ಪ್ರತಿಭಟನಾ ಸ್ಥಳದಲ್ಲಿ ಅನಗತ್ಯ ನಿಗಾ: ದೆಹಲಿ ಹೈಕೋರ್ಟ್
ನವದೆಹಲಿ : ‘ನೀಟ್ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ನಿರಂತರವಾಗಿ, ವಿವೇಚನೆಯಿಲ್ಲದೆ, ಅನಗತ್ಯವಾಗಿ ಕಣ್ಗಾವಲು ಇಟ್ಟಿದ್ದಾರೆ’ ಎಂದು ಆರೋಪಿಸಿ ಸಲ್ಲಿಕೆಯಾದ ಸಾರ್

ನವದೆಹಲಿ : ‘ನೀಟ್ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ನಿರಂತರವಾಗಿ, ವಿವೇಚನೆಯಿಲ್ಲದೆ, ಅನಗತ್ಯವಾಗಿ ಕಣ್ಗಾವಲು ಇಟ್ಟಿದ್ದಾರೆ’ ಎಂದು ಆರೋಪಿಸಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜುಲೈ 20ರಂದು ವಿಚಾರಣೆಗೆ ಎತ್ತಿಕೊಳ್ಳಲು ದೆಹಲಿ ಹೈಕೋರ್ಟ್ ಸಮ್ಮತಿಸಿದೆ.ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ ಆಯಿಶೀ ಘೋಷ್ ಅವರು ಈ ಸಂಬಂಧ ತುರ್ತು ವಿಚಾರಣೆಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ ವಿಚಾರಣೆ ನಡೆಯಬೇಕಿದ್ದ ಈ ಪ್ರಕರಣದ ವಿಚಾರಣೆಯನ್ನು ಸೋಮವಾರವೇ ಮಾಡುವುದಾಗಿ ನ್ಯಾಯಾಲಯ ಹೇಳಿದೆ.‘ಪೊಲೀಸರು ಮೊಬೈಲ್ ಮತ್ತು ಕ್ಯಾಮೆರಾಗಳನ್ನು ಹಿಡಿದು ಪ್ರತಿಭಟನಾ ಸ್ಥಳದಲ್ಲಿ ತಿರುಗಾಡುತ್ತಿರುವುದು ಮನೋಸ್ಥೈರ್ಯ ಕುಗ್ಗಿಸುವಂತಿತ್ತು ಎಂದು ಪ್ರತಿಭಟನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಇದು ಪ್ರತಿಭಟನಕಾರರ ಖಾಸಗಿತನದ ಹಕ್ಕಿನ ಉಲ್ಲಂಘನೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.‘ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಈ ರೀತಿ ಸಾಮೂಹಿಕ ನಿಗಾ ಇರಿಸುವುದು ಕಾನೂನುಬಾಹಿರ. ಯಾವುದೇ ಅಕ್ರಮ, ಅನುಮಾನಾಸ್ಪದ ಚಟುವಟಿಕೆ ಕಂಡುಬರದ ಹೊರತಾಗಿಯೂ ಪ್ರತಿ ವ್ಯಕ್ತಿಯು ಆಹಾರ ಸೇವಿಸುವುದು, ವಿಶ್ರಾಂತಿ ಪಡೆಯುವುದು, ವೈದ್ಯಕೀಯ ನೆರವು ಪಡೆಯುವುದು ಮತ್ತಿತರ ದೈನಂದಿನ ವೈಯಕ್ತಿಕ ಚಟುವಟಿಕೆಗಳನ್ನು ಚಿತ್ರೀಕರಿಸುವುದು ಸರಿಯಲ್ಲ’ ಎಂದು ಅರ್ಜಿದಾರರ ಪರ ವಕೀಲ ಸುಭಾಶ್ ಚಂದ್ರ ಕೆ.ಆರ್. ಹೇಳಿದ್ದಾರೆ. ‘ಜುಲೈ 20ರವರೆಗೂ ನಾನು ಸಾಯುವುದಿಲ್ಲ’ ನವದೆಹಲಿ (ಪಿಟಿಐ): ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಯನ್ನು ಬೆಂಬಲಿಸಿ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರು ‘ಜುಲೈ 20ರವರೆಗೆ ಯಾವುದೇ ಪರಿಸ್ಥಿತಿಯಲ್ಲಿ ನಾನು ಸಾಯುವುದಿಲ್ಲ’ ಎಂದು ಪುನರುಚ್ಚರಿಸಿದರು. ಅನಿರ್ದಿಷ್ಟಾವಧಿ ಉಪವಾಸದ 20ನೇ ದಿನವಾದ ಶುಕ್ರವಾರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ‘ನಾನು ದೈಹಿಕವಾಗಿ ಕುಗ್ಗಿರಬಹುದು. ಆದರೆ ಮಾನಸಿಕವಾಗಿ ಸದೃಢನಾಗಿದ್ದೇನೆ’ ಎಂದರು. ‘ನೀವು ಕೂಡ ಒಳಗಿನಿಂದ ಹಾಗೂ ಹೊರಗಿನಿಂದ ಸದೃಢರಾಗಿದ್ದೀರಿ ಎಂಬ ಖಾತರಿ ನನಗೆ ಇದೆ. ‘ಸಂಸತ್ತಿನೆಡೆಗೆ ನಡಿಗೆ’ ಹಮ್ಮಿಕೊಂಡಿರುವ ಜುಲೈ 20ರಂದು ಕೂಡ ಇದೇ ಹುಮ್ಮಸ್ಸು ಇರಲಿ. ನಾವೆಲ್ಲ ಒಟ್ಟಾಗಿ ಹೋಗೋಣ ಮತ್ತು ಪ್ರಜಾಪ್ರಭುತ್ವದ ದೇವಾಲಯವೆನಿಸಿದ ಸಂಸತ್ತಿನ ಮುಂದೆ ನಮ್ಮ ಬೇಡಿಕೆಯನ್ನು ಇಡೋಣ’ ಎಂದು ಕರೆ ನೀಡಿದರು. ಸೊನಮ್ ಅವರಂತೆ ಉಪವಾಸ ನಡೆಸುತ್ತಿರುವ ಅಖಿಲ ಭಾರತ ವಿದ್ಯಾರ್ಥಿ ಸಂಘದ ನೇಹಾ ಮನೀಷ್ ಆಮೀನ್ ಅವರ ಆರೋಗ್ಯ ಪರಿಸ್ಥಿತಿಯೂ ಗಂಭೀರವಾಗಿದೆ. ಪರಿಸ್ಥಿತಿ ಹದಗೆಟ್ಟಿದ್ದರೂ ವಾಂಗ್ಚೂಕ್ ಅವರನ್ನು ಬೆಂಬಲಿಸಿ ವಿದ್ಯಾರ್ಥಿಗಳು ಉಪವಾಸ ಮುಂದುವರಿಸಲಿದ್ದಾರೆ ಎಂದು ಸಂಘವು ತಿಳಿಸಿದೆ. ‘ಮೆರವಣಿಗೆಗೆ ನೀವು ಬರದೇ ಯಶಸ್ವಿ ಆಗದೇ ಹೋದರೆ ನಾನು ದೆವ್ವವಾಗಿ ಮತ್ತೆ ಬರುತ್ತೇನೆ’ ಎಂದು ಚಟಾಕಿ ಹಾರಿಸಿದರು. 24 ಗಂಟೆಗಳಲ್ಲಿ ಸೊನಮ್ ಅವರು 350 ಗ್ರಾಂ ತೂಕ ಕಳೆದುಕೊಂಡಿದ್ದು ನಿರಶನ ಆರಂಭವಾದ ಬಳಿಕ ಒಟ್ಟು 9.5 ಕೆ.ಜಿ. ಕಳೆದುಕೊಂಡಿದ್ದಾರೆ. ಪ್ರಮುಖರ ಭೇಟಿ: ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಶುಕ್ರವಾರ ವಾಂಗ್ಚೂಕ್ ಅವರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಕೇಂದ್ರದ ಮಾಜಿ ಸಚಿವ ಅಶ್ವನಿ ಕುಮಾರ್ ಅವರು ಸೊನಮ್ ಅವರನ್ನು ಭೇಟಿಯಾಗಿ ನಿರಶನ ಅಂತ್ಯಗೊಳಿಸಲು ಮಾನವಿ ಮಾಡಿದರು. ‘ಸ್ಪಂದನಶೀಲ ಮತ್ತು ಘನತೆಯುಳ್ಳ ಪ್ರಜಾಪ್ರಭುತ್ವದಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿ ಭಿನ್ನಮತ ವ್ಯಕ್ತಪಡಿಸುವವರನ್ನು ಗೌರವಿಸಬೇಕೇ ವಿನಾ ಯಾವುದೇ ಕಾರಣಕ್ಕೂ ಅವರಿಗೆ ಹಾನಿ ಉಂಟುಮಾಡಬಾರದು’ ಎಂದು ಹೇಳಿದರು.