ವಾಂಗ್ಚೂಕ್ ತಂದೆ ಮನವೊಲಿಸಿ ಉಪವಾಸ ಕೊನೆಗೊಳಿಸಿದ್ದ ಇಂದಿರಾ: ಸೋನಿಯಾ ಮೆಲುಕು
ನವದೆಹಲಿ: ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಬಯಸಿದ್ದು, ಈ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.ಸೋನಿಯಾ ಅವರ ನಿರ್ದೇಶನ ಮೇರೆಗೆ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಇಂದು(ಶುಕ್ರವಾರ) ಜಂತರ್ ಮಂತರ್ಗೆ ತೆರಳಿ ವಾ

ನವದೆಹಲಿ: ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಬಯಸಿದ್ದು, ಈ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.ಸೋನಿಯಾ ಅವರ ನಿರ್ದೇಶನ ಮೇರೆಗೆ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಇಂದು(ಶುಕ್ರವಾರ) ಜಂತರ್ ಮಂತರ್ಗೆ ತೆರಳಿ ವಾಂಗ್ಚೂಕ್ ಅವರನ್ನು ಭೇಟಿ ಮಾಡಿ ಉಪವಾಸ ಕೈಬಿಡುವಂತೆ ಮನವಿ ಮಾಡಿದ್ದಾರೆ.ಗುರವಾರ ನಡೆದ ಸಿಪಿಪಿ ಸಭೆಯಲ್ಲಿ ವಾಂಗ್ಚೂಕ್ ಅವರಿಗೆ ಬೆಂಬಲ ನೀಡಲು ಬಯಸಿರುವುದಾಗಿ ಸೋನಿಯಾ ಅವರು ಹೇಳಿದಾಗ, ಪಕ್ಷದ ಹಲವು ನಾಯಕರು ಇದರ ಬಗ್ಗೆ ನಿರಾಸಕ್ತಿ ಹೊಂದಿದ್ದರು ಎಂದು ವರದಿಯಾಗಿದೆ.ನಂತರ ಪಕ್ಷದ ಮನವೊಲಿಸಲು ಸೋನಿಯಾ ಗಾಂಧಿ ಅವರು, 1984ರಲ್ಲಿ ವಾಂಗ್ಚೂಕ್ ತಂದೆ ಸೋನಮ್ ವಾಂಗ್ಯಾಲ್ ಅವರು ನಡೆಸಿದ ಹೋರಾಟ ಮತ್ತು ಆ ಸಂದರ್ಭ ಇಂದಿರಾ ಗಾಂಧಿ ಅವರು ನಡೆದುಕೊಂಡ ರೀತಿಯನ್ನು ನೆನಪಿಸಿದ್ದಾರೆ.ಲಡಾಖ್ ಜನರಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ಕೋರಿ ಸೋನಮ್ ವಾಂಗ್ಯಾಲ್ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ವಿಷಯ ತಿಳಿದ ಇಂದಿರಾ ಗಾಂಧಿ ಅವರು ಸ್ವತಃ ಅಲ್ಲಿಗೆ ತೆರಳಿ ವಾಂಗ್ಯಾಲ್ ಅವರನ್ನು ಮನವೊಲಿಸಿ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆ ಮಾಡಿದ್ದರು.ಅದೇ ವರ್ಷ ಅಕ್ಟೋಬರ್ನಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯಾಗಿತ್ತು. ಅದಾಗ್ಯೂ, 1989ರಲ್ಲಿ ರಾಜೀವ್ ಗಾಂಧಿ ಸರ್ಕಾರವು ಲಡಾಖ್ನ ಪ್ರಮುಖ ಸಮುದಾಯಗಳಿಗೆ ಎಸ್ಟಿ ಸ್ಥಾನಮಾನವನ್ನು ನೀಡಿತ್ತು.ತಂದೆಯ ದಾರಿ ಹಿಡಿದ ಮಗ: ತಂದೆಯಂತೆ ಸೊನಮ್ ವಾಂಗ್ಚೂಕ್ ಅವರು ರಾಜಕೀಯದಲ್ಲಿ ಯಾವುದೇ ಆಸಕ್ತಿ ಹೊಂದಿದವರಲ್ಲ. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಅವರು, ಲಡಾಖ್ನ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ತಮ್ಮ ಜೀವವನ್ನೇ ಮುಡಿಪಾಗಿಟ್ಟದ್ದವರು.1988ರಲ್ಲಿ ‘ಲಡಾಕ್ನ ವಿದ್ಯಾರ್ಥಿ ಶಿಕ್ಷಣ ಮತ್ತು ಸಾಂಸ್ಕೃತಿಕ ಚಳವಳಿ’(SECMOL ) ಸಂಸ್ಥೆಯನ್ನು ಸ್ಥಾಪಿಸಿದ ಅವರು, ಅದರ ಮೂಲಕ ಶೈಕ್ಷಣಿಕವಾಗಿ ಹಿಂದೆ ಬಿದ್ದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಜೀವನಾಧಾರಿತ ಶಿಕ್ಷಣ ನೀಡುವ ಕೆಲಸ ಮಾಡಿದ್ದಾರೆ. ಅಲ್ಲದೇ ಹಿಮಾಲಯ ಪ್ರದೇಶದಲ್ಲಿ ಬೇಸಿಗೆ ವೇಳೆ ನೀರಿನ ಕೊರತೆಯನ್ನು ನೀಗಿಸಲು ‘ಐಸ್ ಸ್ತೂಪ’ ಎಂಬ ವಿಧಾನವನ್ನು ಕಂಡುಹಿಡಿದಿದ್ದರು. ಇತ್ತೀಚೆಗೆ ಹೋರಾಟದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವ ವಾಂಗ್ಚೂಕ್, ಲಡಾಖ್ ಅನ್ನು ಸಂವಿಧಾನದ ಆರನೇ ಪರಿಚ್ಛೇದದ ವ್ಯಾಪ್ತಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಸೆಪ್ಟೆಂಬರ್ 10ರಂದು ತಮ್ಮ ತಂದೆಯಂತೆ ಉಪವಾಸ ಸತ್ಯಾಗ್ರಹ ಮಾಡಿದ್ದರು. ನಂತರ ಇದೇ ಹೋರಾಟದಲ್ಲಿ ಅವರ ಬಂಧನವೂ ಆಗಿತ್ತು. ಇದೀಗ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಪರಿಹಾರ ಕೋರಿ ಮತ್ತು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ನೀಡುವಂತೆ ಕಳೆದ 20 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.