ಸಚಿವ ಸಂಪುಟ : ಇದೇ 20ಕ್ಕೆ ಮತ್ತೆ ಚರ್ಚೆ
ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲಭ್ಯರಿಲ್ಲದ ಕಾರಣ, ಹೈಕಮಾಂಡ್ ಅಂಗಳದಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆ ಅಪೂರ್ಣಗೊಂಡಿದೆ. ಇದೇ 20ರ ಸೋಮವಾರ ಮತ್ತೊಮ್ಮೆ ಸಭೆ ಸೇರಿ, ಸಂಪುಟಕ್ಕೆ ಸೇರ್ಪಡೆಯಾಗುವವರ ಯಾದಿಯನ್ನು ಆಖೈರುಗೊಳಿಸುವ ಸಂಭವ ಇದೆ. ಹೈಕಮಾಂಡ್ ಬುಲಾವ್ ನೀಡಿದ್ದರಿಂದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕು

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲಭ್ಯರಿಲ್ಲದ ಕಾರಣ, ಹೈಕಮಾಂಡ್ ಅಂಗಳದಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆ ಅಪೂರ್ಣಗೊಂಡಿದೆ. ಇದೇ 20ರ ಸೋಮವಾರ ಮತ್ತೊಮ್ಮೆ ಸಭೆ ಸೇರಿ, ಸಂಪುಟಕ್ಕೆ ಸೇರ್ಪಡೆಯಾಗುವವರ ಯಾದಿಯನ್ನು ಆಖೈರುಗೊಳಿಸುವ ಸಂಭವ ಇದೆ. ಹೈಕಮಾಂಡ್ ಬುಲಾವ್ ನೀಡಿದ್ದರಿಂದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಇಲ್ಲಿಗೆ ದೌಡಾಯಿಸಿದ್ದರು. ಸಂಭಾವ್ಯ ಸಚಿವರ ಪಟ್ಟಿಗೆ ಅಂತಿಮ ರೂಪ ನೀಡಲು ಮುಹೂರ್ತ ನಿಗದಿಯಾಗಿತ್ತು. ಈ ನಡುವೆ, ಮಗನ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಖರ್ಗೆ ಅವರು ದಿಢೀರನೆ ಬೆಂಗಳೂರಿಗೆ ಧಾವಿಸಿದರು. ಹೀಗಾಗಿ, ವರಿಷ್ಠರು ರಾಜ್ಯ ನಾಯಕರ ಜತೆಗೆ ಪ್ರಾಥಮಿಕ ಹಂತದ ಚರ್ಚೆಯನ್ನಷ್ಟೇ ನಡೆಸಿದರು.ಖರ್ಗೆ ಅವರು ಶನಿವಾರ ವಾಪಸ್ ಬರಲಿದ್ದು, ಸೋಮವಾರ ನವದೆಹಲಿಗೆ ಬರುವಂತೆ ರಾಜ್ಯ ನಾಯಕರಿಗೆ ಸಂದೇಶ ರವಾನೆಯಾಗಲಿದೆ. ಅಂದು ಮತ್ತೊಂದು ಸುತ್ತಿನ ಸಭೆ ನಡೆಸಿ ಸಚಿವರ ಪಟ್ಟಿಗೆ ಅಂತಿಮ ರೂಪ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಸಂಪುಟ ಸೇರಿಸಬೇಕಾದ ತಮ್ಮ ಆಪ್ತರ ಪಟ್ಟಿ ನೀಡಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಂತರ ಸಭೆ ನಡೆಯಿತು. ಈ ಸಭೆಯಲ್ಲಿ ಶಿವಕುಮಾರ್, ಸಿದ್ದರಾಮಯ್ಯ, ಸುರ್ಜೆವಾಲಾ ಹಾಗೂ ಹರಿಪ್ರಸಾದ್ ಭಾಗಿಯಾದರು. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಜತೆಗೆ ರಾಹುಲ್ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.ವೇಣುಗೋಪಾಲ್ ಮತ್ತು ಸುರ್ಜೆವಾಲಾ ಅವರು ರಾಜ್ಯದ ನಾಯಕರೊಂದಿಗೆ ರಾತ್ರಿ ಮತ್ತೊಂದು ಸುತ್ತಿನ ಸಭೆ ನಡೆಸಿ ಅಭಿಪ್ರಾಯಗಳನ್ನು ಪಡೆದರು. ಈ ನಡುವೆ, ಸಚಿವ ಸ್ಥಾನದ ಆಕಾಂಕ್ಷಿಗಳು ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದರು. 40ಕ್ಕೂ ಅಧಿಕ ಶಾಸಕರು ನಾಲ್ಕೈದು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಬೀಡುಬಿಟ್ಟು ವರಿಷ್ಠರ ಮನವೊಲಿಕೆಗೆ ನಾನಾ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಹೊಸಬರಿಗೆ ಅವಕಾಶ ಅನುಮಾನ: ಮೊದಲ ಹಾಗೂ ಎರಡನೇ ಬಾರಿಗೆ ಶಾಸಕರಾದವರನ್ನು ಸಂಪುಟ ವಿಸ್ತರಣೆ ವೇಳೆ ಪರಿಗಣಿಸುವುದಿಲ್ಲ ಎಂದು ಹೈಕಮಾಂಡ್ ನಾಯಕರು ಸ್ಪಷ್ಟಪಡಿಸಿದ್ದಾರೆ.‘ಈ ಸಲ ಹೊಸಬರನ್ನು ಪರಿಗಣಿಸುವ ಪ್ರಶ್ನೆಯೇ ಇಲ್ಲ. ಮೂರಕ್ಕಿಂತ ಹೆಚ್ಚು ಬಾರಿ ಶಾಸಕರಾದ 50ಕ್ಕೂ ಅಧಿಕ ಮಂದಿ ಇದ್ದಾರೆ. ಅವರಿಗೆ ಆದ್ಯತೆ ನೀಡಬೇಕು. ಇಲ್ಲಿಗೆ ಬಂದು ಪದೇ ಪದೇ ಒತ್ತಡ ಹೇರಬೇಡಿ’ ಎಂದು ಉಭಯ ನಾಯಕರು ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಲಕ್ಷ್ಮಣ ಸವದಿ ಶಾಸಕಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಪಕ್ಷಕ್ಕೆ ಸೇರ್ಪಡೆಯಾದ ಸಂದರ್ಭದಲ್ಲಿ ನೀಡಿರುವ ವಾಗ್ದಾನವನ್ನು ನೆನಪಿಸಲು ಹೋಗಿಲ್ಲ.ವಿಜಯಾನಂದ ಕಾಶಪ್ಪನವರ ಶಾಸಕಪಂಚಮಸಾಲಿ ಕೋಟಾದಲ್ಲಿ ಅವಕಾಶ ನೀಡುವಂತೆ ಹೈಕಮಾಂಡ್ ನಾಯಕರಲ್ಲಿ ಕೇಳಿಕೊಂಡಿದ್ದೇನೆ. ಈ ಸಲವಾದರೂ ಪರಿಗಣಿಸುತ್ತಾರೆ ಎಂಬ ವಿಶ್ವಾಸ ಇದೆ.ಬಿ.ಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷನಾನು ಯಾವುದೇ ಪಟ್ಟಿ ತಂದಿಲ್ಲ. ಪಕ್ಷದ ಅಧ್ಯಕ್ಷನಾಗಿ ನನಗೆ ಎಲ್ಲರೂ ಸಮಾನರು. ನಾನು ಯಾರ ಪರವಾಗಿಯೂ ಲಾಬಿ ಮಾಡುವುದಿಲ್ಲ.60:40 ಇದು ಹೈಕಮಾಂಡ್ ಸೂತ್ರಸಂಪುಟ ವಿಸ್ತರಣೆ ವೇಳೆ 60:40 ಸೂತ್ರ ಅನುಸರಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ. ‘ಖಾಲಿ ಇರುವ ಸಚಿವ ಸ್ಥಾನಗಳ ಪೈಕಿ ಈ ಹಿಂದಿನ ಸರ್ಕಾರಗಳಲ್ಲಿ ಸಚಿವರಾಗಿದ್ದವರಿಗೆ ಶೇ 60ರಷ್ಟು ಹಾಗೂ ಮೂರು–ನಾಲ್ಕು ಬಾರಿ ಗೆದ್ದರೂ ಸಚಿವರಾಗಿಲ್ಲದೇ ಇರುವವರಿಗೆ ಶೇ 40ರಷ್ಟು ಸ್ಥಾನಗಳನ್ನು ಹಂಚಿಕೆ ಮಾಡಲು ಹೈಕಮಾಂಡ್ ಯೋಜಿಸಿದೆ. ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಪ್ರಾಥಮಿಕ ಹಂತದ ಚರ್ಚೆಗಳು ನಡೆದಿವೆ’ ಎಂದು ಮೂಲಗಳು ತಿಳಿಸಿವೆ. ಶಿವಕುಮಾರ್ ಜತೆಗೆ 13 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರಲ್ಲಿ ಯು.ಟಿ.ಖಾದರ್ ಹಾಗೂ ಯತೀಂದ್ರ ಸಿದ್ದರಾಮಯ್ಯ ಬಿಟ್ಟು ಉಳಿದವರೆಲ್ಲ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು.