5 ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಅಪಘಾತ
ಬೆಂಗಳೂರು: ನಗರದ 53 ಸಂಚಾರ ಪೊಲೀಸ್ ಠಾಣೆಗಳ ಪೈಕಿ ಐದು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂಬುದು ‘ಅಸ್ತ್ರಂ’ ಆ್ಯಪ್ ಮೂಲಕ ‘ಸಂಚಾರ ಪೊಲೀಸ್ ನಿರ್ವಹಣಾ ಕೇಂದ್ರ’ದ ಅಧಿಕಾರಿಗಳು ನಡೆಸಿದ ವಿಶ್ಲೇಷಣೆಯಿಂದ ಗೊತ್ತಾಗಿದೆ.ನಗರದಲ್ಲಿ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ಸಂಚಾರ ವಿಭಾಗ ಗಳಿದ್ದು, ಕೆ.ಆರ್.ಪುರ, ಯಲಹಂಕ, ಕಾಮಾಕ

ಬೆಂಗಳೂರು: ನಗರದ 53 ಸಂಚಾರ ಪೊಲೀಸ್ ಠಾಣೆಗಳ ಪೈಕಿ ಐದು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂಬುದು ‘ಅಸ್ತ್ರಂ’ ಆ್ಯಪ್ ಮೂಲಕ ‘ಸಂಚಾರ ಪೊಲೀಸ್ ನಿರ್ವಹಣಾ ಕೇಂದ್ರ’ದ ಅಧಿಕಾರಿಗಳು ನಡೆಸಿದ ವಿಶ್ಲೇಷಣೆಯಿಂದ ಗೊತ್ತಾಗಿದೆ.ನಗರದಲ್ಲಿ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ಸಂಚಾರ ವಿಭಾಗ ಗಳಿದ್ದು, ಕೆ.ಆರ್.ಪುರ, ಯಲಹಂಕ, ಕಾಮಾಕ್ಷಿಪಾಳ್ಯ, ಚಿಕ್ಕಜಾಲ, ದೇವನಹಳ್ಳಿ ಏರ್ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂಬುದು ಪತ್ತೆಯಾಗಿದೆ.ಎರಡು ವರ್ಷಗಳ ಹಿಂದೆ ಸಂಚಾರ ಪೊಲೀಸರು ‘ಅಸ್ತ್ರಂ’ ಆ್ಯಪ್ ಪರಿಚಯಿಸಿದ್ದರು. ಆ ಆ್ಯಪ್ ಮೂಲಕ 2018ರ ಜನವರಿಯಿಂದ 2026ರ ಮಾರ್ಚ್ವರೆಗೆ 53 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಅಪಘಾತಗಳ ಸಂಖ್ಯೆಯನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ವಿಶ್ಲೇಷಣೆಯ ವೇಳೆ ಯಾವ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂಬುದನ್ನು ಪತ್ತೆಹಚ್ಚಲಾಗಿದೆ.ಪೂರ್ವ ವಿಭಾಗದ ಕೆ.ಆರ್. ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು ವರ್ಷದಲ್ಲಿ 1,937 ಅಪಘಾತಗಳು ಸಂಭವಿಸಿವೆ. ಹೆಚ್ಚಿನ ಅಪಘಾತಗಳು ಸಂಭವಿಸಿದ ಪಟ್ಟಿಯಲ್ಲಿ ಕೆ.ಆರ್.ಪುರ ಸಂಚಾರ ಠಾಣೆಯು ಮೊದಲ ಸ್ಥಾನದಲ್ಲಿದೆ. ನಂತರ, ಉತ್ತರ ವಿಭಾಗದ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ 1,863 ಅಪಘಾತಗಳು ಸಂಭವಿಸಿದ್ದು, ಎರಡನೇ ಸ್ಥಾನದಲ್ಲಿದೆ.ಬೆಂಗಳೂರಿನಲ್ಲಿ 1.25 ಕೋಟಿ ನೋಂದಾಯಿತ ವಾಹನಗಳು ಇವೆ.ಪ್ರತಿನಿತ್ಯ ಅಂದಾಜು 2,100 ಹೊಸ ವಾಹನಗಳು ನಗರದ ರಸ್ತೆಗೆ ಇಳಿಯುತ್ತಿವೆ. ರಸ್ತೆಗಳಲ್ಲಿರುವ ಗುಂಡಿ ಗಳು ಹಾಗೂ ಅವೈಜ್ಞಾನಿಕ ರಸ್ತೆ, ಕಿರುಸೇತುವೆಗಳಿಂದ ನಗರದಲ್ಲಿ ನಿತ್ಯ 20ಕ್ಕೂ ಹೆಚ್ಚು ಅಪಘಾತ ಸಂಭವಿಸುತ್ತಿವೆ. ನಿತ್ಯ ಇಬ್ಬರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಕೆ.ಆರ್.ಪುರ, ಯಲಹಂಕ, ದೇವನಹಳ್ಳಿ, ಕಾಮಾಕ್ಷಿಪಾಳ್ಯ ಭಾಗದಲ್ಲಿ ಪ್ರತಿನಿತ್ಯ ವಾಹನ ದಟ್ಟಣೆ ಸಮಸ್ಯೆ ಬಾಧಿಸುತ್ತಲೇ ಇದೆ. ರಸ್ತೆಗಳಲ್ಲಿ ಗುಂಡಿಗಳ ಹಾವಳಿ, ಅವೈಜ್ಞಾನಿಕ ರಸ್ತೆ ತಿರುವುಗಳು, ಬೀದಿದೀಪಗಳ ಅವ್ಯವಸ್ಥೆಯಿಂದಾಗಿ ಈ ಭಾಗದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂದು ಮೂಲಗಳು ಹೇಳಿವೆ.ಬಳ್ಳಾರಿ ರಸ್ತೆಯಲ್ಲಿ ನಿತ್ಯವೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ದ್ವಿಚಕ್ರ ವಾಹನ, ಕೆಎಸ್ಆರ್ಟಿಸಿ– ಬಿಎಂಟಿಸಿ ಬಸ್, ಲಾರಿ, ಟಿಪ್ಪರ್, ಕಾರು, ಜೀಪು, ಕಸ ಸಂಗ್ರಹಿಸುವ ಲಾರಿ ನಡುವೆ ಅಪಘಾತಗಳು ಸಂಭವಿಸುತ್ತಲೇ ಇವೆ. ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆಯೂ ಸಾವು–ನೋವಿಗೆ ಕಾರಣವಾಗುತ್ತಿದೆ. ಸ್ಕೈವಾಕ್ ಇಲ್ಲದ ಸ್ಥಳಗಳಲ್ಲಿ ರಸ್ತೆ ದಾಟುವ ಪಾದಚಾರಿಗಳಿಗೆ ವಾಹನಗಳು ಡಿಕ್ಕಿ ಹೊಡೆಯುತ್ತಿವೆ. ಈ ಎಲ್ಲ ಕಾರಣಕ್ಕೆ ಉತ್ತರ ಸಂಚಾರ ವಿಭಾಗದ ಯಲಹಂಕ, ಚಿಕ್ಕಜಾಲ, ದೇವನಹಳ್ಳಿ ಸಂಚಾರ ಠಾಣಾ ವ್ಯಾಪ್ತಿಯ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ ಎಂದು ಸಂಚಾರ ಪೊಲೀಸರು ಅಂದಾಜಿಸಿದ್ದಾರೆ.ಅಪಘಾತಗಳ ಜತೆಗೆ ಈ ಐದು ಠಾಣಾ ವ್ಯಾಪ್ತಿಯಲ್ಲಿ ಅತಿವೇಗದ ಚಾಲನೆ, ಕೆಂಪು ದೀಪವಿದ್ದರೂ ಸಿಗ್ನಲ್ ದಾಟುವುದು, ಅಡ್ಡಾದಿಡ್ಡಿ ವಾಹನ ಚಾಲನೆ, ನಿರ್ಬಂಧಿತ ರಸ್ತೆಗಳಲ್ಲಿ ವಾಹನಗಳ ನಿಲುಗಡೆ, ಹೆಲ್ಮೆಟ್ ರಹಿತ ದ್ವಿಚಕ್ರ ವಾಹನಗಳ ಚಾಲನೆಗೆ ಸಂಬಂಧಿಸಿದಂತೆಯೂ ಹೆಚ್ಚಿನ ಸಂಖ್ಯೆ ಯಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗುತ್ತಿವೆ ಎಂದು ಮೂಲಗಳು ಹೇಳಿವೆ.ಆ್ಯಪ್: ದಟ್ಟಣೆಯ ನೈಜ ಮಾಹಿತಿ‘ರಸ್ತೆ ದಟ್ಟಣೆಯ ನೈಜ ಮಾಹಿತಿಯನ್ನು ‘ಅಸ್ತ್ರಂ’ ಆ್ಯಪ್ ಒದಗಿಸುತ್ತದೆ. ತಮ್ಮ ವ್ಯಾಪ್ತಿಯ ಸಂಚಾರ ಸಮಸ್ಯೆಗಳನ್ನು ಸಾರ್ವಜನಿಕರೇ ಈ ಆ್ಯಪ್ ಮೂಲಕ ಅಪ್ಲೋಡ್ ಮಾಡಬಹುದು. ನಗರದಲ್ಲಿ ಯಾವುದಾದರೂ ದೊಡ್ಡ ಕಾರ್ಯಕ್ರಮ ನಡೆದರೆ ಅಂತಹ ಸಂದರ್ಭದಲ್ಲಿ ಆ್ಯಪ್ನಲ್ಲೇ ಪರ್ಯಾಯ ಮಾರ್ಗದ ಮಾಹಿತಿಯೂ ದೊರೆಯುತ್ತದೆ. ಅಲ್ಲದೇ ಯಾವ ಭಾಗದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂಬುದನ್ನೂ ಈ ಆ್ಯಪ್ ಮೂಲಕವೇ ತಿಳಿದುಕೊಂಡು ರಸ್ತೆ ಅವ್ಯವಸ್ಥೆ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.2018ರ ಜನವರಿಯಿಂದ 2026ರ ಮಾರ್ಚ್ ಅಂತ್ಯದವರೆಗೆ ನಗರದ ನಾಲ್ಕು ಸಂಚಾರ ವಿಭಾಗಗಳಲ್ಲಿ ಸಂಭವಿಸಿದ ಅಪಘಾತಗಳು35,497 – ಅಪಘಾತಗಳ ಸಂಖ್ಯೆ6,169 – ಗಂಭೀರ ಅಪಘಾತಗಳು (ಶೇ 17)29,328 – ಸಣ್ಣ ಪ್ರಮಾಣದ ಅಪಘಾತಗಳು (ಶೇ 83)ಆರು ವರ್ಷಗಳಲ್ಲಿ ಹೆಚ್ಚು ಅಪಘಾತ ಪ್ರಕರಣಗಳು ಸಂಭವಿಸಿದ ಸಂಚಾರ ಠಾಣಾ ವ್ಯಾಪ್ತಿಠಾಣೆ;ಅಪಘಾತಗಳ ಸಂಖ್ಯೆಕೆ.ಆರ್.ಪುರ (ಪೂರ್ವ ವಿಭಾಗ);1,937ಯಲಹಂಕ (ಉತ್ತರ ವಿಭಾಗ);1,863ಕಾಮಾಕ್ಷಿಪಾಳ್ಯ (ಪಶ್ಚಿಮ ವಿಭಾಗ);1,570ಚಿಕ್ಕಜಾಲ (ಉತ್ತರ);1,446ದೇವನಹಳ್ಳಿ (ಉತ್ತರ);1,431ಒಟ್ಟು;8,247