ಬಿತ್ತನೆ ಅವಧಿ ಮುಗಿಯುತ್ತಿದ್ದರೂ ಮಳೆ ಸುಳಿವಿಲ್ಲ...
ಮೊಳಕಾಲ್ಮುರು: ರಾಜ್ಯದಲ್ಲಿ ಅತೀ ಕಡಿಮೆ ಮಳೆ ಬೀಳುವ ಪ್ರದೇಶವಾಗಿ ಮೊಳಕಾಲ್ಮುರು ಗುರುತಿಸಿಕೊಂಡಿದೆ. ವಾರ್ಷಿಕ ಏಕಮಾತ್ರ ಮಳೆಯಾಶ್ರಿತ ಬೆಳೆ ಪದ್ಧತಿ ಇಲ್ಲಿ ಚಾಲ್ತಿಯಲ್ಲಿದ್ದು, ಈ ವರ್ಷ ಮಳೆ ಕೈಕೊಟ್ಟಿರುವ ಪರಿಣಾಮ ಅದಕ್ಕೂ ಹೊಡೆತ ಬೀಳುವ ಆತಂಕ ರೈತರದ್ದಾಗಿದೆ.ಮುಂಗಾರು ಪೂರ್ವ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಜೂನ್

ಮೊಳಕಾಲ್ಮುರು: ರಾಜ್ಯದಲ್ಲಿ ಅತೀ ಕಡಿಮೆ ಮಳೆ ಬೀಳುವ ಪ್ರದೇಶವಾಗಿ ಮೊಳಕಾಲ್ಮುರು ಗುರುತಿಸಿಕೊಂಡಿದೆ. ವಾರ್ಷಿಕ ಏಕಮಾತ್ರ ಮಳೆಯಾಶ್ರಿತ ಬೆಳೆ ಪದ್ಧತಿ ಇಲ್ಲಿ ಚಾಲ್ತಿಯಲ್ಲಿದ್ದು, ಈ ವರ್ಷ ಮಳೆ ಕೈಕೊಟ್ಟಿರುವ ಪರಿಣಾಮ ಅದಕ್ಕೂ ಹೊಡೆತ ಬೀಳುವ ಆತಂಕ ರೈತರದ್ದಾಗಿದೆ.ಮುಂಗಾರು ಪೂರ್ವ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಜೂನ್ ಆರಂಭದಲ್ಲಿ ಕಾಣೆಯಾದ ಮಳೆ ಜುಲೈ ಮಧ್ಯ ಭಾಗದಲ್ಲೂ ಕಾಣಿಸಿಕೊಳ್ಳದಿರುವುದು ಬಿತ್ತನೆ ಆಸೆ ಕಮರಿಸಿದೆ. ಶೇಂಗಾ ಇಲ್ಲಿನ ಪ್ರಮುಖ ಬೆಳೆಯಾಗಿದ್ದು, ಜುಲೈ ಕೊನೆಯವರೆಗೆ ತ್ತನೆಗೆ ಅವಕಾಶವಿದ್ದರೂ ಬಿತ್ತನೆಬೀಜ ದರ ತೀವ್ರ ಹೆಚ್ಚಳ ವಾಗಿರುವುದು ರೈತರ ಆಸಕ್ತಿಯನ್ನು ಕಸಿದುಕೊಳ್ಳುತ್ತಿದೆ.ತಾಲ್ಲೂಕಿನಲ್ಲಿ 32,000 ಹೆಕ್ಟೇರ್ ಕೃಷಿಭೂಮಿ ಇದೆ. ಇದರಲ್ಲಿ 20,000 ಹೆಕ್ಟೇರ್ನಲ್ಲಿ ಶೇಂಗಾ ಬಿತ್ತನೆ ಮಾಡಲಾಗುತ್ತದೆ. ನಂತರ ಸ್ಥಾನಗಳಲ್ಲಿ ತೊಗರಿ, ರಾಗಿ, ಮೆಕ್ಕೆಜೋಳ, ನೀರಾವರಿಯಲ್ಲಿ ಹತ್ತಿ, ಟೊಮೆಟೊ ಬಿತ್ತಲಾಗುತ್ತದೆ. ಮುಂಗಾರು ಪೂರ್ವ ಮಳೆಗೆ ಹತ್ತಿ, ತೊಗರಿ ನಾಟಿ ಹೆಚ್ಚು ಮಾಡಲಾಗಿದ್ದು, ಇವುಗಳು ಬಿಸಿಲಿನ ಝಳ ಮತ್ತು ಮಳೆ ಕೊರತೆಯಿಂದಾಗಿ ಬಾಡುತ್ತಿವೆ. 6,000 ಹೆಕ್ಟೇರ್ನಲ್ಲಿ ನಾಟಿಯಾಗಿರುವ ಹತ್ತಿಗೆ ಹಳದಿ ಎಲೆರೋಗ ಎದುರಾಗಿದ್ದು, ರೈತರು ನಷ್ಟದ ಆತಂಕದಲ್ಲಿದ್ದಾರೆ.‘ಮುಂಗಾರು ಅವಧಿಯಲ್ಲಿ ಇಲ್ಲಿವರೆಗೆ ಶೇ 5ರಷ್ಟು ಮಾತ್ರ ಬಿತ್ತನೆ ಗುರಿ ಸಾಧನೆಯಾಗಿದೆ. ಆಗಸ್ಟ್ ಮಧ್ಯಭಾಗದವರೆಗೆ ಬಿತ್ತನೆಗೆ ಅವಕಾಶವಿದೆ. ಹೆಚ್ಚು ತಡವಾದಲ್ಲಿ ಶೇಂಗಾ ಬದಲು ತೊಗರಿ, ರಾಗಿ ಬಿತ್ತನೆ ಮಾಡುವುದು ಸೂಕ್ತ. ಈ ಬಗ್ಗೆ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಭೂಮಿ ಸಿದ್ಧತೆ ಕಾರ್ಯ ಬಹುತೇಕ ಪೂರ್ಣವಾಗಿದೆ’ ಎಂದು ಕೃಷಿ ಅಧಿಕಾರಿ ಹೇಮಂತ್ ಹೇಳಿದರು.ಮೇವಿಗೂ ತೊಂದರೆ: ‘ಬಿಸಿಲಿನ ತೀವ್ರತೆ ಹೆಚ್ಚುತ್ತಿರುವುದರಿಂದ ಅರಣ್ಯ ಪ್ರದೇಶ, ಹೊಲಗಳ ಬದುವು, ಗೋಮಾಳದಲ್ಲಿ ಮೇವು ಒಣಗುತ್ತಿದೆ. ಇದರಿಂದ ಈ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತಿರುವ ಜಾನುವಾರು, ಕುರಿ– ಮೇಕೆ ಸಾಕಣೆಗೆ ಮೇವಿನ ಕೊರತೆ ಎದುರಾಗಿದೆ. ಕುರಿ ಮಂದೆಗಳನ್ನು ನೆರೆಯ ಆಂಧ್ರದ ಗ್ರಾಮಗಳಿಗೆ ಹೊಡೆದುಕೊಂಡು ಹೋಗಲಾಗುತ್ತಿದೆ. ಅಲ್ಲಿ ಹತ್ತಿ ಕಟಾವು ಆರಂಭವಾಗುತ್ತಿದ್ದು, ತುಸು ಹಣ ಕೊಟ್ಟು ಹೊಲಗಳಲ್ಲಿ ಕುರಿ ಮಂದೆ ಬಿಡಲಾಗುತ್ತಿದೆ ಎಂದು ಮಾರಮ್ಮನಹಳ್ಳಿಯ ಪಾಲನಾಯಕ ಹೇಳಿದರು.‘ತುಂಗಭದ್ರಾ ಹಿನ್ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಸ್ಥಳೀಯವಾಗಿ ಕೊಳವೆಬಾವಿಗಳು ಬತ್ತುತ್ತಿದ್ದು, ನೀರಿನ ಅಭಾವದ ಆತಂಕ ಆರಂಭವಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತ ವ್ಯವಸ್ಥೆ ಸರಿಯಿಲ್ಲ, ಉಸ್ತುವಾರಿ ಅಧಿಕಾರಿಗಳು ಯಾವಾಗಲೋ ಒಮ್ಮೆ ಬಂದು ಹೋಗುತ್ತಿದ್ದಾರೆ. ಜಿಲ್ಲಾಡಳಿತ ಗಮನಹರಿಸಿ ಕುಡಿಯುವ ನೀರು, ಮೇವಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು’ ಎಂದು ಬಿ.ಜಿ. ಕೆರೆಯ ನಾಗರಾಜ್ ಮನವಿ ಮಾಡಿದರು.ತುಂಗಭದ್ರಾ ಹಿನ್ನೀರು ಸ್ಥಗಿತದ ನಂತರ ಮೊಳಕಾಲ್ಮುರು ಪಟ್ಟಣಕ್ಕೆ ಮತ್ತೆ ರಂಗಯ್ಯನದುರ್ಗ ಜಲಾಶಯದ ನೀರನ್ನು ಹರಿಸುತ್ತಿದ್ದು, ಈ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ನಿತ್ಯದ ಬಳಕೆಗೆ ಮಾತ್ರ ಉಪಯೋಗಿಸಿ ಎಂದು ಪಟ್ಟಣ ಪಂಚಾಯಿತಿ ಆದೇಶಿಸಿದೆ. 10 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ ಎಂಬ ದೂರಿದೆ. ಪಟ್ಟಣ ಪಂಚಾಯಿತಿಗೆ ತಹಶೀಲ್ದಾರ್ ಆಡಳಿತಾಧಿಕಾರಿಯಾಗಿದ್ದು, ತಹಶೀಲ್ದಾರ್ ಹುದ್ದೆಯಲ್ಲೂ ಹಲವು ತಿಂಗಳುಗಳಿಂದ ಪ್ರಭಾರಿಯಾಗಿ ನಿರ್ವಹಣೆ ಆಗುತ್ತಿರುವುದು ಪರಿಣಾಮಕಾರಿ ಆಡಳಿತಕ್ಕೆ ಅಡ್ಡಿಯಾಗಿದೆ ಎಂಬ ದೂರು ವ್ಯಕ್ತವಾಗಿದೆ.-ಟಿ. ನಾಗವೇಣಿ, ಪ್ರಭಾರ ತಹಶೀಲ್ದಾರ್ತಾಲ್ಲೂಕಿನಲ್ಲಿ ಮಳೆ ಕೊರತೆಯಿದಾಗಿ ಬಿತ್ತನೆ ಪ್ರಮಾಣ ಕುಸಿತವಾಗಿದೆ, ಇದೇ ಸ್ಥಿತಿ ಮುಂದುವರಿದಲ್ಲಿ ಸರ್ಕಾರಕ್ಕೆ ವರದಿ ಮಾಡಿ ಬರ ಘೋಷಣೆಗೆ ಮನವಿ ಮಾಡಲಾಗುವುದು. ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260716-44-1894589760