ಕರ್ನಾಟಕ ಜಾನಪದ ವಿಶ್ವವಿದ್ಯಾಲಯ: ಪಿಎಚ್ಡಿ ಸಂದರ್ಶನ ವಿಚಾರದಲ್ಲಿ ಜಟಾಪಟಿ
ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಶಹಜಾನ್ಸಾಬ್ ಮುದಕವಿ ಅವರ ಪಿಎಚ್ಡಿ ಸಂದರ್ಶನ ವಿಚಾರದಲ್ಲಿ ಜಟಾಪಟಿ ನಡೆದಿದ್ದು, ‘ಕುಲಸಚಿವ ಶಿವಶಂಕರ್ ವಿರುದ್ಧ ಮುದಕವಿ ಅವರು ಮಾತನಾಡಿದ್ದಾರೆ’ ಎನ್ನಲಾದ ಸಂಭಾಷಣೆಯ ಆಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ವಿವಿಯ ಕುಲಪತಿ ಪ್ರೊ. ಟಿ.ಎಂ.

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಶಹಜಾನ್ಸಾಬ್ ಮುದಕವಿ ಅವರ ಪಿಎಚ್ಡಿ ಸಂದರ್ಶನ ವಿಚಾರದಲ್ಲಿ ಜಟಾಪಟಿ ನಡೆದಿದ್ದು, ‘ಕುಲಸಚಿವ ಶಿವಶಂಕರ್ ವಿರುದ್ಧ ಮುದಕವಿ ಅವರು ಮಾತನಾಡಿದ್ದಾರೆ’ ಎನ್ನಲಾದ ಸಂಭಾಷಣೆಯ ಆಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ವಿವಿಯ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅವರ ಕಚೇರಿಯಲ್ಲಿ ಇತ್ತೀಚೆಗೆ ನಡೆದಿರುವ ಜಟಾಪಟಿಯ ಸಂಭಾಷಣೆ ಇದಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ವಿಶ್ವವಿದ್ಯಾಲಯದಲ್ಲಿ ವೇತನಕ್ಕಾಗಿ ಅತಿಥಿ ಸಹಾಯಕ ಪ್ರಾಧ್ಯಾಪಕರು ಹಾಗೂ ಹೊರಗುತ್ತಿಗೆ ನೌಕರರು, ಅಹೋರಾತ್ರಿ ಧರಣಿ ಮಾಡುತ್ತಿ್ದ್ದಾರೆ. ಟಿ.ಎಂ. ಭಾಸ್ಕರ್ ಅವರ ಅಧಿಕಾರದ ಅವಧಿಯೂ ಜುಲೈ 18ರಂದು ಮುಗಿಯಲಿದೆ. ಇದರ ನಡುವೆಯೇ ಸಂಭಾಷಣೆಯ ಆಡಿಯೊ ಹರಿದಾಡುತ್ತಿರುವುದು, ಚರ್ಚೆಗೆ ಕಾರಣವಾಗಿದೆ.‘ವಿವಿಯಲ್ಲಿ ನನ್ನ ವಿರುದ್ಧ ನಿರಂತರವಾಗಿ ಪಿತೂರಿ ನಡೆಯುತ್ತಿದೆ. ಸರ್ಕಾರವೇ ನನ್ನ ಅಂಕಪಟ್ಟಿಯ ನೈಜತೆ ಪ್ರಮಾಣ ಪತ್ರ ನೀಡಿದರೂ ಇವರೆಲ್ಲರೂ ಪ್ರಶ್ನಿಸುತ್ತಿದ್ದಾರೆ. ಈಗ, ನನ್ನ ಪಿಎಚ್ಡಿ ಸಂದರ್ಶನವನ್ನು ಏಕೆ ತಡೆಯಲಾಗಿದೆ. ಪಿಎಚ್ಡಿ ಮಾಡಲು ನನ್ನ ಬಳಿ ₹ 5 ಲಕ್ಷ ಹಣವಿಲ್ಲ. ನನ್ನ ಸಂದರ್ಶನ ಆಗಬೇಕು. ಇಲ್ಲದಿದ್ದರೆ, ನಾವು ಜೈಲಿಗೆ ಹೋಗಲು ಸಹ ಸಿದ್ದನಿದ್ದೇನೆ. ಕೊಲೆ ಮಾಡಲು ಹಿಂಜರಿಯುವುದಿಲ್ಲ. ವಿವಿಗೆ ಬೀಗ ಹಾಕುತ್ತೇನೆ. ಪೊಲೀಸರನ್ನೂ ಕರೆಸಿ. ಅವರೂ ನನ್ನನ್ನು ಬಂಧಿಸಲಿ’ ಎಂಬ ಹೇಳಿಕೆಯು ಮುದಕವಿ ಅವರದ್ದು ಎನ್ನಲಾದ ಧ್ವನಿಯಲ್ಲಿದೆ.‘(ಕುಲಪತಿ ಜೊತೆ ಮಾತು) ನನಗೆ ಕಿಮ್ಮತ್ತು ಇಲ್ಲವೇ ? ನಿಮ್ಮನ್ನು ಕುಲಪತಿ ಮಾಡಿಸಿದ್ದೇನೆ. ನೇಮಕಾತಿಯಲ್ಲಿ ಕೋಟಿಗಟ್ಟಲೇ ದುಡ್ಡು ಮಾಡಿಕೊಟ್ಟಿದ್ದೇನೆ. ಸಹಾಯಕ ಕುಲಸಚಿವ ನನಗೆ ಸಂಬಂಧವಿಲ್ಲ. ಆತ ಸಿಂಡಿಕೇಟ್ ಚೇಲಾ ಇದ್ದಾನೆ. ನಾನು ಬಿಡುವುದಿಲ್ಲ. ಪತ್ರಿಕಾಗೋಷ್ಠಿ ಮಾಡುತ್ತೇನೆ. ನನ್ನನ್ನೇ ಮೊದಲು ಬಂಧಿಸಲಿ. ಪತ್ರಿಕೆಯಲ್ಲಿ, ‘ಭ್ರಷ್ಟಾಚಾರದ ವಿಶ್ವವಿದ್ಯಾಲಯ’ ಅಂತಾ ನನ್ನಿಂದಲೇ ಸುದ್ದಿ ಬರಲಿ. ನಾನು ಯಾರನ್ನೂ ಬಿಡುವುದಿಲ್ಲ. ಡಿಡಿಪಿಐ ಅವರನ್ನೇ ನಾನು ಜಾಡಿಸಿ ಒದ್ದಿದ್ದೇನೆ. ಪಿಎಚ್ಡಿ ಸಂದರ್ಶನಕ್ಕೆ ವಾರದಿಂದ ಭಿಕ್ಷೆ ಬೇಡುತ್ತಿದ್ದೇನೆ. ಐದು ನಿಮಿಷದ ಕೆಲಸ. ನನಗೆ ಕಿಮ್ಮತ್ತು ನೀಡುತ್ತಿಲ್ಲ. ನೂರು ತಪ್ಪು ಹುಡುಕಿ, ತಿರಸ್ಕಾರ ಮಾಡುತ್ತಿರುವುದು ಸರಿಯಲ್ಲ. ನನಗೆ ಇಷ್ಟು ನಿಯಮವೇ? ನಾನು ಇರಬೇಕು, ಇಲ್ಲ ಅವನು ಇರಬೇಕು’ ಎಂಬುದು ಆಡಿಯೊದಲ್ಲಿದೆ.ಶಹಜಾನ್ಸಾಬ್ ಮುದಕವಿ, ಸಹಾಯಕ ಕುಲಸಚಿವವಿವಿ ಅಭಿವೃದ್ಧಿಗಾಗಿ ದುಡಿಯುತ್ತಿರುವ ನನ್ನ ವಿರುದ್ಧ ನಿರಂತರವಾಗಿ ಪಿತೂರಿ ಮಾಡಲಾಗುತ್ತಿದೆ. ಅದರ ಮುಂದುವರಿದ ಭಾಗವಿದು. ನಾನು ಯಾವುದೇ ತಪ್ಪು ಮಾಡಿಲ್ಲ. ಇದೊಂದು ನನ್ನ ವಿರುದ್ಧದ ಅಪಪ್ರಚಾರ.ತನಿಖೆಗೆ ಆಗ್ರಹ: ‘ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮ ನೇಮಕಾತಿ ಹಾಗೂ ಇತರೆ ಅಕ್ರಮಗಳ ಬಗ್ಗೆ ಸಹಾಯಕ ಕುಲಸಚಿವರೇ ಆಡಿಯೊದಲ್ಲಿ ಹೇಳಿದ್ದಾರೆ. ‘ನೇಮಕಾತಿಯಲ್ಲಿ ಕೋಟಿಗಟ್ಟಲೇ ದುಡ್ಡು ಮಾಡಿಕೊಟ್ಟಿದ್ದೇನೆ’ ಎಂದು ಮುದಕವಿಯವರು, ಕುಲಪತಿಗೆ ಹೇಳಿರುವುದು ಗಂಭೀರ ವಿಷಯ. ಈ ಬಗ್ಗೆ ತನಿಖೆಯಾಗಬೇಕು. ಕುಲಪತಿ, ಕುಲಸಚಿವ, ಸಹಾಯಕ ಕುಲಸಚಿವ ಹಾಗೂ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕು’ ಎಂದು ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಶಿವಸೋಮಪ್ಪ ನಿಟ್ಟೂರು ಆಗ್ರಹಿಸಿದ್ದಾರೆ.‘ಮುದಕವಿ ಅವರು ಪಿಎಚ್ಡಿಗೆ ಅರ್ಹತೆ ಹೊಂದಿಲ್ಲ. ಈ ಬಗ್ಗೆ ಕುಲಸಚಿವರಿಗೆ ದೂರು ನೀಡಿದ್ದೇವೆ. ವಿಚಾರಣೆಗೆ ಉಪ ಸಮಿತಿ ರಚಿಸಿ ಕುಲಸಚಿವರು ಆದೇಶ ಮಾಡಿದ್ದಾರೆ’ ಎಂದಿದ್ದಾರೆ.