ಪುರಿ ರಥಯಾತ್ರೆಯಲ್ಲಿ ನೂಕುನುಗ್ಗಲು: ಇಬ್ಬರ ಸಾವು
ಪುರಿ (ಪಿಟಿಐ): ಒಡಿಶಾದ ಪುರಿಯಲ್ಲಿ ಗುರುವಾರ ನಡೆದ ವಾರ್ಷಿಕ ರಥಯಾತ್ರೆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಜನಸಂದಣಿ ಹೆಚ್ಚಾದಾಗ ಉಂಟಾದ ನೂಕುನುಗ್ಗಲಿನಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಅಸ್ವಸ್ಥರಾಗಿದ್ದಾರೆ.‘ರಥಯಾತ್ರೆ ವೇಳೆ ಅಸ್ವಸ್ಥಗೊಂಡ ಹಲವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು’ ಎಂದು ಮುಖ್ಯಮಂತ್ರಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.‘ಅವರ ಪೈಕಿ, 6

ಪುರಿ (ಪಿಟಿಐ): ಒಡಿಶಾದ ಪುರಿಯಲ್ಲಿ ಗುರುವಾರ ನಡೆದ ವಾರ್ಷಿಕ ರಥಯಾತ್ರೆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಜನಸಂದಣಿ ಹೆಚ್ಚಾದಾಗ ಉಂಟಾದ ನೂಕುನುಗ್ಗಲಿನಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಅಸ್ವಸ್ಥರಾಗಿದ್ದಾರೆ.‘ರಥಯಾತ್ರೆ ವೇಳೆ ಅಸ್ವಸ್ಥಗೊಂಡ ಹಲವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು’ ಎಂದು ಮುಖ್ಯಮಂತ್ರಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.‘ಅವರ ಪೈಕಿ, 60 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸಾವಿಗೆ ನಿಖರವಾದ ಕಾರಣವನ್ನು ಸಂಬಂಧಪಟ್ಟ ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ’ ಎಂದು ಹೇಳಿದೆ.‘ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಸುಮಾರು 35 ವರ್ಷದ ಭಕ್ತರೊಬ್ಬರು ಹೃದಯಸ್ತಂಭನಕ್ಕೆ ಒಳಗಾದರು. ತಕ್ಷಣಚಿಕಿತ್ಸೆ ನೀಡಿದರೂ ಅವರು ಬದುಕುಳಿಯಲಿಲ್ಲ’ ಎಂದಿದೆ. ನೂಕುನುಗ್ಗಲಿನಲ್ಲಿಮೃತಪಟ್ಟವರು ಮತ್ತು ಗಾಯಗೊಂಡ ವರ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ.ರಥಯಾತ್ರೆ ಅಂಗವಾಗಿ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವರ ರಥಗಳನ್ನು ಎಳೆಯಲು ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಗುಂಡೀಚಾ ದೇವಾಲಯದ ಕಡೆಗೆ ರಥಗಳು ಸಾಗುವ ‘ಗ್ರ್ಯಾಂಡ್ ರೋಡ್’ನಲ್ಲಿ ಭಾರಿ ದಟ್ಟಣೆ ಕಂಡುಬಂತು ಎಂದು ಅಗ್ನಿಶಾಮಕ ಸೇವೆಗಳ ಇನ್ಸ್ಪೆಕ್ಟರ್ ಜನರಲ್ →ಉಮಾಶಂಕರ್ ದಾಸ್ ತಿಳಿಸಿದ್ದಾರೆ.ಮಳೆಯಲ್ಲೂ ಕುಗ್ಗದ ಉತ್ಸಾಹಪುರಿ ಜಗನ್ನಾಥ ಮತ್ತು ಅವರ ಇಬ್ಬರು ಒಡಹುಟ್ಟಿದವರ ವಾರ್ಷಿಕ ರಥಯಾತ್ರೆಗೆ ಗುರುವಾರ ಲಕ್ಷಾಂತರ ಮಂದಿ ಸಾಕ್ಷಿಯಾದರು. ಪುರಿಯಲ್ಲಿ ಬುಧವಾರ 14.3 ಸೆಂ.ಮೀ ಮಳೆಯಾಗಿದ್ದು, ಹವಾಮಾನ ಇಲಾಖೆಯು ಗುರುವಾರವೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿತ್ತು. ಆದರೆ, ಮಳೆಯಲ್ಲೂ ಭಕ್ತರ ಉತ್ಸಾಹ ಕುಗ್ಗಲಿಲ್ಲ.ಪುರಿ ಜಗನ್ನಾಥ ದೇವಾಲಯದಿಂದ ಸುಮಾರು 2.6 ಕಿ.ಮೀ ದೂರವಿರುವ ಗುಂಡೀಚಾ ದೇವಾಲಯದವರೆಗೆ ಭಕ್ತರು ರಥಗಳನ್ನು ಎಳೆದರು. ಗ್ರ್ಯಾಂಡ್ ರಸ್ತೆಯಿಂದ ಮಳೆನೀರನ್ನು ಹೊರಹಾಕಿ, ಮೆರವಣಿಗೆ ಸಾಗಲು ವ್ಯವಸ್ಥೆ ಮಾಡಲಾಗಿತ್ತು.ರಾಜ್ಯ ಪೊಲೀಸರು, ಕೇಂದ್ರೀಯ ಪಡೆಗಳು, ಭಾರತೀಯ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಯ ಸುಮಾರು 13 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.