ಪಶ್ಚಿಮ ಏಷ್ಯಾ ಸಂಘರ್ಷ: ಆರ್ಥಿಕ ಸವಾಲುಗಳ ಬಗ್ಗೆ ಪಾಕ್ ಪ್ರಧಾನಿ ಷರೀಫ್ ಎಚ್ಚರಿಕೆ
ಇಸ್ಲಾಮಾಬಾದ್: ಪಶ್ಚಿಮ ಏಷ್ಯಾದಲ್ಲಿ (ಮಧ್ಯಪ್ರಾಚ್ಯ) ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ದೇಶದ ಆರ್ಥಿಕತೆಗೆ ಅಪಾಯ ಎದುರಾಗಬಹುದು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಎಚ್ಚರಿಸಿದ್ದಾರೆ.ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಉಂಟಾಗಬಹುದಾದ ಸಂಭಾವ್ಯ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸಿದ್ಧರಾಗಿರುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರ

ಇಸ್ಲಾಮಾಬಾದ್: ಪಶ್ಚಿಮ ಏಷ್ಯಾದಲ್ಲಿ (ಮಧ್ಯಪ್ರಾಚ್ಯ) ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ದೇಶದ ಆರ್ಥಿಕತೆಗೆ ಅಪಾಯ ಎದುರಾಗಬಹುದು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಎಚ್ಚರಿಸಿದ್ದಾರೆ.ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಉಂಟಾಗಬಹುದಾದ ಸಂಭಾವ್ಯ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸಿದ್ಧರಾಗಿರುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಉಭಯ ದೇಶಗಳ(ಅಮೆರಿಕ–ಇರಾನ್) ನಡುವಿನ ಉದ್ವಿಗ್ನತೆ ದೇಶದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಪರಿಶೀಲಿಸಲು ಪ್ರಧಾನಿ ಷರೀಫ್ ನೇತೃತ್ವದಲ್ಲಿ ಗುರುವಾರ ಉನ್ನತ ಮಟ್ಟದ ಸಭೆ ಜರುಗಿತು.ಸಭೆಯಲ್ಲಿ ಮಿತವ್ಯಯ ಮತ್ತು ವೆಚ್ಚ ಕಡಿತ ಕ್ರಮಗಳ ಕುರಿತಾದ ವರದಿ ಮಂಡಿಸಲಾಯಿತು. ಜಾಗತಿಕ ಅನಿಶ್ಚಿತತೆ ಇರುವುದರಿಂದ, ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸಿದ್ಧರಾಗಿರಬೇಕು ಎಂದು ಸೂಚಿಸಿದ ಪ್ರಧಾನಿ, ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಾಗುವುದರಿಂದ ದೇಶದ ಆರ್ಥಿಕತೆಯ ಮೇಲೆಯೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.ಫೆಬ್ರುವರಿಯ ಅಂತ್ಯದಲ್ಲಿ ಅಮೆರಿಕ–ಇರಾನ್ ನಡುವೆ ಸಂಘರ್ಷ ಆರಂಭವಾದ ಬಳಿಕ ದೇಶದಲ್ಲಿ ಜಾರಿಗೆ ತರಲಾಗಿದ್ದ 'ಮಿತವ್ಯಯ ಅಭಿಯಾನ'ಕ್ಕೆ ಸಾರ್ವಜನಿಕರು ನೀಡಿದ ಸಹಕಾರವನ್ನು ಪ್ರಧಾನಿ ಶ್ಲಾಘಿಸಿದ್ದಾರೆ.ಅಲ್ಲದೇ ಮುಂದೆ ಕೂಡ ಆರ್ಥಿಕತೆಯನ್ನು ಉಳಿಸಲು ದೇಶದಾದ್ಯಂತ ಮಿತವ್ಯಯದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಬೇಕು ಎಂದು ಅವರು ಕರೆ ನೀಡಿದ್ದಾರೆ.ಸದ್ಯ ದೇಶದ ಆರ್ಥಿಕತೆ ಸ್ಥಿರವಾಗಿದೆ. ಅಗತ್ಯ ಬಿದ್ದರೆ ಸಕಾಲದಲ್ಲಿ ಕ್ರಮ ಕೈಗೊಳ್ಳಲು ಸಮಗ್ರ ಕಾರ್ಯತಂತ್ರ ರೂಪಿಸಲಾಗುವುದು. ಪಶ್ಚಿಮ ಏಷ್ಯಾದಲ್ಲಿ ಯುದ್ಧ ಪ್ರಾರಂಭವಾದ ಬಳಿಕ ಇಂಧನ ಬೆಲೆಗಳನ್ನು ನಿಭಾಯಿಸಲು ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಿದ ಅವರು, ಸರ್ಕಾರದ ಸಮಯೋಚಿತ ಮತ್ತು ಪರಿಣಾಮಕಾರಿ ಕಾರ್ಯತಂತ್ರಗಳು ದೇಶದ ಇಂಧನ ಪೂರೈಕೆ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸುವಂತೆ ಮಾಡಿವೆ ಎಂದಿದ್ದಾರೆ.ಮುಂದುವರಿದು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಇಂಧನವನ್ನು ಉಳಿಸುವ ರಾಷ್ಟ್ರೀಯ ಅಭಿಯಾನಕ್ಕೆ ಸಾರ್ವಜನಿಕರು ನೀಡಿದ ಸಹಕಾರವನ್ನು ಅವರು ಶ್ಲಾಘಿಸಿದ್ದಾರೆ. ಅಲ್ಲದೇ ತೈಲ ಬೆಲೆ ಏರಿಕೆಯಿಂದ ಸಾಮಾನ್ಯ ಜನರಿಗೆ, ಬೈಕ್ ಸವಾರರಿಗೆ, ರಿಕ್ಷಾ ಚಾಲಕರಿಗೆ ತೊಂದರೆಯಾಗದಂತೆ ಸಬ್ಸಿಡಿಗಳ ಮೂಲಕ ಸರ್ಕಾರ ನೆರವು ನೀಡಿದೆ ಎಂದೂ ಹೇಳಿದ್ದಾರೆ.ಇಂಧನ ಕೊರತೆಯ ಕುರಿತಾದ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಸದ್ಯಕ್ಕೆ ಅಗತ್ಯವಿರುವಷ್ಟು ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಇದೆ. ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.