ಚಿಕ್ಕಬಳ್ಳಾಪುರ: ಎರಡು ತಿಂಗಳಿನಿಂದ ‘ಸ್ಕಂದಗಿರಿ’ ಬಂದ್, ಚಾರಣಿಗರ ಬೇಸರ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರಸಿದ್ಧ ಚಾರಣ ತಾಣಗಳಲ್ಲಿ ಒಂದಾದ ತಾಲ್ಲೂಕಿನ ಸ್ಕಂದಗಿರಿಗೆ ಚಾರಣ ನಿಷೇಧಿಸಿ ಎರಡು ತಿಂಗಳಾಗಿದೆ. ಪ್ರವಾಸಿಗರು ಮತ್ತು ಚಾರಣಾಸಕ್ತರು ಮತ್ತೆ ಚಾರಣ ಯಾವಾಗ ಆರಂಭವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಎರಡನೇ ಬಾರಿ ಸಂದ್ಕಗಿರಿ ಚಾರಣ ಬಂದ್ ಆಗಿದೆ. ಸ್ಕಂದಗಿರಿಯ ಚಾರಣದ ಹಾದಿ ಬಂದ್ ಆಗಿರುವುದು ಚಿಕ್ಕಬಳ್ಳ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರಸಿದ್ಧ ಚಾರಣ ತಾಣಗಳಲ್ಲಿ ಒಂದಾದ ತಾಲ್ಲೂಕಿನ ಸ್ಕಂದಗಿರಿಗೆ ಚಾರಣ ನಿಷೇಧಿಸಿ ಎರಡು ತಿಂಗಳಾಗಿದೆ. ಪ್ರವಾಸಿಗರು ಮತ್ತು ಚಾರಣಾಸಕ್ತರು ಮತ್ತೆ ಚಾರಣ ಯಾವಾಗ ಆರಂಭವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಎರಡನೇ ಬಾರಿ ಸಂದ್ಕಗಿರಿ ಚಾರಣ ಬಂದ್ ಆಗಿದೆ. ಸ್ಕಂದಗಿರಿಯ ಚಾರಣದ ಹಾದಿ ಬಂದ್ ಆಗಿರುವುದು ಚಿಕ್ಕಬಳ್ಳಾಪುರದ ಪ್ರವಾಸೋದ್ಯಮದ ಕಲರವವನ್ನು ಸ್ವಲ್ಪಮಟ್ಟಿಗೆ ತಗ್ಗಿಸಿದೆ. ವಿಶೇಷವಾಗಿ ಶನಿವಾರ ಮತ್ತು ಭಾನುವಾರದ ವಾರಾಂತ್ಯದ ದಿನಗಳಲ್ಲಿ ಸ್ಕಂದಗಿರಿ ಹಾದಿಯಲ್ಲಿ ಬೈಕ್ ಮತ್ತು ಕಾರುಗಳ ಸಂಖ್ಯೆ ಹೆಚ್ಚುತ್ತಿತ್ತು. ಬೆಳ್ಳಂ ಬೆಳಗ್ಗೆಯೇ ಚಾರಣಿಗರು ಗಿರಿ ಪ್ರವೇಶಿಸುತ್ತಿದ್ದರು. ಈ ವಾರಾಂತ್ಯದ ಪ್ರವಾಸಕ್ಕೆ ಎರಡು ಮೂರು ವಾರಗಳ ಮುನ್ನವೇ ಟಿಕೆಟ್ ಕಾಯ್ದಿರಿಸುತ್ತಿದ್ದರು.ಬೆಂಗಳೂರಿನ ಚಾರಣ ಸಂಸ್ಥೆಗಳು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಕರೆ ತರುತ್ತಿದ್ದವು. ಚಿಕ್ಕಬಳ್ಳಾಪುರದ ಪ್ರವಾಸೋದ್ಯಮದಲ್ಲಿ ಸ್ಕಂದಗಿರಿಯು ಮುಕುಟ ಮಣಿ ಎನಿಸಿದೆ. ಇಂತಹ ಸ್ಥಳವೀಗ ಚಾರಣಿಗರ ಕಲರವ ಇಲ್ಲದೆ ಬಿಕೊ ಎನ್ನುತ್ತಿದೆ.ಚಾಮರಾಜನಗರ ಜಿಲ್ಲೆಯ ನಾಗಮಲೆ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿಯಿಂದ ಹತ್ತು ವರ್ಷದ ಬಾಲಕ ಮೃತಪಟ್ಟ ಘಟನೆ ನಂತರ ರಾಜ್ಯದಲ್ಲಿ ವನ್ಯಜೀವಿ ಸಂಚಾರ ಇರುವ ಎಲ್ಲ ಚಾರಣ ಪಥ ಮತ್ತು ಸಂಚಾರ ಪಥಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅರಣ್ಯ ಇಲಾಖೆ ಆದೇಶಿಸಿತು.‘ಚಿರತೆ, ಹುಲಿ, ಆನೆ ಮತ್ತು ಕರಡಿಯಂತಹ ಕಾಡುಪ್ರಾಣಿಗಳ ಸಂಚಾರ ಇರುವೆಡೆ ಮಾನವ–ವನ್ಯಜೀವಿ ಸಂಘರ್ಷ ತಪ್ಪಿಸಬೇಕಿದೆ. ಹೀಗಾಗಿ ತಕ್ಷಣವೇ ಚಾರಣ ಪಥ ಮತ್ತು ಸಂಚಾರ ಪಥಗಳನ್ನು ಸ್ಥಗಿತಗೊಳಿಸಿ’ ಎಂದು ರಾಜ್ಯದ ಎಲ್ಲ ವನ್ಯಜೀವಿ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸರ್ಕಾರ ಸೂಚಿಸಿತ್ತು. ಚಾರಣ ಪಥಗಳಲ್ಲಿ ಚಾರಣಿಗರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಜಾರಿಗೆ ಸರ್ಕಾರ ನಿರ್ಧರಿಸಿತ್ತು.ಸ್ಕಂದಗಿರಿ ಜೊತೆಗೆ ಚಿಂತಾಮಣಿ ತಾಲ್ಲೂಕಿನ ಕೈವಾರ ಬೆಟ್ಟವೂ ಚಾರಣಪಥವಾಗಿದೆ. ಇದಕ್ಕೂ ಪ್ರವೇಶ ನಿರ್ಬಂಧಿಸಲಾಗಿದೆ.ಈಗ ಎಸ್ಒಪಿ ಸಹ ಸಿದ್ಧವಾಗಿದೆ. ಆದರೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಕೈಗೊಳ್ಳಲು ಮುಂದಾಗಿದೆ. ಚಾರಣಿಗರ ಸುರಕ್ಷೆಯ ದೃಷ್ಟಿಯಿಂದ ಕೆಲವು ಪರಿಕರಗಳು ಅಗತ್ಯವಿದೆ. ಆದ್ದರಿಂದ ಆ ಸೌಲಭ್ಯಗಳನ್ನು ಕಲ್ಪಿಸುವವರೆಗೆ ಸ್ಕಂದಗಿರಿ ಮತ್ತು ಕೈವಾರ ಬೆಟ್ಟ ಚಾರಣಕ್ಕೆ ಅವಕಾಶವಿಲ್ಲ.ಚಾರಣಿಗರ ಬೇಸರ: ರಾಜ್ಯದ ಪ್ರಮುಖ ಚಾರಣ ಸ್ಥಳವಾಗಿರುವ ಸ್ಕಂದಗಿರಿಗೆ ಚಾರಣಕ್ಕೆ ಎರಡು ತಿಂಗಳಾದರೂ ಅವಕಾಶ ನೀಡದಿರುವುದಕ್ಕೆ ಚಾರಣಿಗರು ಮತ್ತು ಪ್ರವಾಸಿಗರು ಬೇಸರ ವ್ಯಕ್ತಪಡಿಸುವರು. ಸ್ಕಂದಗಿರಿಗೆ ಮುಂಗಡವಾಗಿ ಟಿಕೆಟ್ ಕಾಯ್ದಿರಿ ಚಾರಣ ನಡೆಸಬೇಕು. ನಿತ್ಯ 150 ಟಿಕೆಟ್ಗಳ ಮಾರಾಟಕ್ಕೆ ಅವಕಾಶವಿದೆ.ನಂದಿಗೆ ಹೆಚ್ಚಿದ ಪ್ರವಾಸಿಗರು: ವಿಶೇಷವಾಗಿ ಬೆಂಗಳೂರಿಗರು ಹೆಚ್ಚಿನ ಸಂಖ್ಯೆಯಲ್ಲಿ ಸ್ಕಂದಗಿರಿಗೆ ಚಾರಣಕ್ಕೆ ಬರುವರು. ಎರಡು ತಿಂಗಳಿನಿಂದ ಸ್ಕಂದಗಿರಿ ಪ್ರವೇಶ ಸಾಧ್ಯವಿಲ್ಲದ ಕಾರಣ ಈಗ ನಂದಿಗಿರಿಧಾಮಕ್ಕೆ ಹೆಚ್ಚು ಜನರು ಚಾರಣ ನಡೆಸುತ್ತಿದ್ದಾರೆ.‘ಸ್ಕಂದಗಿರಿಗೆ ಚಾರಣ ನಡೆಸಬೇಕು ಎಂದುಕೊಂಡಿದ್ದೆವು. ಆದರೆ ಅಲ್ಲಿ ಬಂದ್ ಆಗಿರುವ ವಿಚಾರ ತಿಳಿಯಿತು. ನಂದಿ ಗಿರಿಧಾಮಕ್ಕೆ ಬಂದಿದ್ದೇವೆ’ ಎಂದು ಬೆಂಗಳೂರಿನ ಅವಿನಾಶ್ ತಿಳಿಸಿದರು.ನಂದಿಗಿರಿಧಾಮಕ್ಕೆ ಸುಲ್ತಾನ್ ಪೇಟೆ ಮಾರ್ಗದಲ್ಲಿನ ಮೆಟ್ಟಿಲುಗಳ ಮೂಲಕ ಸಾಗಬೇಕು. ಶನಿವಾರ ಮತ್ತು ಭಾನುವಾರ ಇಲ್ಲಿ ಕಾರು ಬೈಕ್ಗಳನ್ನು ನಿಲ್ಲಿಸಿ ಬೆಟ್ಟ ಹತ್ತಲು ದೊಡ್ಡ ಸಂಖ್ಯೆಯಲ್ಲಿ ಜನರು ಮುಂದಾಗುತ್ತಿದ್ದಾರೆ.ಹಗರಣದಿಂದ ಬಂದ್ ಆಗಿತ್ತು ಪ್ರವೇಶ: 2024ರಲ್ಲಿ ಟಿಕೆಟ್ ಕಾಯ್ದಿರಿಸುವ ವಿಚಾರವಾಗಿ ನಡೆದ ಹಗರಣದಿಂದ ಸುಮಾರು ಮೂರು ತಿಂಗಳು ಸ್ಕಂದಗಿರಿ ಪ್ರವೇಶ ನಿಷೇಧಿಸಲಾಗಿತ್ತು.ಈ ಮೊದಲು ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸ್ಕಂದಗಿರಿಯ ನಿರ್ವಹಣೆಯ ಹೊಣೆ ಹೊತ್ತಿತ್ತು. ಟಿಕೆಟ್ ಬುಕ್ಕಿಂಗ್ನಲ್ಲಿ ಅಕ್ರಮ ನಡೆಯುತ್ತಿವೆ. ಕಾಯ್ದಿರಿಸದಿದ್ದರೂ ಅಕ್ರಮವಾಗಿ ಪ್ರವೇಶ ನೀಡಲಾಗುತ್ತಿದೆ. ಚಾರಣ ಸಂಸ್ಥೆಗಳು ಅವ್ಯವಹಾರದಲ್ಲಿ ಶಾಮೀಲಾಗಿವೆ– ಎನ್ನುವ ಗುರುತರ ಆರೋಪಗಳ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ತನಿಖೆಗೆ ಆದೇಶಿಸಿದ್ದರು.ಸ್ಕಂದಗಿರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಿಬ್ಬಂದಿಯನ್ನು ಕೆಲಸದಿಂದ ಕೈ ಬಿಡಲಾಯಿತು. ತನಿಖೆ ನಡೆಸಿ ವರದಿ ನೀಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಐವರು ಅಧಿಕಾರಿಗಳ ಸಮಿತಿ ಸಹ ರಚಿಸಿದ್ದರು. ಆ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಹ ಕಲೆ ಹಾಕಿತ್ತು. ನಂತರ ಸ್ಕಂದಗಿರಿ ಮತ್ತು ಕೈವಾರ ಬೆಟ್ಟದ ಟಿಕೆಟ್ ಬುಕ್ಕಿಂಗ್ ಉಸ್ತುವಾರಿಯನ್ನು ಮತ್ತು ಈ ತಾಣಗಳ ನಿರ್ವಹಣೆಯನ್ನು ಅರಣ್ಯ ಇಲಾಖೆಗೆ ವಹಿಸಲಾಯಿತು.ಆಗಸ್ಟ್ನಲ್ಲಿ ಚಾರಣ ಪುನರಾರಂಭಆಗಸ್ಟ್ನಲ್ಲಿ ಸ್ಕಂದಗಿರಿಗೆ ಚಾರಣ ಪುನರಾರಂಭವಾಗಲಿದೆ. ಚಾರಣಿಗರ ಸುರಕ್ಷೆ ದೃಷ್ಟಿಯಿಂದ ಕೆಲ ಸೌಲಭ್ಯಗಳು ಮತ್ತು ಸಲಕರಣೆಗಳು ಅಗತ್ಯವಿದೆ. ಇದಕ್ಕೆ ಸುಮಾರು ₹ 4 ಲಕ್ಷ ಅಗತ್ಯವಿದೆ. ಈ ಹಣ ಬಿಡುಗಡೆಗೆ ಇಲಾಖೆಗೆ ಮನವಿ ಮಾಡಿದ್ದೇವೆ. ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿ ಚಾರಣ ಪುನರಾರಂಭಿಸಲಾಗುವುದು ಎಂದು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಟಾರ್ಚ್ಗಳು, ವಾಕಿಟಾಕಿ, ಜಿಪಿಎಸ್ ಡಿವೈಸ್, ಒಂದು ವೇಳೆ ಅವಘಡ ಸಂಭವಿಸಿದರೆ ಚಾರಣಿಗರನ್ನು ಕರೆ ತರಲು ಸ್ಟ್ರೆಚ್ಚರ್ ಅಗತ್ಯವಿದೆ. ಇವುಗಳಿಗೆ ₹ 4 ಲಕ್ಷ ಅನುದಾನ ಬೇಕಿದೆ ಎಂದರು.ಚಾರಣಕ್ಕೂ ಮುನ್ನ ಚಾರಣಿಗರು ಸ್ವಯಂ ದೃಢೀಕರಣಕ್ಕೆ ಒಪ್ಪಿಗೆ ನೀಡಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆಗಸ್ಟ್ನಲ್ಲಿ ಚಾರಣಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260716-16-1889414197