ಬೆಳಗಾವಿ| ರೈತರ ಹೋರಾಟಕ್ಕೆ ಯಶಸ್ಸು; ಧರಣಿ ಸತ್ಯಾಗ್ರಹ ಹಿಂದಕ್ಕೆ
ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡ ತಮಗೆ ನ್ಯಾಯಯುತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮತ್ತೊಮ್ಮೆ ವರದಿ ಕಳುಹಿಸಲು ಅಧಿಕಾರಿಗಳು ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ಬೆಳಗಾವಿ ಉತ್ತರ ವಲಯದ ಕಚೇರಿ ಆವರಣದಲ್ಲಿ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ರೈತರ

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡ ತಮಗೆ ನ್ಯಾಯಯುತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮತ್ತೊಮ್ಮೆ ವರದಿ ಕಳುಹಿಸಲು ಅಧಿಕಾರಿಗಳು ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ಬೆಳಗಾವಿ ಉತ್ತರ ವಲಯದ ಕಚೇರಿ ಆವರಣದಲ್ಲಿ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ರೈತರು ಶುಕ್ರವಾರ ರಾತ್ರಿ ಹಿಂದಕ್ಕೆ ಪಡೆದಿದ್ದಾರೆ.‘ಜಲಾಶಯದ ಹಿನ್ನೀರಿನಲ್ಲಿ ಸುಮಾರು 400 ಎಕರೆ ಜಮೀನು ಹೋಗಿದೆ. ನಮಗೆ ಪರಿಹಾರ ನೀಡುವ ವಿಚಾರವಾಗಿ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದರು. ಇದನ್ನು ಖಂಡಿಸಿ ಕಚೇರಿ ಆವರಣದಲ್ಲೇ ವಾಸ್ತವ್ಯ ಹೂಡಿ ಧರಣಿ ಆರಂಭಿಸಿದ್ದೆವು. ಈಗ ಆಗಿರುವ ತಪ್ಪು ಸರಿಪಡಿಸಿ, ನಮಗೆ ನ್ಯಾಯಯುತ ಪರಿಹಾರ ಕೊಡುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ಹಾಗಾಗಿ ಧರಣಿ ಹಿಂದಕ್ಕೆ ಪಡೆದಿದ್ದೇವೆ’ ಎಂದು ರೈತ ಮುಖಂಡ ಬಾಳೇಶ ಮಾವನೂರೆ ತಿಳಿಸಿದರು.ಹೋರಾಟಕ್ಕೆ ಯಶಸ್ಸು ಸಿಕ್ಕ ಹಿನ್ನೆಲೆಯಲ್ಲಿ ರೈತರು ವಿಜಯೋತ್ಸವ ಆಚರಿಸಿದರು.ತಮ್ಮ ಬೇಡಿಕೆ ಈಡೇರಿಸುವಂತೆ ಮಾಸ್ತಿಹೊಳಿ, ಗುಡಗನಟ್ಟಿ, ಬೀರನಹೊಳಿ, ಸುತಗಟ್ಟಿ, ಜಾರಕಿಹೊಳಿ ಮತ್ತಿತರ ಗ್ರಾಮಗಳ ರೈತರು ಮಂಗಳವಾರದಿಂದ ನೀರಾವರಿ ನಿಗಮದ ಕಚೇರಿ ಆವರಣದಲ್ಲೇ ವಾಸ್ತವ್ಯ ಹೂಡಿದ್ದರು. ಇಲ್ಲಿಯೇ ಅಡುಗೆ ಮಾಡಿ ಸವಿದರು. ಜತೆಗೆ ತಮ್ಮ ಜಾನುವಾರುಗಳು ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು.ಈ ಮಧ್ಯೆ ಬುಧವಾರ, ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ರೈತರೊಂದಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನಡೆಸಿದ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಧರಣಿ ಮುಂದುವರಿಸಿದ್ದರು.ಹೋರಾಟದ ವೇಳೆ ಕಿರುನಾಟಕ ಪ್ರದರ್ಶಿಸಿ ಗಮನಸೆಳೆದಿದ್ದರು.