ದಸರಾ ಉದ್ಘಾಟನೆಗೆ ಸುತ್ತೂರು ಶ್ರೀ ಆಹ್ವಾನಿಸಿದರೆ ಖುಷಿ: ಯತೀಂದ್ರ ಸಿದ್ದರಾಮಯ್ಯ
ಮೈಸೂರು: ‘ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆಗೆ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಆಹ್ವಾನಿಸಿದರೆ ನನಗೆ ಬಹಳ ಖುಷಿಯಾಗುತ್ತದೆ’ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.ಇಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನಮ್ಮ ವ

ಮೈಸೂರು: ‘ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆಗೆ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಆಹ್ವಾನಿಸಿದರೆ ನನಗೆ ಬಹಳ ಖುಷಿಯಾಗುತ್ತದೆ’ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.ಇಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನಮ್ಮ ವರುಣ ಕ್ಷೇತ್ರದಲ್ಲಿರುವ ಮಠದವರು. ಎಲ್ಲ ಕ್ಷೇತ್ರದಲ್ಲೂ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದರು.‘ಅವರನ್ನು ಆಹ್ವಾನಿಸಬೇಕು ಎಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಯಿತು. ಪ್ರತಿ ವರ್ಷದಂತೆ, ಉದ್ಘಾಟಕರ ಆಯ್ಕೆಯನ್ನು ಸಿಎಂ ವಿವೇಚನೆಗೇ ಬಿಡಲಾಗಿದೆ’ ಎಂದು ತಿಳಿಸಿದರು.‘ಬರಗಾಲ ಪರಿಸ್ಥಿತಿ ಇರುವುದರಿಂದ ದಸರೆಯನ್ನು ಸರಳವಾಗಿ ನಡೆಸಬೇಕು ಎಂಬ ಅಭಿಪ್ರಾಯವಿರುವುದು ಗಮನಕ್ಕಕೆ ಬಂದಿದೆ. ಈಚೆಗೆ ನಡೆದ ಸಭೆಯಲ್ಲಿ, ಮುಂದಿನ ದಿನಗಳಲ್ಲಿ ಮಳೆ ಬರುತ್ತದೆ, ಆದ್ದರಿಂದ ಸರಳ ದಸರಾ ಬೇಡ ಎಂದು ಶಾಸಕರು ಹೇಳಿದರು. ಮುಖ್ಯಮಂತ್ರಿಯೂ ಅದನ್ನು ಅನುಮೋದಿಸಿದ್ದಾರೆ. ಅದ್ದೂರಿಯಾಗಿ ಮಾಡೋಣ ಎಂದಿದ್ದಾರೆ. ಕಂಬಳ ಕ್ರೀಡೆ ಅಯೋಜನೆಗೆ ಬಹುತೇಕ ಶಾಸಕರು ಸಮ್ಮತಿ ಸೂಚಿಸಿದ್ದರು’ ಎಂದರು.‘ಕೆಡಿಪಿ ಸಭೆಯನ್ನು ನಿಯಮಿತವಾಗಿ ನಡೆಸಬೇಕು. ಇನ್ಮುಂದೆ ವಿಳಂಬ ಆಗದಂತೆ ನೋಡಿಕೊಳ್ಳಲಾಗುವುದು. ವಿಧಾನಮಂಡಲ ಅಧಿವೇಶನ ಮುಗಿದ ನಂತರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.‘ಮೈಸೂರು ಮಹಾನಗರಪಾಲಿಕೆ ಚುನಾವಣೆ ವಿಳಂಬವಾಗಿರುವುದು ನಿಜ. ಬಿಎಂಸಿಸಿಯಾಗಿ ಮೇಲ್ದರ್ಜೆಗೇರಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಜನಗಣತಿ ಮುಗಿದ ನಂತರ ಆ ಪ್ರಕ್ರಿಯೆ ಕೈಗೊಳ್ಳುವುದು ಬೇಡ ಎಂದು ರಾಜ್ಯಪಾಲರು ತಡೆದಿದ್ದರಿಂದ ಅಧಿಸೂಚನೆ ಹೊರಬೀಳಲಿಲ್ಲ. ಈಗ, ನಾವು ಜನಗಣತಿ ಆಗುವವರೆಗೂ ನಾವು ಕಾಯುವುದಿಲ್ಲ. ಆದಷ್ಟು ಬೇಗ ನಗರಪಾಲಿಕೆ ಚುನಾವಣೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.