ಕೊಪ್ಪಳ| ಭ್ರಷ್ಟಾಚಾರದ ಪ್ರಕರಣ; ಕೆಆರ್ಐಡಿಎಲ್ ಇಇ ಚಿಂಚೋಳಿಕರ್ ಅಮಾನತು
ಕೊಪ್ಪಳ: ಭ್ರಷ್ಟಾಚಾರದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಂಧನದಲ್ಲಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್ಐಡಿಎಲ್) ಇಲ್ಲಿನ ಕಾರ್ಯನಿರ್ವಾಹಕ ಎಂಜಿನಿಯರ್ ಝರಣಪ್ಪ ಎಂ. ಚಿಂಚೋಳಿಕರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಶುಕ್ರವಾರ ಆದೇಶಿಸಲಾಗಿದೆ.ಚಿಂಚೋಳಿಕರ್ 96 ಸರ್ಕಾರಿ ಕಾಮಗಾರಿಗಳನ್ನು ಮಾಡದೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಿಲ್ಲಾ

ಕೊಪ್ಪಳ: ಭ್ರಷ್ಟಾಚಾರದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಂಧನದಲ್ಲಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್ಐಡಿಎಲ್) ಇಲ್ಲಿನ ಕಾರ್ಯನಿರ್ವಾಹಕ ಎಂಜಿನಿಯರ್ ಝರಣಪ್ಪ ಎಂ. ಚಿಂಚೋಳಿಕರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಶುಕ್ರವಾರ ಆದೇಶಿಸಲಾಗಿದೆ.ಚಿಂಚೋಳಿಕರ್ 96 ಸರ್ಕಾರಿ ಕಾಮಗಾರಿಗಳನ್ನು ಮಾಡದೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿಸಿ ಸಿಇಒ ಅವರ ಸಹಿ ನಕಲು ಮಾಡಿ ಭ್ರಷ್ಟಾಚಾರ ಎಸಗಿದ್ದರು ಎಂದು ಕರ್ನಾಟಕ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ನಕಲಿ ಜಿಪಿಎಸ್ ಫೋಟೊಗಳನ್ನು ಸೃಷ್ಟಿಸಿ ₹62.84 ಕೋಟಿ ಭ್ರಷ್ಟಾಚಾರ ಎಸಗಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ. ಮೂರು ದಿನಗಳ ಹಿಂದೆಯಷ್ಟೇ ಲೋಕಾಯುಕ್ತ ಪೊಲೀಸರು ಚಿಂಚೋಳಿಕರ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.ಜಿಲ್ಲೆಯ ಅಳವಂಡಿ ಸಮೀಪದ ನಿಲೋಗಿಪುರ ಉಪ ವಿಭಾಗದಲ್ಲಿ ಕೆಲಸ ಮಾಡುವಾಗ ಚಿಂಚೋಳಿಕರ್ ಆರ್ಥಿಕ ಅವ್ಯವಹಾರ ನಡೆಸಿದ್ದು, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 68, ಯಲಬುರ್ಗಾ ಕ್ಷೇತ್ರದಲ್ಲಿ ನಾಲ್ಕು, ಗಂಗಾವತಿ ಕ್ಷೇತ್ರದಲ್ಲಿ ಐದು, ಕನಕಗಿರಿ ಕ್ಷೇತ್ರದಲ್ಲಿ 19 ಕಾಮಗಾರಿಗಳನ್ನು ಮಾಡದೆ ಭ್ರಷ್ಟಾಚಾರ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ಇದೆಲ್ಲವನ್ನೂ ಪರಿಗಣಿಸಿ ಸೇವೆಯಿಂದ ಅಮಾನತು ಮಾಡಿ ಕೆಆರ್ಐಡಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶಗೌಡ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.