ಲಕ್ಷ್ಮೇಶ್ವರ: ವಿಷದ ಬಾಟಲಿಯೊಂದಿಗೆ ಹೆಸ್ಕಾಂಗೆ ಮುತ್ತಿಗೆ
ಲಕ್ಷ್ಮೇಶ್ವರ: ದಿನದಲ್ಲಿ ಏಳು ತಾಸು ನಿರಂತರವಾಗಿ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ಹೆಸ್ಕಾಂ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಘೋಷಣೆ ಕೂಗಿ ಗುರುವಾರ ಲಕ್ಷ್ಮೇಶ್ವರ, ಹರದಗಟ್ಟಿ ಗ್ರಾಮದ ಹತ್ತಾರು ರೈತರು ಇಲ್ಲಿನ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಮುಂಗಾರು ಮಳೆ ಕೈಕೊಟ್ಟ ಕಾರಣ ತೇವಾಂಶದ ಕೊರತೆ ಉಂಟಾಗಿ

ಲಕ್ಷ್ಮೇಶ್ವರ: ದಿನದಲ್ಲಿ ಏಳು ತಾಸು ನಿರಂತರವಾಗಿ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ಹೆಸ್ಕಾಂ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಘೋಷಣೆ ಕೂಗಿ ಗುರುವಾರ ಲಕ್ಷ್ಮೇಶ್ವರ, ಹರದಗಟ್ಟಿ ಗ್ರಾಮದ ಹತ್ತಾರು ರೈತರು ಇಲ್ಲಿನ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಮುಂಗಾರು ಮಳೆ ಕೈಕೊಟ್ಟ ಕಾರಣ ತೇವಾಂಶದ ಕೊರತೆ ಉಂಟಾಗಿ ಮುಂಗಾರು ಹಂಗಾಮಿನ ಬೆಳೆಗಳು ಒಣಗುತ್ತಿವೆ. ಬೆಳೆಗಳನ್ನು ಉಳಿಸಿಕೊಳ್ಳಲು ನೀರು ಹರಿಸಲು ಹೆಸ್ಕಾಂ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ ಎಂದು ರೈತರು ಆರೋಪಿಸಿದರು.ಒಣಗಿದ ಗೋವಿನಜೋಳದ ಗಿಡಗಳನ್ನು ಕೈಯಲ್ಲಿ ಹಿಡಿದು ತಮ್ಮ ಸಿಟ್ಟು ಹೊರ ಹಾಕಿದರು.ವಿದ್ಯುತ್ ನೀಡುವುದಾಗಿ ಅಧಿಕಾರಿಗಳು ಹೇಳಿದರೂ ರೈತರು ಹೊಲಕ್ಕೆ ತೆರಳಿದ ಬಳಿಕ ವಿದ್ಯುತ್ ಪೂರೈಕೆ ಮಾಡದೇ ರೈತರೊಂದಿಗೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ ಎಂದು ಆರೋಪಿಸಿದರು.ಬೆಳೆ ಉಳಿಸಿಕೊಳ್ಳಲು ಕೊಳವೆ ಬಾವಿಗಳ ನೀರೇ ಆಧಾರವಾಗಿದೆ. ಆದರೆ ಹೆಸ್ಕಾಂನವರು ವಿದ್ಯುತ್ ಕೊರತೆಯ ನೆಪ ಹೇಳಿ ರೈತರೊಂದಿಗೆ ಆಟವಾಡುತ್ತಿದ್ದಾರೆ. ರೈತರು ಈಗ ಬೆಳೆ ನಷ್ಟದ ಆತಂಕದಲ್ಲಿ ಇದ್ದಾರೆ. ಸಮರ್ಪಕ ವಿದ್ಯುತ್ ಪೂರೈಕೆ ಆಗದಿದ್ದರೆ ಸಂಕಷ್ಟ ತಪ್ಪಿದ್ದಲ್ಲ. ಪ್ರತಿದಿನ ಕನಿಷ್ಠ 7 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲವಾದರೆ ಹೆಸ್ಕಾಂ ಕಚೇರಿಗೆ ಬೀಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.ಸೋಮವಾರದ ಒಳಗಾಗಿ ಸಮಸ್ಯೆ ಪರಿಹರಿಸದಿದ್ದರೆ ತಾಲ್ಲೂಕಿನ ರೈತರೊಂದಿಗೆ ಸತ್ಯಾಗ್ರಹ ನಡೆಸಲಾಗುವುದು’ ಎಂದು ಹೇಳಿದರು.ಸುರೇಶ ಮಾಳಗಿಮನಿ, ಸುರೇಶ ನಾಯಕ, ದೇವಪ್ಪ ಲಮಾಣಿ, ಬಸವರಾಜ ಲಮಾಣಿ, ಶಿವಪ್ಪ ಲಮಾಣಿ, ಶೇಖಪ್ಪ ಮಾಳಗಿಮನಿ, ವಿನೋದ ಮಾಳಗಿಮನಿ, ರವಿ ಲಮಾಣಿ, ರಾಮಪ್ಪ ಲಮಾಣಿ, ಲೋಕೇಶ ಸುತಾರ, ಬಸವರಾಜ ಹೊಗೆಸೊಪ್ಪಿನ, ರಾಜು ಮಾಳಗಿಮನಿ, ಮಾಂತೇಶ ಲಮಾಣಿ, ಲಕ್ಷ್ಮಣ ಲಮಾಣಿ, ಶಿವು ಲಮಾಣಿ, ಇಮಾಮ್ಹುಸೇನ್ ದೊಡ್ಡಮನಿ, ಸಿದ್ದು ಗಾಂಜಿ, ಸೋಮು ಉಮಚಗಿ ಮತ್ತಿತರರು ಇದ್ದರು.