ಮಂಡ್ಯ: ನಿವೃತ್ತ ಪ್ರಾಧ್ಯಾಪಕ ಶ್ರೀನಿವಾಸ್ಗೆ ಹ.ಕ.ರಾಜೇಗೌಡ ಪ್ರಶಸ್ತಿ ಪ್ರದಾನ
ಮಂಡ್ಯ: ‘ಇತಿಹಾಸಕಾರ ಎಂ.ವಿ. ಶ್ರೀನಿವಾಸ್ ಅವರು ಬರೆದ ಕಾದಂಬರಿಗಳು ಹೆಚ್ಚು ಜನಪ್ರಿಯವಾಗಿವೆ. ಅವರು ಪ್ರಶಸ್ತಿಗಾಗಿ ಲಾಬಿ ಮಾಡುವುದನ್ನು ನೋಡಿಲ್ಲ. ವಿದ್ವಾಂಸರೇ ಇವರನ್ನು ಆಯ್ಕೆ ಮಾಡಿರುವ ನಿದರ್ಶನಗಳಿವೆ’ ಎಂದು ಬೆಂಗಳೂರಿನ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (ಐ.ಸಿ.ಎಚ್.ಆರ್) ಪ್ರಾದೇಶಿಕ ನಿರ್ದೇಶಕ ಎಸ್.ಕೆ. ಅರುಣಿ ಹೇಳಿದರು.ನಗರದ ಕೆ.ವ

ಮಂಡ್ಯ: ‘ಇತಿಹಾಸಕಾರ ಎಂ.ವಿ. ಶ್ರೀನಿವಾಸ್ ಅವರು ಬರೆದ ಕಾದಂಬರಿಗಳು ಹೆಚ್ಚು ಜನಪ್ರಿಯವಾಗಿವೆ. ಅವರು ಪ್ರಶಸ್ತಿಗಾಗಿ ಲಾಬಿ ಮಾಡುವುದನ್ನು ನೋಡಿಲ್ಲ. ವಿದ್ವಾಂಸರೇ ಇವರನ್ನು ಆಯ್ಕೆ ಮಾಡಿರುವ ನಿದರ್ಶನಗಳಿವೆ’ ಎಂದು ಬೆಂಗಳೂರಿನ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (ಐ.ಸಿ.ಎಚ್.ಆರ್) ಪ್ರಾದೇಶಿಕ ನಿರ್ದೇಶಕ ಎಸ್.ಕೆ. ಅರುಣಿ ಹೇಳಿದರು.ನಗರದ ಕೆ.ವಿ. ಶಂಕರಗೌಡ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್. ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 3ನೇ ವರ್ಷದ ಹ.ಕ. ರಾಜೇಗೌಡ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಶ್ರೀನಿವಾಸ್ ಅವರು ‘ಮಸ್ತಾನಿ’ ಮತ್ತು ‘ರತ್ನಾಕರ’ ಎಂಬ ಜನಪ್ರಿಯ ಕಾದಂಬರಿಗಳನ್ನು ಬರೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ಇತಿಹಾಸ ಪ್ರಾಧ್ಯಾಪಕರಾಗಿದ್ದ ಇವರು ಹಲವು ಮೌಲಿಕ ಸಂಶೋಧನಾ ಕೃತಿಗಳನ್ನು ಮತ್ತು ಪ್ರಸಿದ್ಧ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಇತಿಹಾಸದ ಸಂಶೋಧನೆಯನ್ನು ನೋಡುವುದಾದರೆ ಸ್ಥಳೀಯ ಮಟ್ಟದ ನಾಯಕರ ಬಗ್ಗೆ ತಿಳಿಸಿಕೊಡುತ್ತಿದ್ದರು. ಅದರಲ್ಲಿ ಮುಖ್ಯವಾಗಿ ನಾಡಪ್ರಭು ಮತ್ತು ಪಾಳೆಗಾರರ ಬಗ್ಗೆ ತಿಳಿಸಿಕೊಡುತ್ತಿದ್ದ ಪರಿ ಮರೆಯುವಂತಿಲ್ಲ ಎಂದು ಶ್ಲಾಘಿಸಿದರು.ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಮಾತನಾಡಿ, 'ಹ.ಕ. ರಾಜೇಗೌಡರು ನಮ್ಮ ನಡುವೆ ಇಲ್ಲ, ಅವರ ಬರಹಗಳು ಹಾಗೂ ಕೊಟ್ಟಂತಹ ಮಾರ್ಗದರ್ಶನಗಳು ಜೀವನಕ್ಕೆ ಅಮೂಲ್ಯ ಎನಿಸಿವೆ. ಇಂತಹ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿಯನ್ನು ಶ್ರೀನಿವಾಸ್ ಅವರಿಗೆ ಕೊಟ್ಟಿರುವುದು ಸಮರ್ಥನೀಯವಾಗಿದೆ. ಶ್ರೀನಿವಾಸ್ ಅವರ ವ್ಯಕ್ತಿತ್ವವು ಕೂಡ ಬೇರೊಬ್ಬರಿಗೆ ಪ್ರೇರಣೆಯಾಗಿದೆ’ ಎಂದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ‘ಮಂಡ್ಯ ಜಿಲ್ಲೆಗೆ ಹಲವು ಆಯಾಮಗಳಲ್ಲಿ ಸಾಹಿತ್ಯಿಕ ಮಜಲುಗಳನ್ನು ತಂದುಕೊಟ್ಟ ಹ.ಕ. ರಾಜೇಗೌಡ ಅವರು ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ. ಇವರು ಜಾನಪದ, ಇತಿಹಾಸ ಅನೇಕ ಕೃತಿಗಳನ್ನು ಹೊರತಂದು ಅನೇಕ ಕಥೆಗಳನ್ನೂ ಹೊರತಂದಿದ್ದಾರೆ. ಅವರ ಹೆಸರಿನಲ್ಲಿ ಕುಟುಂಬದವರು ದತ್ತಿ ಇರಿಸಿದ್ದಾರೆ. ನಾನು ಕಂಡ ಅಪರೂಪದ ಅತ್ಯುತ್ತಮ ಅಧ್ಯಾಪಕ ಹಾಗೂ ಬಹುಭಾಷಿಕರಾದ ಎಂ.ವಿ. ಶ್ರೀನಿವಾಸ್ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆ ಎನಿಸಿದೆ’ ಎಂದು ತಿಳಿಸಿದರು.3ನೇ ವರ್ಷದ ಹ.ಕ. ರಾಜೇಗೌಡ ಪ್ರಶಸ್ತಿಯನ್ನು ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಎಂ.ವಿ. ಶ್ರೀನಿವಾಸ್ ಅವರಿಗೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹ.ಕ. ರಾಜೇಗೌಡರ ಮಗಳು ಹಾಗೂ ಮೈಸೂರು ಜಾನಪದ ವಸ್ತು ಸಂಗ್ರಹಾಲಯದ ನಿರ್ದೇಶಕಿ ಚೇತನಾ, ಕರ್ನಾಟಕ ಸಂಘದ ನಿರ್ದೇಶಕ ಕೋಣನಹಳ್ಳಿ ಜಯರಾಮು ಭಾಗವಹಿಸಿದ್ದರು.