾಲ್ಲೂಕಿನ ಭದ್ರಾ ಹಿನ್ನೀರಿನ ಮಟ್ಟವೂ ಇಳಿಕೆಯಾಗಲಿದೆ. ಇದರಿಂದ ಮೀನುಗಾರಿಕೆ ಕುಂಠಿತಗೊಂಡು, ಮೀನುಗಾರಿಕೆ ವೃತ್ತಿಯನ್ನು ನೇರವಾಗಿ ಅವಲಂಬಿಸಿರುವ 400ಕ್ಕೂ ಹೆಚ್ಚು ಕುಟುಂಬಗಳು ಹಾಗೂ ಪರೋಕ್ಷವಾಗಿ ಈ ವೃತ್ತಿ ಅವಲಂಬಿಸಿರುವ ಜನರ ಜೀವನೋಪಾಯಕ್ಕೂ ಧಕ್ಕೆ ಉಂಟಾಗುವ ಆತಂಕ ವ್ಯಕ್ತವಾಗಿದೆ.25 ಹೆಕ್ಟೇರ್ನಲ್ಲಿ ಮಾತ್ರ ಭತ್ತ ನಾಟಿಕಳೆದ ವರ್ಷ 2 ಸಾವಿರ ಹೆಕ್ಟೇರ್ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಿ, 1,850 ಹೆಕ್ಟೇರ್ನಲ್ಲಿ ನಾಟಿ ಮಾಡಲಾಗಿತ್ತು. ಈ ಬಾರಿ ಮಳೆ ಕೊರತೆಯಿಂದ ಈವರೆಗೆ 15ರಿಂದ 25 ಹೆಕ್ಟೇರ್ನಲ್ಲಿ ಮಾತ್ರ ಭತ್ತ ನಾಟಿಯಾಗಿದೆ.ಕೆಲ ರೈತರು ಸಸಿ ಮಡಿ ತಯಾರಿಸಿದ್ದು, ಕೊಳವೆಬಾವಿ ನೀರಿನ ಆಧಾರದಲ್ಲಿ ಶೀಘ್ರದಲ್ಲೇ ನಾಟಿ ಆರಂಭಿಸಲಿದ್ದಾರೆ. ಮಳೆ ಆಧರಿತ ಕೃಷಿ ಮಾಡುವವರಿಗೆ ಮಳೆ ವಿಳಂಬವಾದರೆ ಸಮಸ್ಯೆ ಎದುರಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹೇಶ್ ತಿಳಿಸಿದರು.‘ಮಳೆ ಕೊರತೆಯ ನೇರ ಪರಿಣಾಮ ಭತ್ತದ ಬೆಳೆ ಮೇಲೆ ಬೀಳಲಿದೆ. ಹಲವು ಗದ್ದೆಗಳಲ್ಲಿ ಸಸಿ ಮಡಿ ತಯಾರಿಸಿದ್ದರೂ ನೀರಿನ ಕೊರತೆ ಎದುರಾಗಿದೆ. ತೋಟಗಾರಿಕಾ ಬೆಳೆಗಳಿಗೆ ತಕ್ಷಣದ ಪರಿಣಾಮ ಕಾಣಿಸದಿದ್ದರೂ ಅಂತರ್ಜಲ ಮಟ್ಟ ಕುಸಿದರೆ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಉಂಟಾಗಲಿದೆ’ ಎಂದು ತೋಟಕೆರೆ–ಲಿಂಗಾಪುರದ ಕೃಷಿಕ ಸುನಿಲ್ ಹೇಳಿದರು.