ಗುಂಡಿನ ದಾಳಿ ನಡೆಸಿ ವ್ಯಕ್ತಿ ಕೊಲೆಗೆ ಯತ್ನ ಪ್ರಕರಣ: ಬೆಳಗಾವಿ ಕಮಿಷನರ್
ಬೆಳಗಾವಿ: ‘ಇಲ್ಲಿನ ಕ್ಯಾಂಪ್ ಪ್ರದೇಶದ ಯೂನಿಯನ್ ಜಿಮ್ಖಾನಾದಲ್ಲಿ ಮಂಗಳವಾರ ರಾತ್ರಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಲು ಎರಡು ತಂಡಗಳನ್ನು ರಚಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಹೇಳಿದರು.ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗುಂಡು ಹಾರಿಸಿದ ಆರೋಪಿ ಮತ್ತು ಪರಾರಿಯಾದ ವ್ಯಕ್ತಿ ಮಧ್ಯೆ ಇರುವ ಹ

ಬೆಳಗಾವಿ: ‘ಇಲ್ಲಿನ ಕ್ಯಾಂಪ್ ಪ್ರದೇಶದ ಯೂನಿಯನ್ ಜಿಮ್ಖಾನಾದಲ್ಲಿ ಮಂಗಳವಾರ ರಾತ್ರಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಲು ಎರಡು ತಂಡಗಳನ್ನು ರಚಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಹೇಳಿದರು.ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗುಂಡು ಹಾರಿಸಿದ ಆರೋಪಿ ಮತ್ತು ಪರಾರಿಯಾದ ವ್ಯಕ್ತಿ ಮಧ್ಯೆ ಇರುವ ಹಳೆಯ ದ್ವೇಷದ ಪರಿಣಾಮವೇ ಈ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇಬ್ಬರೂ ಜೂಜುಕೋರರಾಗಿದ್ದು, ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದರು.‘ಯೂನಿಯನ್ ಜಿಮ್ಖಾನಾದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಾಗಿವೆ. ಕ್ಲಬ್ನಲ್ಲಿದ್ದಾಗ ಪ್ರಫುಲ್ ಪಾಟೀಲ್ ತಮ್ಮ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಸುರೇಶ ಜಾಲಗಾರ ದೂರು ಕೊಟ್ಟಿದ್ದಾರೆ. ಕ್ಲಬ್ನ ಆಸ್ತಿಯನ್ನು ನಾಶಪಡಿಸಿದ ಮತ್ತು ಧ್ವಂಸಗೊಳಿಸಿದ ಆರೋಪದಡಿ, ಸುರೇಶ್ ಜಾಲಗಾರ, ರಾಜು ಕಡೋಲ್ಕರ, ಇಮ್ರಾನ್ ಪಠಾಣ್ ಮತ್ತು ಕುಂದರ್ ಯಳ್ಳೂರಕರ ವಿರುದ್ಧ ಕ್ಲಬ್ ಮ್ಯಾನೇಜರ್ ಮೇಲೆ ಪ್ರಕರಣ ದಾಖಲಿಸಿದ್ದಾರೆ’ ಎಂದು ವಿವರಿಸಿದರು.‘ಯೂನಿಯನ್ ಜಿಮ್ಖಾನಾ ರಕ್ಷಣಾ ಭೂಮಿಯಲ್ಲಿದ್ದು, ಅದರ ಗುತ್ತಿಗೆ ಅವಧಿ ಮುಗಿದಿದೆ. ಆದರೆ, ಕ್ಲಬ್ ಇನ್ನೂ ಮುಂದುವರಿದಿದೆ. ಅಲ್ಲಿ ಜೂಜಾಟಕ್ಕೆ ಯಾವುದೇ ಅನುಮತಿ ಇರಲಿಲ್ಲ. ಆದರೂ ಅನುಮತಿ ಇಲ್ಲದೆ ಕ್ಲಬ್ ಹೇಗೆ ಜೂಜಾಟ ನಡೆಸುತ್ತಿದೆ ಎಂಬುದರ ಕುರಿತು ನಾವು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ನಗರದಲ್ಲಿರುವ ಅಂಥ ಕ್ಲಬ್ಗಳ ಪಟ್ಟಿ ಮತ್ತು ಅವುಗಳಿಗೆ ನೀಡಲಾದ ಅನುಮತಿಗಳ ಬಗ್ಗೆ ಮಾಹಿತಿ ಪಡೆಯುತ್ತೇವೆ’ ಎಂದು ಅವರು ಹೇಳಿದರು.‘ಗುಂಡು ಹಾರಿಸಿದ ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸಲು ಎರಡು ತಂಡ ರಚಿಸಲಾಗಿದೆ. ಆರೋಪಿ ಪ್ರಫುಲ್ ಪಾಟೀಲ ಎಂಬಾತನ ಮೇಲೆ ಗಣೇಶಪುರ ಬಳಿ, 2025ರ ಜನವರಿಯಲ್ಲಿ ಸುರೇಶ್ ಜಾಲಗಾರ ಗುಂಡು ಹಾರಿಸಿದ್ದ. ಇದಕ್ಕೆ ಪ್ರತೀಕಾರವಾಗಿ ಪ್ರಫುಲ್ ಪಾಟೀಲ ಗುಂಡಿನ ದಾಳಿ ನಡೆಸಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇಬ್ಬರೂ ಜೂಜಾಟಗಾರರಾಗಿದ್ದು, ಕೊಲೆ ಯತ್ನ, ದರೋಡೆ, ಜೂಜಾಟ ಮತ್ತಿತರ ಪ್ರಕರಣಗಳ ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಗುಂಡು ಹಾರಿಸಿದ ಘಟನೆಯಲ್ಲಿ ಬಳಸಲಾದ ಎರಡು ಪಿಸ್ತೂಲ್ಗಳ ಮೂಲಗಳ ಬಗ್ಗೆಯೂ ನಾವು ತನಿಖೆ ನಡೆಸುತ್ತೇವೆ’ ಎಂದು ಹೇಳಿದರು.ಕ್ಯಾಂಪ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.