ಸಾಲುಮಂಟಪಕ್ಕೆ ₹4.90 ಕೋಟಿ ಅನುದಾನ ನೀಡಿದ ಸುಧಾಮೂರ್ತಿ
ಹೊಸಪೇಟೆ (ವಿಜಯನಗರ): ಹಂಪಿಯ ವಿರೂಪಾಕ್ಷ ದೇವಸ್ಥಾನದ ಮುಂಭಾಗದ ಉತ್ತರ ಮತ್ತು ದಕ್ಷಿಣ ಬಜಾರ್ ಸಾಲುಮಂಟಪಗಳ ಮರುಹೊಂದಾಣಿಕೆ ಮಾಡುವುದಕ್ಕಾಗಿ ರಾಜ್ಯಸಭಾ ಸದಸ್ಯರೂ ಆಗಿರುವ ಇನ್ಫೊಸಿಸ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷೆ ಸುಧಾಮೂರ್ತಿ ಅವರು ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹4.90 ಕೋಟಿ ಅನುದಾನ ನೀಡಿದ್ದು, ಶುಕ್ರವಾರ ಹಂಪಿಗೆ ಭೇಟಿ ನೀಡಿ ಕಾಮಗಾರಿಗಳ ಕುರ

ಹೊಸಪೇಟೆ (ವಿಜಯನಗರ): ಹಂಪಿಯ ವಿರೂಪಾಕ್ಷ ದೇವಸ್ಥಾನದ ಮುಂಭಾಗದ ಉತ್ತರ ಮತ್ತು ದಕ್ಷಿಣ ಬಜಾರ್ ಸಾಲುಮಂಟಪಗಳ ಮರುಹೊಂದಾಣಿಕೆ ಮಾಡುವುದಕ್ಕಾಗಿ ರಾಜ್ಯಸಭಾ ಸದಸ್ಯರೂ ಆಗಿರುವ ಇನ್ಫೊಸಿಸ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷೆ ಸುಧಾಮೂರ್ತಿ ಅವರು ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹4.90 ಕೋಟಿ ಅನುದಾನ ನೀಡಿದ್ದು, ಶುಕ್ರವಾರ ಹಂಪಿಗೆ ಭೇಟಿ ನೀಡಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು.ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ ಹಾಗೂ ಇತರ ಹಲವು ಅಧಿಕಾರಿಗಳು ಸುಧಾಮೂರ್ತಿ ಅವರಿಗೆ ಉದ್ದೇಶಿತ ಕಾಮಗಾರಿಗಳ ಮಾಹಿತಿ ನೀಡಿದರು.ಈ ಅನುದಾನದ ಪೈಕಿ ₹4.40 ಕೋಟಿ ವೆಚ್ಚದಲ್ಲಿ ಸಾಲು ಮಂಟಪಗಳ ಮರುಹೊಂದಾಣಿಕೆ ಕಾಮಗಾರಿ ಹಾಗೂ ₹50 ಲಕ್ಷ ವೆಚ್ಚದಲ್ಲಿ ವಿಜಯ ವಿಠ್ಠಲ ದೇವಸ್ಥಾನದ ಕಲ್ಯಾಣ ಮಂಟಪವನ್ನು ಪುನಶ್ಚೇತನಗೊಳಿಸುವ ಕಾಮಗಾರಿ ನಡೆಯಲಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.‘ಸುಧಾಮೂರ್ತಿ ಅವರು ತಮ್ಮ ಸಂಸದರ ನಿಧಿಯಿಂದ ಸದ್ಯ ₹4.40 ಕೋಟಿ ಅನುದಾನ ಮಂಜೂರಾತಿಗೆ ವ್ಯವಸ್ಥೆ ಮಾಡಿದ್ದಾರೆ. ವಿಶ್ವ ಪಾರಂಪರಿಕ ತಾಣ ಹಂಪಿಯ ಬಗ್ಗೆ ಅವರಿಗೆ ಅಪಾರ ಕಾಳಜಿ ಇದೆ, ಮುಂದಿನ ದಿನಗಳಲ್ಲಿ ಇಲ್ಲಿಗೆ ಇನ್ನಷ್ಟು ಅನುದಾನವನ್ನು ನೀಡುವ ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.ಸ್ಮಾರಕಗಳ ರಕ್ಷಣೆಗೆ ಉತ್ತೇಜನ: ‘ಹಂಪಿಯ ಸ್ಮಾರಕಗಳನ್ನು ಸುಸ್ಥಿತಿಯಲ್ಲಿ ಇಡುವುದು ಸವಾಲಿನ ಕೆಲಸದ ಜತೆಗೆ ಅತ್ಯಂತ ಅಗತ್ಯವಾಗಿ ಆಗಬೇಕಾದ ಕೆಲಸವೂ ಹೌದು. ಸುಧಾಮೂರ್ತಿ ಅವರು ತಮ್ಮ ಸಂಸದರ ನಿಧಿಯನ್ನು ಹಂಪಿಗೆ ನೀಡುತ್ತಿರುವುದು ಸ್ಮಾರಕಗಳ ರಕ್ಷಣೆಗೆ ಒದಗಿದ ಬಹುದೊಡ್ಡ ಉತ್ತೇಜನ. ಈ ನಿಧಿಯನ್ನು ಸಮರ್ಥವಾಗಿ ಬಳಸಿಕೊಂಡು 12 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸ ಇದೆ’ ಎಂದು ಎಎಸ್ಐ ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ ತಿಳಿಸಿದರು.