ದಾವಣಗೆರೆ: ನಕಲಿ ಚಿನ್ನದ ಬಿಲ್ಲೆಗಳನ್ನು ನೀಡಿ ₹85 ಲಕ್ಷ ವಂಚನೆ, ಮೂವರ ಬಂಧನ
ದಾವಣಗೆರೆ: ನಕಲಿ ಚಿನ್ನದ 1 ಕೆ.ಜಿ ಬಿಲ್ಲೆಗಳನ್ನು ನೀಡಿ ₹85 ಲಕ್ಷ ಕಿತ್ತು ಪರಾರಿಯಾಗಿದ್ದ ಪ್ರಕರಣ ಭೇದಿಸಿದ ನ್ಯಾಮತಿ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ ₹62.25 ಲಕ್ಷವನ್ನು ಜಪ್ತಿ ಮಾಡಿದ್ದಾರೆ.ಚನ್ನಗಿರಿಯ ಸಚಿನ್ ಗೋಂಧಳಿ (21), ನ್ಯಾಮತಿಯ ಸಂದೀಪ (38) ಹಾಗೂ ರವಿ (40) ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪ

ದಾವಣಗೆರೆ: ನಕಲಿ ಚಿನ್ನದ 1 ಕೆ.ಜಿ ಬಿಲ್ಲೆಗಳನ್ನು ನೀಡಿ ₹85 ಲಕ್ಷ ಕಿತ್ತು ಪರಾರಿಯಾಗಿದ್ದ ಪ್ರಕರಣ ಭೇದಿಸಿದ ನ್ಯಾಮತಿ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ ₹62.25 ಲಕ್ಷವನ್ನು ಜಪ್ತಿ ಮಾಡಿದ್ದಾರೆ.ಚನ್ನಗಿರಿಯ ಸಚಿನ್ ಗೋಂಧಳಿ (21), ನ್ಯಾಮತಿಯ ಸಂದೀಪ (38) ಹಾಗೂ ರವಿ (40) ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಶಿವಾನಂದಪ್ಪ ವಂಚನೆಗೆ ಒಳಗಾದವರು.‘ಹಳೆಯ ಮನೆಯೊಂದನ್ನು ಕೆಡವಿ ಹೊಸ ಮನೆ ಕಟ್ಟಲು ಪಾಯ ತೆಗೆಯುವಾಗ ಚಿನ್ನದ ನಿಧಿ ಸಿಕ್ಕಿದೆ. ಇದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ನಿರ್ಧರಿಸಿದ್ದೇವೆ. ಆಸಕ್ತಿ ಇದ್ದರೆ ಪರಿಶೀಲಿಸಿ ಖರೀದಿಸಬಹುದು’ ಎಂದು ಚನ್ನಗಿರಿಯ ಸಚಿನ್ ಮಹಾರಾಷ್ಟ್ರದ ಶಿವಾನಂದಪ್ಪ ಅವರ ಸ್ನೇಹಿತ ವಿಜಯ್ಕುಮಾರ್ ಅವರಿಗೆ ಜೂನ್ 7ರಂದು ದೂರವಾಣಿ ಕರೆ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.‘ಚಿನ್ನದ ನಿಧಿಸಿ ಸಿಕ್ಕಿರುವ ಮಾಹಿತಿ ನಂಬಿದ ಶಿವಾನಂದಪ್ಪ ಹಾಗೂ ವಿಜಯ್ಕುಮಾರ್ ಅವರು ನ್ಯಾಮತಿಗೆ ಬಂದು ಬಿಲ್ಲೆಗಳನ್ನು ಪರಿಶೀಲಸಿದ್ದರು. ಅಸಲಿ ಎಂಬುದು ಖಚಿತಪಡಿಸಿಕೊಂಡು ಖರೀದಿಸಲು ಉತ್ಸುಕತೆ ತೋರಿದ್ದರು. ಇವರನ್ನು ಜೂನ್ 28ರಂದು ಮಾಚಿಗೊಂಡನಹಳ್ಳಿ ಕೆರೆ ಸಮೀಪಕ್ಕೆ ಕರೆಸಿಕೊಂಡಿದ್ದ ಆರೋಪಿಗಳು ₹ 85 ಲಕ್ಷ ಪಡೆದು ನಕಲಿ ಚಿನ್ನದ ಬಿಲ್ಲೆಗಳನ್ನು ಕೈಗಿಟ್ಟು ಪರಾರಿಯಾಗಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಆರೋಪಿಗಳು ನೀಡಿದ ಬಿಲ್ಲೆಗಳು ನಕಲಿ ಎಂಬುದು ದೃಢವಾದ ಬಳಿಕ ಆತಂಕಗೊಂಡ ಶಿವಾನಂದಪ್ಪ ಅವರು ನ್ಯಾಮತಿ ಠಾಣೆಯ ಮೆಟ್ಟಿಲೇರಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್, ಪೊಲೀಸ್ ಇನ್ಸ್ಪೆಕ್ಟರ್ ಎಚ್.ಎಂ. ಸಿದ್ದೇಗೌಡ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿದ ತಂಡ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.