ಇಸ್ರೊ: ರಾಜೀನಾಮೆ, ಸ್ವಯಂ ನಿವೃತ್ತಿ ನಿಯಮ ಮತ್ತಷ್ಟು ಬಿಗಿ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಿಜ್ಞಾನಿಗಳು ಅಕಾಲಿಕವಾಗಿ ಸಂಸ್ಥೆ ತೊರೆಯುವುದನ್ನು ತಡೆಗಟ್ಟುವ ಉದ್ದೇಶದಿಂದ ರಾಜೀನಾಮೆ ಮತ್ತು ಸ್ವಯಂ ನಿವೃತ್ತಿಗೆ ಸಂಬಂಧಿಸಿದ ನಿಯಮ ಗಳನ್ನು ಮತ್ತಷ್ಟು ಬಿಗಿಗೊಳಿಸಿ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.ವಿಜ್ಞಾನಿಗಳ ರಾಜೀನಾಮೆ ಮತ್ತು ಸ್ವಯಂನಿವೃತ್ತಿಗೆ ಸಂಬಂಧಿಸಿದ ಆದೇಶದ ಕುರಿತು ಗುರುವಾರ ಪ್ರತ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಿಜ್ಞಾನಿಗಳು ಅಕಾಲಿಕವಾಗಿ ಸಂಸ್ಥೆ ತೊರೆಯುವುದನ್ನು ತಡೆಗಟ್ಟುವ ಉದ್ದೇಶದಿಂದ ರಾಜೀನಾಮೆ ಮತ್ತು ಸ್ವಯಂ ನಿವೃತ್ತಿಗೆ ಸಂಬಂಧಿಸಿದ ನಿಯಮ ಗಳನ್ನು ಮತ್ತಷ್ಟು ಬಿಗಿಗೊಳಿಸಿ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.ವಿಜ್ಞಾನಿಗಳ ರಾಜೀನಾಮೆ ಮತ್ತು ಸ್ವಯಂನಿವೃತ್ತಿಗೆ ಸಂಬಂಧಿಸಿದ ಆದೇಶದ ಕುರಿತು ಗುರುವಾರ ಪ್ರತಿಕ್ರಿಯಿಸಿದ ಕೇಂದ್ರ ವಿಜ್ಞಾನ ಖಾತೆ ಸಚಿವ ಜಿತೇಂದ್ರ ಸಿಂಗ್, ‘ಆಡಳಿತಾತ್ಮಕ ಕಾರಣಗಳನ್ನು ಪರಿಗಣಿಸಿ, ವಿಜ್ಞಾನಿಗಳು ಮತ್ತಷ್ಟು ಪ್ರಬುದ್ಧವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಿ ಎಂಬ ನಿಟ್ಟಿನಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ. ಅನೇಕ ವಿಜ್ಞಾನಿಗಳು ಬರಬಹುದು, ಹೋಗಬಹುದಾದರೂ ಸಂಸ್ಥೆಯ ಯೋಜನೆಗೆ ಅದರಿಂದ ತೊಂದರೆ ಆಗಬಾರದು ಎಂಬುದು ಇದರ ಉದ್ದೇಶ’ ಎಂದಿದ್ದಾರೆ.ಜುಲೈ 14ರಂದು ಈ ಅಧಿಸೂಚನೆ ಹೊರಡಿಸಲಾಗಿದ್ದು, ಅದರಲ್ಲಿ ಗಗನ ಯಾನ ಹಾಗೂ ಇತರೆ ಪ್ರಮುಖ ಯೋಜನೆಗಳ ಭಾಗವಾಗಿರುವ ‘ಗ್ರೂಪ್ ಎ’ ವಿಜ್ಞಾನಿಗಳು ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಸ್ವಯಂ ನಿವೃತ್ತಿ ಅಥವಾ ರಾಜೀನಾಮೆಗೆ ಮನವಿ ಸಲ್ಲಿಸಿದರೆ ಅವುಗಳನ್ನು ತಕ್ಷಣಕ್ಕೆ ಅನುಮೋದಿಸಬಾರದು ಎಂದು ತಿಳಿಸಲಾಗಿದೆ.ಜತೆಗೆ ಅಂತಹ ಯಾವುದೇ ಮನವಿ ಗಳು ಬಂದರೂ ಅದರ ಸಂಸ್ಥೆಯ ವಿವಿಧ ವಿಭಾಗದ ಕೇಂದ್ರ ನಿರ್ದೇಶಕರು ಹಾಗೂ ಮುಖ್ಯಸ್ಥರ ಸ್ಪಷ್ಟ ಶಿಫಾರಸನ್ನು ಪಡೆದು ಅಂತಿಮ ನಿರ್ಧಾರಕ್ಕಾಗಿ ಇಲಾಖೆಗೆ ಕಳುಹಿಸಿಕೊಡಬೇಕು ಎಂದೂ ಉಲ್ಲೇಖಿಸಲಾಗಿದೆ.ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಪಾಲುದಾರಿಕೆ ಹೆಚ್ಚಾಗಿ ದೇಶದಾದ್ಯಂತ 400ಕ್ಕೂ ಅಧಿಕ ನೋಂದಾಯಿತ ಬಾಹ್ಯಾಕಾಶ ನವೋದ್ಯಮಗಳು ತಲೆ ಎತ್ತಿರುವಂತೆಯೇ ಸರ್ಕಾರದ ಈ ಕ್ರಮ ಮಹತ್ವ ಪಡೆದಿದೆ.ಇತ್ತ, ಎಷ್ಟು ವಿಜ್ಞಾನಿಗಳು ಇಸ್ರೊ ತೊರೆದಿದ್ದಾರೆ ಎಂಬುದರ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲವಾದರೂ ಕಳೆದ ಒಂದು ವರ್ಷದಲ್ಲಿ ನೂರಕ್ಕೂ ಅಧಿಕ ಹಿರಿಯ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳು ಇಸ್ರೊ ತೊರೆದಿದ್ದಾರೆ ಎಂದು ಕೆಲವು ವರದಿಗಳಿಂದ ತಿಳಿದಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260717-51-1126015332