ಮಾಹಿತಿ ಹಕ್ಕು ಅಡಿ ದಾಖಲೆ ನಿರಾಕರಣೆ: ಗ್ರೇಡ್–2 ತಹಶೀಲ್ದಾರ್ಗೆ ₹5 ಸಾವಿರ ದಂಡ
ಕಲಬುರಗಿ: ರಾಯಚೂರು ತಾಲ್ಲೂಕಿನ ಇಬ್ರಾಹಿಂ ದೊಡ್ಡಿಯ ಅಂಜಿನಯ್ಯ ನಾಗಪ್ಪ ಅವರು ಮಾಹಿತಿ ಹಕ್ಕು ಅಡಿಯಲ್ಲಿ ಕೇಳಿದ ಜಮೀನಿನ ದಾಖಲೆಗಳನ್ನು ಕೊಡದ ಗ್ರೇಡ್–2 ತಹಶೀಲ್ದಾರ್ ಪರಶುರಾಮ ಅವರಿಗೆ ಮಾಹಿತಿ ಹಕ್ಕು ಆಯೋಗ ₹5 ಸಾವಿರ ದಂಡ ವಿಧಿಸಿದೆ.ಅರ್ಜಿದಾರರು ಕೇಳಿರುವ ಸಂಪೂರ್ಣ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮ–2005ರ ಕಲಂ 7(6)ರ ಅನ್ವಯ 10 ದಿನಗಳೊಳಗೆ ಉಚಿತವಾಗಿ ನೋಂ

ಕಲಬುರಗಿ: ರಾಯಚೂರು ತಾಲ್ಲೂಕಿನ ಇಬ್ರಾಹಿಂ ದೊಡ್ಡಿಯ ಅಂಜಿನಯ್ಯ ನಾಗಪ್ಪ ಅವರು ಮಾಹಿತಿ ಹಕ್ಕು ಅಡಿಯಲ್ಲಿ ಕೇಳಿದ ಜಮೀನಿನ ದಾಖಲೆಗಳನ್ನು ಕೊಡದ ಗ್ರೇಡ್–2 ತಹಶೀಲ್ದಾರ್ ಪರಶುರಾಮ ಅವರಿಗೆ ಮಾಹಿತಿ ಹಕ್ಕು ಆಯೋಗ ₹5 ಸಾವಿರ ದಂಡ ವಿಧಿಸಿದೆ.ಅರ್ಜಿದಾರರು ಕೇಳಿರುವ ಸಂಪೂರ್ಣ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮ–2005ರ ಕಲಂ 7(6)ರ ಅನ್ವಯ 10 ದಿನಗಳೊಳಗೆ ಉಚಿತವಾಗಿ ನೋಂದಾಯಿತ ಅಂಚೆ ಮೂಲಕ ಒದಗಿಸುವಂತೆ ಪರಶುರಾಮ ಅವರಿಗೆ ನಿರ್ದೇಶನ ನೀಡಿದೆ. ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಥಮ ಮೇಲ್ಮನವಿ ಪ್ರಾಧಿಕಾರಿ ಹಾಗೂ ತಹಶೀಲ್ದಾರ್ ಗ್ರೇಡ್–1 ಸುರೇಶ ವರ್ಮಾ ಅವರಿಗೆ ಆಯುಕ್ತ ಬಿ. ವೆಂಕಟಸಿಂಗ್ ಸೂಚಿಸಿದ್ದಾರೆ.ಮಾಹಿತಿ ನೀಡುವಲ್ಲಿ ವಿಳಂಬ ಹಾಗೂ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಪರಶುರಾಮ ಅವರಿಗೆ ವಿಧಿಸಿದ್ದ ₹5 ಸಾವಿರ ದಂಡವನ್ನು ಅವರ ವೇತನದಿಂದ ಕಡಿತಗೊಳಿಸಿ ಸರ್ಕಾರದ ನಿಗದಿತ ಖಾತೆಗೆ ಜಮಾ ಮಾಡಿ ರಶೀದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.ಅರ್ಜಿದಾರರಿಗೆ ಮಾಹಿತಿ ನೀಡಿರುವ ದಾಖಲೆಗಳು ಹಾಗೂ ಅಂಚೆ ಸ್ವೀಕೃತಿ ಪ್ರತಿಗಳೊಂದಿಗೆ ಮುಂದಿನ ವಿಚಾರಣೆಗೆ ಖುದ್ದಾಗಿ ಅಥವಾ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿ ಅನುಪಾಲನಾ ವರದಿ ಸಲ್ಲಿಸಬೇಕು. ಅರ್ಜಿದಾರರು ಮಾಹಿತಿ ಪಡೆದಿರುವ ಅಥವಾ ಪಡೆಯದೇ ಇರುವ ಬಗ್ಗೆ ಲಿಖಿತವಾಗಿ ಆಯೋಗಕ್ಕೆ ತಿಳಿಸಬೇಕು ಎಂದು ಸೂಚನೆ ನೀಡಿದ್ದಾರೆ.