ರಿಲಯನ್ಸ್ ಕಮ್ಯುನಿಕೇಷನ್ಸ್ ಸಾಲ ವಂಚನೆ ಪ್ರಕರಣ: ಸಿಬಿಐನಿಂದ ಆರೋಪಪಟ್ಟಿ ಸಲ್ಲಿಕೆ
ನವದೆಹಲಿ: ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ₹19,000 ಕೋಟಿಗೂ ಹೆಚ್ಚು ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 'ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್' ಪ್ರಕರಣದಲ್ಲಿ ಸಿಬಿಐ, ಎರಡನೇ ಆರೋಪಪಟ್ಟಿಯನ್ನು ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾದ ಈ ಆರೋಪಪಟ್ಟಿಯಲ್ಲಿ, 'ನೆಟಿಜನ್ ಇಂಜಿನಿಯರಿಂಗ್ ಪ್ರೈವೇಟ್ ಲಿ

ನವದೆಹಲಿ: ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ₹19,000 ಕೋಟಿಗೂ ಹೆಚ್ಚು ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 'ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್' ಪ್ರಕರಣದಲ್ಲಿ ಸಿಬಿಐ, ಎರಡನೇ ಆರೋಪಪಟ್ಟಿಯನ್ನು ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾದ ಈ ಆರೋಪಪಟ್ಟಿಯಲ್ಲಿ, 'ನೆಟಿಜನ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್' (ಹಿಂದಿನ 'ರಿಲಯನ್ಸ್ ಇನ್ಫೋಕಾಮ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್') ಮತ್ತು ಅದರ ಇಬ್ಬರು ನಿರ್ದೇಶಕರಾದ ಅನಿಲ್ ಕಲ್ಯ ಹಾಗೂ ಟುನು ಸಾಹು ಅವರನ್ನು ಅಪರಾಧ ಸಂಚು, ಮತ್ತು ವಂಚನೆ ಆರೋಪಗಳಡಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ ಎಂದು ಸಿಬಿಐ ವಕ್ತಾರ ಹೇಳಿದ್ದಾರೆ.ಸಿಬಿಐ ನಡೆಸಿದ ತನಿಖೆಯ ಆಧಾರದ ಮೇಲೆ ಈ ಎರಡನೇ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಸಾಲದ ಹಣವನ್ನು ಉದ್ದೇಶಪೂರ್ವಕವಾಗಿ ಬೇರೆಡೆಗೆ ವರ್ಗಾಯಿಸಲು ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಸಂಸ್ಥೆಯು 'ನೆಟಿಜನ್ ಇಂಜಿನಿಯರಿಂಗ್' ಅನ್ನು ಒಂದು ಮಧ್ಯವರ್ತಿ ಸಂಸ್ಥೆಯಾಗಿ ಬಳಸಿಕೊಂಡಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇದರಿಂದಾಗಿ ಸಾಲ ನೀಡಿದ ಬ್ಯಾಂಕುಗಳಿಗೆ ನಷ್ಟ ಉಂಟಾಗಿದ್ದು, ಆರೋಪಿಗಳು ಮತ್ತು ಸಂಬಂಧಿತ ಸಂಸ್ಥೆಗಳಿಗೆ ಲಾಭವಾಗಿದೆ ಎಂದು ಹೇಳಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನೀಡಿದ ದೂರಿನ ಆಧಾರದ ಮೇಲೆ ತನಿಖಾ ಸಂಸ್ಥೆಯು ಈ ಪ್ರಕರಣವನ್ನು ದಾಖಲಿಸಿತ್ತು. ಎಫ್ಐಆರ್ ಪ್ರಕಾರ, ಈ ಪ್ರಕರಣದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಒಟ್ಟು ಬಾಕಿ ಮೊತ್ತವು ₹19,694.33 ಕೋಟಿಗಳಷ್ಟಿದೆ ಎಂದು ತಿಳಿಸಿದ್ದಾರೆ.ಇದಕ್ಕೂ ಮುನ್ನ, ಮೇ 29 ರಂದು ಸಿಬಿಐ ಮೊದಲ ಆರೋಪಪಟ್ಟಿಯನ್ನು ಸಲ್ಲಿಸಿತ್ತು. ಇದರಲ್ಲಿ ಆರ್ಕಾಮ್, ಕಂಪನಿಯ ಐವರು ಹಿರಿಯ ಅಧಿಕಾರಿಗಳು ಮತ್ತು 10 ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಒಟ್ಟು 16 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು.