ನುಡಿ ಬೆಳಗು: ಕೊಡುವವರ ಅಂತಃಕರಣ
ಪ್ರಖ್ಯಾತ ಬರಹಗಾರರಾಗಿದ್ದ ಮಾರ್ಕ್ ಟ್ವೈನ್ಗೆ ಒಮ್ಮೆ ತುರ್ತಾಗಿ ಹಣದ ಅಗತ್ಯ ಬಿದ್ದಿತು. ಅವರು ಬ್ಯಾಂಕೊಂದಕ್ಕೆ ಮ್ಯಾನೇಜರ್ನನ್ನು ಕಾಣಲು ಹೋದರು. ಮ್ಯಾನೇಜರ್ ಬ್ಯಾಂಕಿನ ಕೆಲಸ ಬಿಟ್ಟು ತನ್ನ ಕೆಲಸದಲ್ಲಿ ನಿರತನಾಗಿದ್ದ. ಎಲ್ಲರೂ ತನಗಿಂತ ಕೀಳು ಎಂದು ಅವನು ಭಾವಿಸಿದ್ದಾನೆ ಎನ್ನುವುದು ಗೊತ್ತಾಗುತ್ತಿತ್ತು. ಬಹುಸಮಯ ಕಾದ ಮಾರ್ಕ್ ಟ್ವೈನ್, ಕಡೆಗೆ ಅನಿವಾರ್ಯವಾಗಿ ತಮ

ಪ್ರಖ್ಯಾತ ಬರಹಗಾರರಾಗಿದ್ದ ಮಾರ್ಕ್ ಟ್ವೈನ್ಗೆ ಒಮ್ಮೆ ತುರ್ತಾಗಿ ಹಣದ ಅಗತ್ಯ ಬಿದ್ದಿತು. ಅವರು ಬ್ಯಾಂಕೊಂದಕ್ಕೆ ಮ್ಯಾನೇಜರ್ನನ್ನು ಕಾಣಲು ಹೋದರು. ಮ್ಯಾನೇಜರ್ ಬ್ಯಾಂಕಿನ ಕೆಲಸ ಬಿಟ್ಟು ತನ್ನ ಕೆಲಸದಲ್ಲಿ ನಿರತನಾಗಿದ್ದ. ಎಲ್ಲರೂ ತನಗಿಂತ ಕೀಳು ಎಂದು ಅವನು ಭಾವಿಸಿದ್ದಾನೆ ಎನ್ನುವುದು ಗೊತ್ತಾಗುತ್ತಿತ್ತು. ಬಹುಸಮಯ ಕಾದ ಮಾರ್ಕ್ ಟ್ವೈನ್, ಕಡೆಗೆ ಅನಿವಾರ್ಯವಾಗಿ ತಮ್ಮ ಪರಿಚಯ ಹೇಳಿಕೊಳ್ಳಬೇಕಾಯಿತು. ಮ್ಯಾನೇಜರ್ ವ್ಯಂಗ್ಯವಾಗಿ ‘ಓಹ್, ಪ್ರಖ್ಯಾತ ಬರಹಗಾರ, ಮನುಷ್ಯನ ಮನಸ್ಸನ್ನು ಅರಿಯಬಲ್ಲ ಮಹಾನ್ ಕಲಾವಿದ. ನಿಮಗೆ ಹಣದ ಅವಶ್ಯಕತೆಯೆ?’ ಎಂದ. ಮಾರ್ಕ್ ಟ್ವೈನ್ ಅವನನ್ನೇ ದಿಟ್ಟಿಸುತ್ತಾ, ‘ನಿಮ್ಮ ಎದುರು ಬಂದು ಕುಳಿತವರಿಗೆ ಒಬ್ಬೊಬ್ಬರಿಗೂ ಒಂದೊಂದು ಅಗತ್ಯವಿರುತ್ತದೆ. ನಮಗೂ ನಿತ್ಯದ ದಂದುಗವಿರುತ್ತದೆ. ಅಗತ್ಯವಿರುವ ಹಣಕ್ಕಾಗಿ ನಾವೂ ಬ್ಯಾಂಕಿಗೆ ಬರಲೇಬೇಕಲ್ಲವೇ?’ ಎಂದರು. ಮ್ಯಾನೇಜರ್ಗೆ ಸ್ವಲ್ಪ ಕುಚೇಷ್ಟೆ ಮಾಡಬೇಕು ಅನ್ನಿಸಿ, ‘ಯಾರು ಯಾರಿಗೋ ಹಣ ಕೊಡುತ್ತೇವೆ. ನಿಮಗೆ ಇಲ್ಲ ಎನ್ನುತ್ತೇನೆಯೇ? ನನ್ನದೂ ಒಂದು ಸಮಸ್ಯೆ ಇದೆ. ಅದನ್ನು ಬಿಡಿಸಿಕೊಡಿ. ಹಣದ ವ್ಯವಸ್ಥೆ ಮಾಡುತ್ತೇನೆ’ ಎಂದ.ಮಾರ್ಕ್ ಟ್ವೈನ್ ಮ್ಯಾನೇಜರ್ನ ಸ್ವಭಾವವನ್ನು ಅಳೆದುಬಿಟ್ಟಿದ್ದರು. ಇವನ ಕುಚೇಷ್ಟೆಗೆ ಕೊನೆ ಹಾಡಲೇಬೇಕೆಂದು ನಿರ್ಧರಿಸಿ ‘ಹೇಳಿ ಅದೇನು?’ ಎಂದರು. ಮ್ಯಾನೇಜರ್ ನಗುತ್ತಾ, ‘ಎಲ್ಲರೂ ಹೇಳುತ್ತಾರೆ ನನ್ನ ಕಣ್ಣಿನ ಹೊಳಪು ನಕ್ಷತ್ರವನ್ನೂ ಮೀರಿಸುತ್ತದೆ ಎಂದು. ಈಗ ಹೇಳಿ ನನ್ನ ಯಾವ ಕಣ್ಣಿಗೆ ಹೆಚ್ಚು ಹೊಳಪಿದೆ?’ ಎನ್ನುತ್ತಾನೆ. ಮಾರ್ಕ್ ಟ್ವೈನ್ ಅವನ ಕಣ್ಣುಗಳನ್ನು ದಿಟ್ಟಿಸಿದರು. ಹಿಂದಕ್ಕೆ ಒರಗಿ, ನಿಸೂರಾಗುತ್ತಾ, ‘ನಿಮ್ಮ ಎಡದ ಕಣ್ಣು’ ಎಂದರು. ಅವನು ಸ್ವಲ್ಪ ಅಸಮಾಧಾನದಿಂದ, ‘ಅದು ಹೇಗೆ ಸಾಧ್ಯ?’ ಎಂದ. ‘ನನಗೂ ಅದು ಗೊತ್ತಿಲ್ಲ. ಆದರೆ ನಿನ್ನ ಎಡಕಣ್ಣಿನಲ್ಲಿ ಬಲಕಣ್ಣಿಗಿಂತ ಕಿಂಚಿತ್ತಾದರೂ ಕರುಣೆಯ ಗೆರೆ ಕಾಣುತ್ತಿದೆ’ ಎನ್ನುತ್ತಾರೆಮಾರ್ಕ್ ಟ್ವೈನ್.ಮ್ಯಾನೇಜರ್ ಕೋಪದಿಂದ ‘ಏನು, ನೀವು ನನ್ನ ಕರುಣೆ ಇಲ್ಲದ ಮನುಷ್ಯ ಎಂದು ಹೇಳುವುದಾ? ನೀವು ನನ್ನಲ್ಲಿ ಕೊಡು ಎಂದು ಕೇಳಿ ಬಂದಿದ್ದೀರಿ ನೆನಪಿರಲಿ’ ಎಂದ. ‘ಮತ್ತಿನ್ನೇನು? ಅಸಹಾಯಕತೆಯಲ್ಲಿ ನಿಮ್ಮೆದುರು ಕುಳಿತ ಮನುಷ್ಯರನ್ನು ಸಲ್ಲದ ಪ್ರಶ್ನೆಗಳನ್ನು ಕೇಳುತ್ತಾ ಚೆಲ್ಲಾಟವಾಡುತ್ತಾ ಕುಳಿತುಕೊಳ್ಳುವುದನ್ನು ಏನೆಂದು ಕರೆಯಬಹುದು ನೀವೇ ಹೇಳಿ?’ ಎಂದರು ಮಾರ್ಕ್ ಟ್ವೈನ್.ಮ್ಯಾನೇಜರ್ಗೆ ತೀವ್ರವಾದ ಮುಖಭಂಗವಾಗುತ್ತದೆ. ಅಹಂ ಮನುಷ್ಯನನ್ನು ಪಶುವಾಗಿಸುತ್ತದೆ. ತನ್ನ ಬಗ್ಗೆ ಸತ್ಯವನ್ನು ಅರಗಿಸಿಕೊಳ್ಳಲಾಗದ ಆತ, ‘ನಾನು ಹಣ ಕೊಡಲ್ಲ ಏನು ಮಾಡುತ್ತೀರೋ ಮಾಡಿ’ ಎನ್ನುತ್ತಾನೆ. ‘ಏನು ಮಾಡುವುದು ಇನ್ನೊಂದು ಬ್ಯಾಂಕಿದೆ. ಅಲ್ಲಿಗೆ ಹೋಗುತ್ತೇನೆ. ನಿಮ್ಮಂಥ ದುರಹಂಕಾರಿ ಮನುಷ್ಯ ಅಲ್ಲಿರಲಿಕ್ಕಿಲ್ಲ ಎಂದುಕೊಳ್ಳುವೆ. ನನ್ನಂಥವ ನಿನ್ನ ಬಳಿ ಬಂದು ಕೇಳಿ ಇಲ್ಲ ಅನ್ನಿಸಿಕೊಂಡರೆ ನನಗೆ ನಷ್ಟವಿಲ್ಲ. ನಷ್ಟ ನಿಮಗೆ. ಲೋಕ ನೀವು ಸತ್ತ ಮೇಲೂ ನಿಮ್ಮನ್ನು ಇದೇ ಕಾರಣಕ್ಕೆ ನೆನೆಯುತ್ತದೆ ನೆನಪಿಟ್ಟುಕೊಳ್ಳಿ’ ಎನ್ನುತ್ತಾರೆ ಮಾರ್ಕ್ ಟ್ವೈನ್.ನಿಜ, ಯಾರೂ ಯಾರ ಬಳಿಯೂ ಸುಮ್ಮನೆ ಬರುವುದಿಲ್ಲ. ಕೊಡುವ ಅಧಿಕಾರದಲ್ಲಿರುವವರು ಸ್ವಲ್ಪ ಕರುಣೆ ಸಣ್ಣ ಅನುಕಂಪಗಳಿಂದ ಮನುಷ್ಯನನ್ನು ನೋಡಿದರೆ ಸಾಕು. ಅದಕ್ಕಿಂತ ಹೆಚ್ಚಿನದ್ದು ಏನೂ ಬೇಡ, ಅಲ್ಲವೇ?.