9 ತಿಂಗಳಾದರೂ ನಡೆಯದ ಜಿಬಿಎ ಸಭೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಜಿಎ) ಪ್ರಕಾರ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಹೇಳುವ ಸಚಿವರು, ಅಧಿಕಾರಿಗಳು ಆ ಕಾಯ್ದೆಯ ಕಡ್ಡಾಯ ಅಂಶವನ್ನೇ ಮರೆತಿದ್ದಾರೆ. ಒಂಬತ್ತು ತಿಂಗಳಾದರೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆ ನಡೆಸಲು ಆಸಕ್ತಿ ತೋರಿಲ್ಲ.ಆಡಳಿತ ವಿಕೇಂದ್ರೀಕರಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ),

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಜಿಎ) ಪ್ರಕಾರ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಹೇಳುವ ಸಚಿವರು, ಅಧಿಕಾರಿಗಳು ಆ ಕಾಯ್ದೆಯ ಕಡ್ಡಾಯ ಅಂಶವನ್ನೇ ಮರೆತಿದ್ದಾರೆ. ಒಂಬತ್ತು ತಿಂಗಳಾದರೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆ ನಡೆಸಲು ಆಸಕ್ತಿ ತೋರಿಲ್ಲ.ಆಡಳಿತ ವಿಕೇಂದ್ರೀಕರಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ), ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನಾಗಿ (ಜಿಬಿಎ) ಮಾಡಿ, ಅದರಡಿ ಐದು ನಗರ ಪಾಲಿಕೆಗಳನ್ನು 2025ರ ಸೆಪ್ಟೆಂಬರ್ 2ರಂದು ರಚಿಸಲಾಯಿತು. ಜಿಬಿಜಿಎಯ ಅಧ್ಯಾಯ–3ರ ಪ್ರಕರಣ 12ರ ಪ್ರಕಾರ, ‘ಜಿಬಿಎ ಅಧ್ಯಕ್ಷರು ಪ್ರತಿ ಮೂರು ತಿಂಗಳಿಗೆ ಕನಿಷ್ಠ ಒಂದು ಬಾರಿ ಜಿಬಿಎ ಸಭೆ ಕರೆಯಬೇಕು’. ಜಿಬಿಎಯ ಮೊದಲ ಸಭೆ 2025ರ ಅಕ್ಟೋಬರ್ 10ರಂದು ನಡೆದಿತ್ತು. ಅದಾದ ನಂತರ, 2026ರ ಜನವರಿ 10ರೊಳಗೆ ಕನಿಷ್ಠ ಒಂದು ಸಭೆ ನಡೆಯಬೇಕಿತ್ತು. ಒಂಬತ್ತು ತಿಂಗಳಾದರೂ ಈ ಬಗ್ಗೆ ಇನ್ನು ಸಿದ್ಧತೆಯೇ ಆರಂಭವಾಗಲಿಲ್ಲ.2025ರ ಅಕ್ಟೋಬರ್ 10ರಂದು ಜಿಬಿಎಯ ಅಧ್ಯಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಮೊದಲ ಸಭೆಯಲ್ಲಿ, ಜಿಬಿಎಗೆ ಅಧಿಕಾರಿಗಳ ನೇಮಕ, ಯೋಜನಾ ಪ್ರಾಧಿಕಾರದ ಜವಾಬ್ದಾರಿಯನ್ನು ನೀಡಲಾಗಿತ್ತು. ಈ ಸಭೆಯಲ್ಲಿ ಇಂದಿನ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಭಾಗವಹಿಸಿರಲಿಲ್ಲ. ಮುಖ್ಯಮಂತ್ರಿಯವರ ಅನುಪಸ್ಥಿತಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬಹುದು ಎಂದು ಕಾಯ್ದೆಯಲ್ಲಿ ಹೇಳಲಾಗಿದ್ದರೂ, 13 ದಿನ ತಡವಾಗಿ ಸಚಿವ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ಕೃಷ್ಣ ಬೈರೇಗೌಡ, ನಂತರದ ಒಂದು ತಿಂಗಳಿನಲ್ಲೂ ಜಿಬಿಎ ಸಭೆ ನಡೆಸುವ ಚಿಂತನೆ ನಡೆಸಿಲ್ಲ. ಆದರೆ, ಜಿಬಿಎ ಕಾರ್ಯಕಾರಿ ಸಭೆಯನ್ನು ಜುಲೈ 3ರಂದು ನಡೆಸಿದ್ದಾರೆ.ಸಭೆಯಲ್ಲಿ ನಿರ್ಧಾರವಾಗುವ ವಿಷಯಗಳ ಅನುಷ್ಠಾನಕ್ಕೆ ಹೆಚ್ಚಿನ ವೇಗ ಸಿಗುತ್ತದೆ ಎಂಬ ಉದ್ದೇಶದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ಸೇರಿದಂತೆ ಹಲವು ಅಧಿಕಾರಿಗಳನ್ನು ಜಿಬಿಎ ಸದಸ್ಯರನ್ನಾಗಿ ಮಾಡಿಕೊಳ್ಳಲು ಕಾಯ್ದೆಗೆ ತಿದ್ದುಪಡಿಯನ್ನೂ ತರಲಾಗಿದೆ. ಆದರೆ, ಸಭೆಯೇ ನಡೆಯದಿದ್ದರೆ ಅಜೆಂಡವಾದರೂ ಏನಿರುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ.ಜಿಬಿಜಿಎಯಂತೆ ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಜಿಬಿಎ ಉಪಾಧ್ಯಕ್ಷ ಸಭೆಯ ಅಧ್ಯಕ್ಷತೆಯನ್ನು ವಹಿಸಬಹುದು. ಬೆಂಗಳೂರು ಅಭಿವೃದ್ಧಿ ಸಚಿವರು ಪದನಿಮಿತ್ತ ಜಿಬಿಎ ಉಪಾಧ್ಯಕ್ಷರಾಗಿದ್ದಾರೆ. ಅವರಿಬ್ಬರ ಅನುಪಸ್ಥಿತಿಯಲ್ಲಿ ಜಿಬಿಎ ಸಭೆಯಲ್ಲಿ ಹಾಜರಿರುವ ಸದಸ್ಯರು ತಾವೇ ಇತರ ಸದಸ್ಯರೊಬ್ಬರನ್ನು ಆಯ್ಕೆ ಮಾಡಿ ಸಭೆಯ ಅಧ್ಯಕ್ಷರನ್ನಾಗಿ ಮಾಡಿ, ಕಲಾಪಗಳನ್ನು ನಡೆಸಬಹುದು. ಆದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಪ್ಪಣೆ ಇಲ್ಲದೆ ಸಭೆ ಕರೆಯುವ ಧೈರ್ಯ ಯಾರಿಗೆ ಎಂಬುದು ಜಿಬಿಎ ಸದಸ್ಯರ ಪ್ರಶ್ನೆ.ಜಿಬಿಎ ಸಭೆ ನಡೆಯದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸ್ಪಂದಿಸಲಿಲ್ಲ.ಕಾಂಗ್ರೆಸ್ಗೆ ಅಭಿವೃದ್ಧಿ ಬೇಕಿಲ್ಲಪದ್ಮನಾಭರೆಡ್ಡಿ ‘ಕಾಂಗ್ರೆಸ್ ಸರ್ಕಾರ ಚುನಾವಣೆಯನ್ನು ಮುಂದೂಡಲೆಂದೇ ಬಿಬಿಎಂಪಿಯನ್ನು ಒಡೆದು ಐದು ನಗರಪಾಲಿಕೆ ಮಾಡಿತ್ತು. ಪ್ರಚಾರ ಹೇಳಿಕೆಗಳಲ್ಲೇ ನಗರದ ಅಭಿವೃದ್ಧಿ ಯೋಜನೆಗಳನ್ನು ತೋರಿಸಲಾಗುತ್ತಿದೆ. ಅನುಷ್ಠಾನದಲ್ಲಿ ಯಾವುದೇ ಉತ್ತರದಾಯಿತ್ವ ಇಲ್ಲದ ಸರ್ಕಾರ ಇದು. ಜಿಬಿಎ ರಚನೆಯಾದ ಮೇಲೆ ಒಂದೇ ಒಂದು ಸಭೆ ನಡೆಸಿ ಕಾಯ್ದೆಯನ್ನೇ ಉಲ್ಲಂಘಿಸಿರುವ ಕಾಂಗ್ರೆಸ್ ಸರ್ಕಾರದ ಸಚಿವರು ಪ್ರತಿ ಬಾರಿ ಮಾತನಾಡುವಾಗ ಕಾಯ್ದೆ ಅನುಷ್ಠಾನದ ಮಾತಾಡುತ್ತಾರೆ. ರಾಜ್ಯದ ಬಜೆಟ್ನಲ್ಲಿ ಎರಡು ವರ್ಷದಿಂದ ತಲಾ ಏಳು ಸಾವಿರ ಕೋಟಿ ರೂಪಾಯಿಗಳನ್ನು ಪ್ರಕಟಿಸಲಾಗಿದ್ದರೂ ಅರ್ಧದಷ್ಟು ಹಣವೂ ಪ್ರತಿ ವರ್ಷ ಬಿಡುಗಡೆ ಆಗಿಲ್ಲ. ಇವರ ಮಾತು ಯಾವುದೂ ಕಾರ್ಯಗತವಾಗುವುದಿಲ್ಲ’ ಎಂದು ಬಿಬಿಎಂಪಿಯ ಮಾಜಿ ಆಡಳಿತ ಪಕ್ಷದ ನಾಯಕ ಪದ್ಮನಾಭರೆಡ್ಡಿ ದೂರಿದರು.ಲಭ್ಯವಾಗದ ಮಾಹಿತಿ 2025ರ ಅಕ್ಟೋಬರ್ 10ರಂದು ನಡೆದ ಜಿಬಿಎಯ ಮೊದಲ ಸಭೆಯ ತೀರ್ಮಾನ ಹಾಗೂ ಸಂಕ್ಷಿಪ್ತ ಟಿಪ್ಪಣಿ ಸಾರ್ವಜನಿಕವಾಗಿ ಇನ್ನೂ ಲಭ್ಯವಾಗಿಲ್ಲ. ಜಿಬಿಜಿಎ ಅಧ್ಯಾಯ–3ರ ಪ್ರಕರಣ– 12ರ 6ನೇ ಅಂಶದಂತೆ ಜಿಬಿಎ ಸಭೆಯ ಎಲ್ಲ ತೀರ್ಮಾನಗಳು ಮತ್ತು ಸಂಕ್ಷಿಪ್ತ ಟಿಪ್ಪಣಿಗಳನ್ನು ದಾಖಲಿಸಬೇಕು. ಸಭೆ ಮುಗಿದ ಮೂರು ದಿನಗಳೊಳಗೆ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಲಾಗಿದೆ. ಒಂಬತ್ತು ತಿಂಗಳಾದರೂ ಜಿಬಿಎ ಸಭೆಯ ಮಾಹಿತಿಯನ್ನು ಪ್ರಕಟಿಸುವ ಯಾವ ವ್ಯವಸ್ಥೆಯೂ ಜಿಬಿಎ ವೆಬ್ಸೈಟ್ನಲ್ಲಿ ಆಗಿಲ್ಲ ಅಥವಾ ಇನ್ಯಾವುದೇ ಸಂಪರ್ಕಜಾಲದಲ್ಲೂ ಮಾಹಿತಿಗಳು ಸಾರ್ವಜನಿಕರಿಗೆ ಲಭ್ಯವಾಗಿಲ್ಲ.